ಆಗೊಮ್ಮೆ ಈಗೊಮ್ಮೆ ನಾನು ಹೆಣ್ಣುಮಕ್ಕಳು ಬರೆದ ಕವಿತೆಗಳನ್ನು, ಕತೆಗಳನ್ನು ಓದುತ್ತಿರುತ್ತೇನೆ. ಪುರುಷರ ಕವಿತೆಗಳಲ್ಲಿ ರಸಿಕತೆ, ರೊಚ್ಚು, ಸಮಾಜ ವಿಶ್ಲೇಷಣೆ ಇತ್ಯಾದಿ ಇದ್ದರೆ, ಸ್ತ್ರೀಯರ ಕವಿತೆಗಳಲ್ಲಿ ಚಿಟ್ಟೆ, ಹೂವು, ಝರಿ, ನೀರು… ಹೀಗೆ ಕೋಮಲವಾದ ಪ್ರತಿಮೆಗಳು! ಎಲ್ಲಕ್ಕಿಂತ ಹೆಚ್ಚು ಪುನರಾವರ್ತನೆ ಆಗುವ ಚಿತ್ರ ರೆಕ್ಕೆ ಅಗಲಿಸಿ ಹಾರುವ ಹಕ್ಕಿ. ಬಹುಶಃ ಹೆಣ್ಣಿನ ಸ್ವಾತಂತ್ರ್ಯದ ಅಪೇಕ್ಷೆಯೇ ಈ ರೀತಿಯ ಕವಿತೆಗಳನ್ನು, ಬಂಧನದ ಶೃಂಖಲೆಯನ್ನು ಕಿತ್ತೂಗೆಯುವ ಅದಮ್ಯ ಹಂಬಲವನ್ನು ಸಂಕೇತಿಸುತ್ತದೆ. ಸ್ತ್ರೀವಾದ ಎಂದೆಲ್ಲ ಹಣೆಪಟ್ಟಿ ಹಚ್ಚಿಕೊಳ್ಳದಿದ್ದರೂ ಹೆಣ್ಣುಮಕ್ಕಳು ತಮ್ಮ ಪಾಡಿಗೆ “ಜಸ್ಟ್ ಲೈಕ್ ದಟ್’ ತಿರುಗಾಡಲೂ ಸ್ವಾತಂತ್ರ್ಯ ಇಲ್ಲ ಎಂದು ಪ್ರತಿಪಾದಿಸುವುದೇ ಈ ಲೇಖನದ ಉದ್ದೇಶ. ಹಾಗೆ ನೋಡುವುದಿದ್ದರೆ, “ಹಾಗೆ ಸುಮ್ಮನೆ’ ತಿರುಗಾಡುವುದಕ್ಕೆ ಹೆಣ್ಣಿಗೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಇಲ್ಲ. ಅವಳಿಗೆ ಯಾವುದಾದರೂ ಉದ್ದೇಶ ಬೇಕು. ಉದ್ಯೋಗ, ಶಾಪಿಂಗ್, ಬ್ಯೂಟಿ ಪಾರ್ಲರ್, ದಿನಸಿ ಖರೀದಿ, ಮಾಲ್, ನೆಂಟರೊಂದಿಗೆ ಸಿನೆಮಾ, ಮಕ್ಕಳೊಂದಿಗೆ ಪಾರ್ಕ್, ಗೆಳತಿಯೊಂದಿಗೆ ದೇವಸ್ಥಾನ… ಹೀಗೆ.
ನಾನು ಕೆಲಸ ಮುಗಿಸಿ ಮನೆಗೆ ಬರುವ ಹೊತ್ತಿಗೆ ಸಂಜೆಗತ್ತಲಾಗಿರುತ್ತದೆ. ಬೀದಿಬದಿಯಲ್ಲಿ ಬೈಕ್ ಮೇಲೆ ವಿರಾಜಮಾನರಾಗಿ, ಗೂಡಂಗಡಿ ಬಳಿಯ “ಅಡ್ಡೆ’ಯಲ್ಲಿ ಮಾತನಾಡುತ್ತಲೋ ಗಂಡು ಹೈಕಳಿರುತ್ತಾರೆ. ನಾನು, ನನ್ನಂಥವರು ಇನ್ನಷ್ಟು ಮುದುರಿಕೊಂಡು ನಮ್ಮ ಫೈಲ್, ಬ್ಯಾಗ್‌ಗಳನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಂಡು ಧಾವಿಸುತ್ತಿರುತ್ತೇವೆ. (ಮನೆಗೆ ಹೋಗಿ ಮಾಡಲು ಕೆಲಸಗಳೂ ಇರುತ್ತವೆನ್ನಿ).
ಉದ್ದೇಶವೇ ಇಲ್ಲದೆ ಹಾಗೆ ಸುತ್ತಲು, ಕೆಲಸವೇ ಇಲ್ಲದೆ ಹರಟೆ ಹೊಡೆಯಲು, “ಸುಮ್ಮನೆ’ ಪೇಟೆಯಿಂದ ನಗರದ ಹೊರ ವಲಯಕ್ಕೆ ವಾಕ್ ಮಾಡಲು ನನಗೆ ಆಸೆ. ಅದು ಖಂಡಿತ ಸಾಧ್ಯ ಇಲ್ಲ ಎಂದು ನನಗೆ ಗೊತ್ತು. ಖ್ಯಾತ ತೆಲುಗು ಕವಯಿತ್ರಿ ವೋಲ್ಗಾ ಬರೆದಂತೆ ನಡು ರಾತ್ರಿಯಲ್ಲಿ ಬೀದಿಗಳು ಹೇಗೆ ಇರುತ್ತವೆ ಎಂದು ಒಬ್ಬಳೇ ನೋಡಲು ನನಗೂ ಆಸೆ ಇದೆ. ನಮ್ಮ ಬೀದಿಯಲ್ಲಿ ಬೆಳಗ್ಗೆ ಗಂಡ-ಹೆಂಡತಿ ಜತೆಯಾಗಿ ವಾಕ್ ಮಾಡುತ್ತಿರುತ್ತಾರೆ. ಸಂಜೆ ಸಿನೆಮಾ, ಶಾಪಿಂಗ್ ಮುಗಿಸಿ ಬರುತ್ತಿರುತ್ತಾರೆ. ಹಾಗೆ ಸುಮ್ಮನೇ ಅಡ್ಡಾಡುವ ಮಹಿಳೆಯರನ್ನು ನೋಡಿಲ್ಲ. ಅವರು ತರಕಾರಿ ಬ್ಯಾಗ್ ಹೊತ್ತುಕೊಂಡೋ, ಮಗುವನ್ನು ಟ್ಯೂಷನ್‌ನಿಂದ ಕರೆ ತರಲೋ, ಡ್ಯಾನ್ಸ್ ಪ್ರೋಗ್ರಾಮ್‌ಗೆ ಮಗಳನ್ನು ಕರೆದೊಯ್ಯಲೋ- ಹೀಗೆಲ್ಲ ಇರುತ್ತಾರೆ. ಇವು ಬಿಟ್ಟರೆ ಹೆಣ್ಣುಮಕ್ಕಳು ಹೆಚ್ಚಾಗಿ ಕಾಣಸಿಗುವುದು ಮಾಲ್‌ಗಳಲ್ಲಿ, ದೇವಸ್ಥಾನಗಳಲ್ಲಿ, ಬ್ಯೂಟಿಪಾರ್ಲರ್‌ಗಳಲ್ಲಿ, ಸ್ಕೂಲುಗಳ ಆವರಣಗಳಲ್ಲಿ!
ದುಡ್ಡು ಹೆಚ್ಚಾದಷ್ಟೂ ತಿರುಗಾಡುವ ಸುಖ ಕಡಿಮೆಯಾಗುವುದು ವಿಪರ್ಯಾಸ. ನಾವು ಪುಟ್ಟಮಕ್ಕಳಿದ್ದಾಗ ದೂರದೂರುಗಳಿಗೆ ಹೋಗಲು ನಮ್ಮ ಮನೆಯಯವರ ಬಳಿ ಹಣವಿರುತ್ತಿರಲಿಲ್ಲ. ಹಾಗಿದ್ದರೂ “ತಿರುಗಾಡುವ ಸುಖ’ವನ್ನು ನಾವು ಮನಸೋ ಇಚ್ಛೆ ಅನುಭವಿಸಿದ್ದೆವು. ಗುಡ್ಡ, ಕೆರೆ, ಗದ್ದೆ, ತೋಪು… ಹೀಗೆ. ನೇರಳೆ ಹಣ್ಣು, ಕುಂಟಲ ಹಣ್ಣು, ಕೇಪಳ, ಗೇರು ಎಂದೆಲ್ಲ ಗುಡ್ಡ ಅಲೆಯುತ್ತಿದ್ದೆವು. ಮಾವಿನಕಾಯಿ ಮರಕ್ಕೆ ಕಲ್ಲೆಸೆಯುತ್ತಿದ್ದೆವು. ಎರಡು ಮೈಲಿ ದೂರದ ಶಾಲೆಯಿಂದ ಒಬ್ಬಂಟಿಯಾಗಿ ಆಳೆತ್ತರದ ಹುಲ್ಲು ಬೆಳೆದ ರಸ್ತೆಯಲ್ಲಿ ಬರುತ್ತಿದ್ದೆವು. ಅದೇ ಈಗಿನ ಮಕ್ಕಳನ್ನು ಸ್ಕೂಲಿನಿಂದ ಮನೆಗೆ ಸ್ಕೂಲು ವ್ಯಾನಿನಲ್ಲಿ ತಪ್ಪಿದರೆ ನಮ್ಮದೇ ವಾಹನದಲ್ಲಿ ಕೊಂಡೊಯ್ಯುತ್ತೇವೆ. ಯಾಕೆಂದರೆ, ಕಾಲ ಹಾಗಿದೆ. ಮಕ್ಕಳ ಅಮಾಯಕತೆಯನ್ನು ಕಾಪಾಡುವ ಮನಸ್ಥಿತಿ ಜಗತ್ತಿಗೆ ಈಗ ಇಲ್ಲ.
ಮಹಿಳೆಯರು “ಸುಮ್ಮನೇ’ ತಿರುಗಾಡುವ ಕಾಲ ಯಾವಾಗ ಬರಬಹುದು? “”ಯಾಕೆ ಸುಮ್ಮನೆ ಅಲ್ಲೆಲ್ಲ ಸುತ್ತಾಡ್ತಿ? ಅಲ್ಲೆಲ್ಲಾ ಹೋಗಬೇಡ. ಅಪಾಯ” ಇತ್ಯಾದಿ ಮುಚ್ಚಟೆ , ಭಯ ಇರದೆ ನೆಮ್ಮದಿಯಾಗಿ ಎಂದಿಗೆ ಉಸಿರಾಡಬಹುದು? ಈಗಂತೂ ಮಹಿಳೆಯರ ಕಾಳಜಿ ಎಂದರೆ ಅವರ ಮಾನದ ಕಾಳಜಿಯೇ.
ತಿರುಗಾಟದ ಮೇಲಿನ ಸ್ತರವೇ ಪ್ರವಾಸ. ಒಬ್ಬಳೇ ಭಾರತದ ಉದ್ದಗಲಕ್ಕೂ ಬೀಡುಬೀಸಾಗಿ ಹೋಗುವ ಧೈರ್ಯ ನನಗಂತೂ ಇಲ್ಲ. ಸಂಸಾರ ಸಮೇತ ಕೆಲವೊಮ್ಮೆ ನಾವು ಗೋವಾ, ಊಟಿ, ಕೊಡೈಕನಾಲ್ ಎಂದೆಲ್ಲ ಹೋಗಿದ್ದೇವೆ. ಹೀಗೆ ಪ್ರವಾಸ ಹೋಗುವಾಗಲೆಲ್ಲ ಕಿಟಿಕಿ ಬದಿಯಲ್ಲಿ ಕಾಣುವ ಸ್ತಬ್ಧ ಚಿತ್ರಗಳಂತೆ ಜನಜೀವನದ ಹರಿವು ನನ್ನನ್ನು ಚಕಿತಗೊಳಿಸುತ್ತಿರುತ್ತದೆ. ಇನ್ನು ಮನೆಯಲ್ಲಿ ಬೋರಾಗಿದ್ದು ಸಾಲದೆಂಬಂತೆ ಅಲ್ಲಿಯೂ ಮತ್ತದೇ ಡಬ್ಬ ಪುಳಿಯೋಗರೆ, ಚಿತ್ರಾನ್ನ ಎಂದೆಲ್ಲ ಮನೆಯನ್ನೇ ಹೊತ್ತುಕೊಂಡು ಟ್ರೆçನಿನಲ್ಲಿ ಬರುವ ಫ್ಯಾಮಿಲಿಗಳು ಕಾಣ ಸಿಗುತ್ತವೆ. ನನ್ನ ಪ್ರಕಾರ ಪ್ರವಾಸವೆಂದರೆ, ಪೊರೆ ಕಳೆದು ಜೀವನವನ್ನು ಹೊಸದಾಗಿ ಕಾಣುವ ಯತ್ನ. ಪ್ರವಾಸ ಹೋಗಿ ಬಂದ ನಂತರವೂ ಆ ಪ್ರಫುಲ್ಲತೆ, ನೆನಪಿನ ಬುತ್ತಿ ಆರು ತಿಂಗಳಿಗೋ, ಒಂದು ವರ್ಷಕ್ಕೋ ಜೀವನವನ್ನು ಸಹನೀಯವಾಗಿರಿಸುತ್ತದೆ. ಯಂಡಮೂರಿ ವೀರೇಂದ್ರನಾಥ್ ಅವರು ಒಂದು ಕಡೆ ಬರೆಯುತ್ತಾರೆ : ಹನಿಮೂನ್ ಎನ್ನುವುದು ನವ ದಂಪತಿಗಳಿಗೆ ಕಡ್ಡಾಯ ಎಂದು. ಮಧುಚಂದ್ರದ ರಸನಿಮಿಷಗಳು ಜೀವನದುದ್ದಕ್ಕೂ ಸಣ್ಣಪುಟ್ಟ ಇರಿಸುಮುರಿಸುಗಳ ನಡುವೆಯೂ ಅವರ ಸಂಬಂಧವನ್ನು ಕಾಪಿಡುವುದಂತೆ. ಆಮೇಲೆ ದೋಸೆ ಸರಿಯಾಗಿ ಮೇಲೇಳುತ್ತಿಲ್ಲವೆಂದೋ, ತೊಗರಿ ಬೇಳೆ ಮುಗಿದಿದೆಯೆಂದೋ, ಹೀಗೆಲ್ಲ ದೈನಂದಿನ ಜಂಜಾಟ ಇದ್ದೇ ಇದೆ. ಇನ್ನು ಮನೆ, ಮಠ ಬಿಟ್ಟು ಅಲೆಮಾರಿಯಂತೆ ಹಿಮಾಲಯಕ್ಕೋ, ಹೃಷೀಕೇಶಕ್ಕೋ ಹೋಗಿ ಬಿಡಬೇಕು ಎಂದು ಹೆಚ್ಚಿನವರಿಗೂ ಒಂದಲ್ಲ ಒಂದು ಸಲ ಅನಿಸಿಯೇ ಇರುತ್ತದೆ. ಹಾಗೆಂದು ಬೇರುಗಳನ್ನು ಕಿತ್ತುಕೊಂಡು ಹೋಗಲು ಅಂಜಿಕೆ, ಭಯ. ನನಗೆ ಆಗಾಗ ಅನಿಸುತ್ತಿರುತ್ತದೆ, ಅಲೆಮಾರಿಗಳು ಒಂದು ರೀತಿಯ ಸಂತರು ಎಂದು. ಬದುಕು ವಿಸ್ತಾರವಾಗಲು, ಅರಿವು ಪರಿಪಕ್ವವಾಗಲು ಪ್ರವಾಸ, ತಿರುಗಾಟ ಬೇಕು. “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಅಲ್ಲವೆ?
– ಜಯಶ್ರೀ ಬಿ. ಕದ್ರಿ