ಗುಡ್ ನೈಟ್ ಇದು ಸೊಳ್ಳೆಗಳಿಗೆ ರಾಮಬಾಣ ಎಂದು ರೂಪದರ್ಶಿಗಳು ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿಯ ಮದುವೆಯ ನಡುವೆ ಬಂದ ಜಾಹೀರಾತಿನಲ್ಲಿ ಹೇಳಿದೊಡನೆ ನೋಡುತ್ತ ಕುಳಿತಿದ್ದ ಸವಿತಕ್ಕನ ಕೆನ್ನೆ ಮೇಲೆ ಕುಳಿತ ಸೊಳ್ಳೆ ಕಚ್ಚಿ ರಕ್ತಹೀರಿ ಹಾರಿ ಹೋಯಿತು. ತಮ್ಮ ಕೆನ್ನೆಗೆ ತಾವೇ ಹೊಡೆದುಕೊಳ್ಳುತ್ತ, “ನಾಳೇನೇ ಹೋಗಿ ಗುಡ್‌ನೈಟ್ ತರಬೇಕು. ಇದಕ್ಕೆ ಪಾಠ ಕಲಿಸಬೇಕು’ ಎನ್ನುತ್ತ, ತಮ್ಮ ಮಲ್ಲಿಗೆ ಕಟ್ಟುವ ಕೆಲಸ ಮುಂದುವರಿಸಿದರು. ಅದಾಗಲೇ ಮಳೆ ಸುರಿದಿತ್ತು. ಮೊದಲ ಮಳೆಗೆ ಸಂತಸಗೊಂಡ ಮಲ್ಲಿಗೆ ಬಳ್ಳಿಗಳ ತುಂಬ ಹೂ ಬಿಟ್ಟಿದ್ದವು. ಸಂಜೆಯಾದರೆ ಧಾರಾವಾಹಿ ನೋಡುತ್ತ ಕೂತಿದ್ದ ಸ್ತ್ರೀವಾದಿಗಳಿಗೆ ಮತ್ತೂಂದು ಕೆಲಸ ಕೈಸೇರಿತ್ತು.
ಸಿದ್ಧತೆಯಾಗದೇ ಮಳೆ ಸುರಿದ ಕಾರಣವೋ, ಸ್ವಚ್ಛತೆಯ ಕೊರತೆಯ ಕಾರಣವೋ ಸೊಳ್ಳೆಗಳಂತೂ ಹೇರಳವಾಗಿದ್ದವು. ತಮ್ಮ ಸಂಗೀತಕ್ಕೆ, ಆಗಾಗ ಮಾನವನಿಂದಲೂ ಚಪ್ಪಾಳೆ, ಉದ್ಗಾರಗಳ ಸಾಥ್ ತರಿಸುತ್ತಿದ್ದವು. ಚಪ್ಪಾಳೆ-ಬೊಬ್ಬೆ ಹೊಡೆದು, ರಾತ್ರಿ ನಿದ್ದೆ ಬಾರದೆ ಹೊರಳಾಡಿ ಮರುದಿನವೇ ಹೋಗಿ ಗುಡ್‌ನೈಟ್, ಒಡಮಾಸ್, ಮಸ್ಕಿಟೋ ಬ್ಯಾಟ್, ಜೈವಿಕ ಸೊಳ್ಳೆನಾಶಕ ಹೊಗೆ ಬತ್ತಿಗಳನ್ನು ತಂದು ಹಚ್ಚಿಟ್ಟು ತಮ್ಮನ್ನು ತಾವು ರಕ್ಷಿಸಿದರೂ ತಮ್ಮ ಮನೆಸುತ್ತ ಶುಚಿಯಾಗಿಡ್ಬೇಕು ಅನ್ನೋ ಒಂದು ಬುದ್ಧಿ ಮಾತ್ರ ನಮಗ್ಯಾವತ್ತೂ ಬರುವುದಿಲ್ಲ. ಬಂದರೂ ಮಾಡುವವರ ಸಂಖ್ಯೆ ಕಡಿಮೆ. ಊರೂರು ಸುತ್ತಿ ಶುಚಿ ಮಾಡುತ್ತೇವೆ; ಸಂಘಸಂಸ್ಥೆಗಳ ಹೆಸರಲ್ಲಿ ಒಂದೆರಡು ದಿನ, ಹಲವು ಸೆಲ್ಫಿ-ಫೊಟೋಗ್ರಾಫರ್‌ಗಳ ಸಮ್ಮುಖದಲ್ಲಿ, ಆದರೆ, ನಮ್ಮ ಮನೆಯ ಪರಿಸರ?
ಒಂದು ಮಳೆ ಸುರಿದರೆ ಸಾಕು, ಸಾಂಕ್ರಾಮಿಕ ರೋಗಗಳ ಹಾವಳಿ ಶುರು. ಸೊಳ್ಳೆ ಗಾಳಿನೀರಿನಿಂದಲೂ ಹರಡುವ ಈ ರೋಗಗಳ ಮೂಲ ಕಾರಣ ಮಾಲಿನ್ಯ. ಹಣವಿಲ್ಲದೆ ಸಾಲಸೋಲ ಮಾಡಿ ಬದುಕುವ ಜೀವಗಳಿಗೆ ರೋಗಗಳ ಆಗಮನದ ನಂತರದ ಮುಕ್ತಿ ಸರಕಾರಿ ಆಸ್ಪತ್ರೆಯಿಂದಲೇ. ಅಲ್ಲಿ ಹೋದರೆ ವೈದ್ಯರ ಕೊರತೆ. ಮುಗಿಯದ ಸಮಸ್ಯೆ. ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯ, ಹಂದಿ ಜ್ವರ, ಇಲಿ ಜ್ವರ, ಆನೆಕಾಲು ರೋಗ- ಹೀಗೆ ಇರುವ ಎಲ್ಲಾ ಪ್ರಾಣಿಗಳ ಹೆಸರಿನಲ್ಲೂ , ಹೆಸರಿಲ್ಲದ ಅನಾಮಿಕ ಜ್ವರಗಳೂ ಭೂಮಿಯ ಮೇಲೆ ತಾಂಡವವಾಡುತ್ತಿರುತ್ತವೆ. ಒಂದು ಸಲ ರೋಗದಿಂದ ಬಳಲಿ ಹೇಗೋ ಚೇತರಿಕೆಯಾಗಿದ್ದರೂ, ಮರುವರ್ಷ ರೋಗಗಳ ಸೀಸನ್ ಎನ್ನಬಹುದಾದ ಮಳೆಗಾಲ ಬಂದರೂ ಮುಂಜಾಗ್ರತೆಯ ಸೋಗು ನಮಗೆ ನಾಟುವುದಿಲ್ಲ.
ನಮ್ಮ ಪರಿಸರವನ್ನು ನಾವು ಶುಚಿಯಾಗಿರಿಸೋಣ. ಎಲ್ಲೂ ನೀರು ಕಟ್ಟಿ ನಿಲ್ಲದಂತೆ, ಟಯರ್, ಗೆರಟೆ ಪಾತ್ರೆಗಳಲ್ಲೂ ನೀರು ನಿಲ್ಲದಂತೆ ಜಾಗರೂಕರಾಗೋಣ. ತ್ಯಾಜ್ಯಗಳ ಸಮರ್ಪಕ ಸಂಸ್ಕರಣೆಯತ್ತ ಗಮನ ಹರಿಸೋಣ. ಈ ಮಳೆಗಾಲವ ಆದಷ್ಟು ರೋಗಮುಕ್ತ ಮಳೆಗಾಲವನ್ನಾಗಿಸೋಣ.
ಸೌಮ್ಯಶ್ರೀ ಕೆ.
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ, ಎಸ್‌ಡಿಎಮ್ ಕಾಲೇಜು, ಉಜಿರೆ.