ಮುಂಬಯಿ : ಮುಂಬಯಿ – ಲಂಡನ್ ಹಾರಾಟದ ಬ್ರಿಟಿಷ್ ಏರ್ ವೇಸ್ ವಿಮಾನ ಅಜರ್‌ಬೈಜಾನ್‌ನ ರಾಜಧಾನಿ ಬಾಕು ವಿನಲ್ಲಿ ತುರ್ತಾಗಿ ಇಳಿದಾಗ ಸುಮಾರು 19 ತಾಸುಗಳ ಕಾಲ ವಿಮಾನ ನಿಲ್ದಾಣದಲ್ಲೇ ಉಳಿದು ರಾತ್ರಿ ಪೂರ್ತಿ ವೇಟಿಂಗ್ ರೂಮ್ ನ ನೆಲ ಹಾಸಿನಲ್ಲೇ ಮಲಗಬೇಕಾದ ದುಸ್ಥಿತಿಗೆ ಒಳಗಾದ ಎಲ್ಲ ಪ್ರಯಾಣಿಕರ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಕೂಡ ಒಬ್ಬರಾಗಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮುಂಬಯಿ – ಲಂಡನ್ ಹಾರಾಟಾದ ಬ್ರಿಟಿಷ್ ಏರ್ ವೇಸ್ ವಿಮಾನದ ಮೊದಲ ದರ್ಜೆ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡದ್ದೇ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ ಗೆ ಕಾರಣವಾಯಿತು.
ಹೊಗೆ ಕಾಣಿಸಿಕೊಂಡ ಒಡನೆಯೇ ಬಿಎ 198 ಸಂಖ್ಯೆಯ ಈ ವಿಮಾನವನ್ನು “ಸ್ಕ್ವಾಕಿಂಗ್ 7700′ ಎಂಬ ಸಂಕೇತನಾಮದೊಂದಿಗೆ (ಎಮರ್ಜೆನ್ಸಿ ಲ್ಯಾಂಡಿಂಗ್ ಸಂದರ್ಭದಲ್ಲಿ ನೀಡಲಾಗುವ ವಾಯುಯಾನದ ಕೋಡ್) ಬಾಕು ವಿನಲ್ಲಿ ಇಳಿಸಲಾಯಿತು. ಹೀಗೆ ತುರ್ತು ಅವತರಣ ಕೈಗೊಳ್ಳುವ ಸಂಕೇತ ನಾಮದ ವಿಮಾನಕ್ಕೆ ಎಲ್ಲ ರೀತಿಯ ತುರ್ತು ನೆರವನ್ನು ನೀಡುವುದು ಆ ಪ್ರದೇಶದ ವಾಯು ಸಾರಿಗೆ ನಿಯಂತ್ರಣದ ಕೇಂದ್ರದ ಜವಾಬ್ದಾರಿಯಾಗಿರುತ್ತದೆ.
ಮುಂಬಯಿಯಿಂದ ಆಗಸಕ್ಕೆ ನೆಗೆದಿದ್ದ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಾಗ ಅದು ಪಾಕ್ ವಾಯು ಪ್ರದೇಶ ವ್ಯಾಪ್ತಿಯ ಬಲೂಚಿಸ್ಥಾನದ ಮೇಲ್ಗಡೆಯಿಂದ ಹಾರುತ್ತಿತ್ತು. ಬಳಿಕ ಅದು ಇರಾನ್ ವಾಯು ಪ್ರದೇಶವನ್ನು ಪ್ರವೇಶಿಸಿತು. ತುರ್ತು ಅವತರಣದ ಕರೆಯನ್ನು ಹೊರಡಿಸಲಾದಾಗ ಅದು ಇರಾನ್ ವಾಯು ಪ್ರದೇಶದಿಂದ ನಿರ್ಗಮಿಸುತ್ತಿತ್ತು. ಅಂತಿಮವಾಗಿ ಅದನ್ನು ಅಜರ್‌ಬೈಜಾನ್‌ನ ರಾಜಧಾನಿ ಬಾಕು ವಿನಲ್ಲಿ ಇಳಿಸಲಾಯಿತು.
ವಿಮಾನದಿಂದ ಇಳಿಸಲ್ಪಟ್ಟು ನಿಲ್ದಾಣದಲ್ಲಿ ಕೂಡಿ ಹಾಕಲ್ಪಟ್ಟ ಪ್ರಯಾಣಿಕರಿಗೆ ಎಲ್ಲ ಆವಶ್ಯಕ ಸೇವೆ, ಸೌಕರ್ಯಗಳನ್ನು ತಾನು ಒದಗಿಸಿದ್ದೇನೆ ಎಂದು ಬ್ರಿಟಿಷ್ ಏರ್ ವೇಸ್ ಹೇಳಿಕೊಂಡಿತ್ತು.
ಆದರೆ ವಾಸ್ತವದಲ್ಲಿ ಬ್ರಿಟಿಷ್ ಏರ್ ವೇಸ್ ಯಾವುದೇ ಸಂತ್ರಸ್ತ ಪ್ರಯಾಣಿಕರಿಗೆ ಆಹಾರವನ್ನಾಗಲೀ ಅಗತ್ಯ ಔಷಧಗಳನ್ನಾಗಲೀ ಪೂರೈಸಲಿಲ್ಲ ಎಂದು ಪ್ರಯಾಣಿಕರು ತಾವು ಪಟ್ಟ ಬವಣೆಯನ್ನು ಮಾಧ್ಯಮಕ್ಕೆ ತಿಳಿಸಿದರು.