Advertisement

ಬಿಪಿಎಲ್‌ ಎಪಿಎಲ್‌ ಆದಾಗ ಹಲವರಿಗೆ ಪಿಂಚಣಿ ಸೌಲಭ್ಯ ಸ್ಥಗಿತ!

07:48 PM Oct 18, 2021 | Team Udayavani |

ಮಹಾನಗರ: ಅರ್ಹ ಬಿಪಿಎಲ್‌ ಪಡಿತರ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಡಿ ಕೆಲವು ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಿದ ಪರಿಣಾಮವಾಗಿ ಸಾಮಾಜಿಕ ಭದ್ರತ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ಹಲವರಿಗೆ ಸೌಲಭ್ಯ ಸ್ಥಗಿತಗೊಂಡು ಕೆಲವು ತಿಂಗಳುಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

Advertisement

ಸಾಮಾಜಿಕ ಭದ್ರತ ಯೋಜನೆಗಳಾದ ವೃದ್ಧಾಪ್ಯವೇತನ, ವಿಧವಾವೇತನ, ಅಂಗವಿಕಲವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿನಿ, ಮೈತ್ರಿ, ರೈತ ಪತ್ನಿ ವಿಧವಾವೇತನ, ರಾಷ್ಟ್ರೀಯ ಕುಟುಂಬ ಸಹಾಯ ಧನ ಯೊಜನೆ, ಅಂತ್ಯ ಸಂಸ್ಕಾರ ಯೋಜನೆ, ಎಂಡೋಸಲ್ಫಾನ್‌ ಸಂತ್ರಸ್ತರ ಮಾಸಾಶನದ ಪ್ರಯೋಜನ ಪಡೆಯಲು ಸರಕಾರ 38,000 ರೂ. ವಾರ್ಷಿಕ ವರಮಾನ ನಿಗದಿ ಪಡಿಸಿದೆ. ಅದಕ್ಕಿಂತ ಆದಾಯ ಮಿತಿ ಜಾಸ್ತಿ ಇದ್ದರೆ ಈ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತನೆ ಹೊಂದಿದಾಗ ಆ ಕುಟುಂಬದ ಆದಾಯ ಮಿತಿ ಹೆಚ್ಚುವುದರಿಂದ ಆ ಕುಟುಂಬದ ಹಿರಿಯರಿಗೆ ಬರುತ್ತಿದ್ದ ಸಾಮಾಜಿಕ ಭದ್ರತೆಯ ಪಿಂಚಣಿಗಳು ನಿಂತು ಹೋಗಿವೆ.

ಮಂಗಳೂರು ತಾಲೂಕಿನಲ್ಲಿ 80,727 ಮಂದಿ ವಿವಿಧ ಪಿಂಚಣಿ ಪಡೆಯುತ್ತಿದ್ದಾರೆ. ಈ ಪೈಕಿ ಬಹಳಷ್ಟು ಮಂದಿಗೆ ಇದೀಗ ಕೆಲವು ತಿಂಗಳುಗಳಿಂದ ಪಿಂಚಣಿ ಸಿಕ್ಕಿಲ್ಲ. ಈ ವಿಚಾರ ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೆಲವೊಂದನ್ನು ವೈಯಕ್ತಿಕ ಪ್ರಕರಣಗಳಾಗಿ ಪರಿಶೀಲಿಸಿ, ಅರ್ಹತೆಯನ್ನು ಪರಿಗಣಿಸಿ ಸಮಸ್ಯೆ ಪರಿಹರಿಸಲು ಮುಂದಾಗಿದೆ.

ಅ. 16ರಂದು ನಗರದ ಬಜಾಲ್‌ನಲ್ಲಿ ನಡೆದ ತಹಶೀ ಲ್ದಾರರ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿಯೂ ಈ ಬಗ್ಗೆ ಕೆಲವು ಮಂದಿಯಿಂದ ದೂರುಗಳು ಬಂದಿದ್ದು, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ ಎಂದು ತಹಶೀಲ್ದಾರ್‌ ಗುರು ಪ್ರಸಾದ್‌ ವಿವರಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ

Advertisement

ಕೆಲವು ಮಂದಿ ಫಲಾನುಭವಿಗಳು ಕೊರೊನಾ ಕಾರಣ ತಮ್ಮ ವಾಸ ಸ್ಥಾನವನ್ನು ಬದಲಾಯಿ ಸಿದ್ದು, ಭೌತಿಕ ಪರಿಶೀಲನೆ ಸಂದರ್ಭದಲ್ಲಿ ಅಂಥವರು ಸ್ಥಳದಲ್ಲಿ ಇರುವುದಿಲ್ಲ. ಇನ್ನೂ ಕೆಲವು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದು, ಅವರ ಯಾವುದೋ ಒಂದು ಖಾತೆಗೆ ಜಮೆ ಆಗಿ ರುವ ಸಾಧ್ಯತೆ ಇದೆ; ಆದರೆ ಫಲಾನುಭವಿಗಳು ಅದನ್ನು ಗಮನಿಸಿರುವುದಿಲ್ಲ. ಅಲ್ಲದೆ ಬ್ಯಾಂಕ್‌ ಖಾತೆಯ ವಿವರ ಸಲ್ಲಿಸುವಾಗ ತಪ್ಪುಗಳಾಗಿದ್ದರೆ ಅಂತಹ ಸಂದರ್ಭಗಳಲ್ಲಿಯೂ ಅವರು ಖಾತೆಗೆ ಹಣ ಜಮೆಯಾಗದಿರುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಏಕೆ ಹೀಗಾಗುತ್ತದೆ?
ಪಿಂಚಣಿ ಪಡೆಯಲು 38,000 ರೂ. ಆದಾಯ ಮಿತಿಯನ್ನು ನಿಗದಿ ಪಡಿಸಿದ್ದು, ಪಿಂಚಣಿಗೆ ಸಂಬಂ ಧಿಸಿದ ಆನ್‌ಲೈನ್‌ ವ್ಯವಸ್ಥೆಯ ಸಾಫ್ಟ್‌ವೇರ್‌ನಲ್ಲಿ (ತಂತ್ರಾಂಶ) ಈ ಅಂಶ ನಮೂದಾಗಿದೆ. ಹಾಗಾಗಿ ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ ಆಗಿ ಮಾರ್ಪಾಟು ಹೊಂದುವಾಗ ವಾರ್ಷಿಕ ಆದಾಯ ಹೆಚ್ಚಳವಾಗಿದೆ ಎಂಬರ್ಥದಲ್ಲಿ ಸ್ವಯಂ ಚಾಲಿತವಾಗಿ ಪಿಂಚಣಿ ರದ್ದಾಗುತ್ತದೆ.

ಪರಿಹಾರ ಏನು?
ಇದಕ್ಕೆ ಪರಿಹಾರ ಆದಾಯ ಮಿತಿ 38,000 ರೂ. ಗಿಂತ ಹೆಚ್ಚಳ ಆಗದ ಹಾಗೆ ನೋಡಿಕೊಳ್ಳುವುದು. ಹಾಗಾಗಿ ಇದೀಗ ಅಧಿಕಾರಿಗಳು ಈ ರೀತಿ ಸಮಸ್ಯೆಗೆ ಸಿಲುಕಿದವರಿಂದ 38,000 ರೂ. ವಾರ್ಷಿಕ ಆದಾಯ ಇರುವ ಬಗ್ಗೆ ಆದಾಯ ಪ್ರಮಾಣ ಪತ್ರವನ್ನು ಮಾಡಿಸಿ ಅದನ್ನು (ಪ್ರತಿಯೊಂದು ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಗಣಿಸಿ) ಬೆಂಗಳೂರಿನಲ್ಲಿರುವ ಪಿಂಚಣಿ ಇಲಾಖೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಮಂದಿ ಈ ರೀತಿ ಆದಾಯ ಪ್ರಮಾಣ ಪತ್ರವನ್ನು ಮಾಡಿಸಿ ತಹಶೀಲ್ದಾರರ ಕಚೇರಿಗೆ ಸಲ್ಲಿಸಿದ್ದು, ತಹಶೀಲ್ದಾರ್‌ ಕಚೇರಿಯಿಂದ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ.

ಪಿಂಚಣಿ ಅದಾಲತ್‌
ಸಾಮಾಜಿಕ ಭದ್ರತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್‌ ಏರ್ಪಡಿಸಲಾಗಿದ್ದು, ಈ ಅದಾಲತ್‌ನಲ್ಲಿ ವಿಲೆವಾರಿ ಮಾಡಲಾಗುತ್ತದೆ. ಮಂಗಳೂರು ಎ ಹೋಬಳಿಗೆ ಸಂಬಂಧಿಸಿ ನ. 2, ಡಿ. 6ರಂದು ನಗರದ ಮಿನಿ ವಿಧಾನ ಸೌಧದಲ್ಲಿ, ಮಂಗಳೂರು ಬಿ ಹೋಬಳಿಗೆ ಸಂಬಂಧಿಸಿ ನ. 9, ಡಿ. 13ರಂದು ಮಗಳೂರು ಬಿ ನಾಡ ಕಚೇರಿಯಲ್ಲಿ , ಗುರುಪುರ ಹೋಬಳಿಗೆ ಸಂಬಂಧಿಸಿ ನ. 16, ಡಿ. 10ರಂದು ಗುರುಪುರ ನಾಡ ಕಚೇರಿಯಲ್ಲಿ, ಸುರತ್ಕಲ್‌ ಹೋಬಳಿಯ ಪಿಂಚಣಿ ಅದಾಲತ್‌ ಅ. 25, ನ. 23, ಡಿ. 27ರಂದು ಸುರತ್ಕಲ್‌ ನಾಡ ಕಚೇರಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌಲಭ್ಯ ಮುಂದುವರಿಸಲು ಪತ್ರ
ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಪಿಂಚಣಿ ಪಾವತಿ ರದ್ದಾದ ಸುಮಾರು 222ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಿ, ಅವುಗಳ ಪರಿಶೀಲನೆ ನಡೆಸಿ ಈಗಾಗಲೇ ಬಹಳಷ್ಟು ಮಂದಿಗೆ ಪಿಂಚಣಿಯನ್ನು ಮುಂದುವರಿಸಬೇಕೆಂದು ಬರೆಯಲಾಗಿದೆ. ಮಂಗಳೂರು ತಾಲೂಕಿನಲ್ಲಿ ಒಟ್ಟು 490 ಮಂದಿಗೆ ಪಿಂಚಣಿ ಸೌಲಭ್ಯ ವನ್ನು ಮುಂದುವರಿಸುವಂತೆ ಪತ್ರ ಮುಖೇನ ಕೋರಲಾಗಿದೆ. -ಗುರು ಪ್ರಸಾದ್‌, ತಹಶೀಲ್ದಾರ್‌, ಮಂಗಳೂರು ತಾಲೂಕು

ಜನವರಿಯಿಂದ ವೃದ್ಧಾಪ್ಯವೇತನ ಲಭಿಸಿಲ್ಲ
ನನಗೆ ಬರುತ್ತಿದ್ದ ವೃದ್ಧಾಪ್ಯ ವೇತನ 2021 ಜನವರಿಯಿಂದ ನಿಂತು ಹೋಗಿದೆ. ನನಗೀಗ 86 ವರ್ಷ ವಯಸ್ಸು. ನಾನು ಅವಿವಾಹಿತೆಯಾಗಿದ್ದು, ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. 8 ತಿಂಗಳುಗಳಿನಿಂದ ವೃದ್ಧಾಪ್ಯವೇತನ ಬಾರದಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಗ್ರಾಮ ಲೆಕ್ಕಿಗರ ಕಚೇರಿಗಳಿಗೆ ತೆರಳಿ ಮಾಹಿತಿ ನೀಡಿದ್ದೇನೆ. ಆಧಾರ್‌ ಕಾರ್ಡ್‌ ಲಿಂಕ್‌ ಆಗಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ಪಿಂಚಣಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
-ಎವ್ಲಿನ್ ಬಂಗೇರ,ಬೊಕ್ಕಪಟ್ಣ

Advertisement

Udayavani is now on Telegram. Click here to join our channel and stay updated with the latest news.

Next