ಚೆನ್ನೈ: ದಳಪತಿ ವಿಜಯ್ (Thalapathy Vijay) ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಕಾಲಿವುಡ್ ಮಾತ್ರವಲ್ಲದೆ ಇತರೆ ಚಿತ್ರರಂಗದಲ್ಲೂ ವಿಜಯ್ ಅವರ ಸಿನಿಮಾಗಳನ್ನು ನೋಡಿ ಜೈಕಾರ ಹಾಕುವ ಅಭಿಮಾನಿಗಳಿದ್ದಾರೆ.
ಬಹುಭಾಷಾ ನಟ ನಾಸರ್ (Actor Nassar) ಅವರ ಜೀವನದಲ್ಲಿ ವಿಜಯ್ ಒಬ್ಬ ಕಲಾವಿದನಾಗಿ ಮಾತ್ರವಲ್ಲದೆ ಚಮತ್ಕಾರ ತರಿಸಿದ ವ್ಯಕ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ವಿಜಯ್ ನಾಸರ್ ಅವರ ಜೀವನದ ವಿಶೇಷ ವ್ಯಕ್ತಿ ಎಂದರೆ ತಪ್ಪಾಗದು.
ಇತ್ತೀಚೆಗೆ ನಾಸರ್ ಮದನ್ ಗೌರಿ ಅವರೊಂದಿಗೆ ಸಂದರ್ಶನದಲ್ಲಿ ವಿಜಯ್ ಯಾಕೆ ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯಾಗಿ ಕಾಣುತ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.
2014ರ ವರ್ಷವನ್ನು ನಾಸರ್ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪಘಾತವೊಂದರಲ್ಲಿ ಅವರ ಪುತ್ರ ಗಂಭೀರ ಸ್ವರೂಪದ ಗಾಯಗೊಂಡು 14 ದಿನಗಳ ಕಾಲ ಕೋಮಾ ಸೇರಿದ್ದರು.
“ನೂರುಲ್ ಹಸನ್ ಫೈಜಲ್ (ನಾಸರ್ ಅವರ ಪುತ್ರ) 14 ದಿನಗಳ ಕಾಲ ಪ್ರಜ್ಞಾಹೀನರಾಗಿ ಕೋಮಾದಲ್ಲಿದ್ದ. ಚಿಕಿತ್ಸೆಗಾಗಿ ಅವನನ್ನು ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. 14 ದಿನದ ನಂತರೆ ಎಚ್ಚರವಾದಾಗ ಮೊದಲಿಗೆ ಅಮ್ಮ – ಅಪ್ಪ ಎಲ್ಲಿ ಎಂದು ಕೇಳಲಿಲ್ಲ. ವಿಜಯ್ ಎಂದು ಕೇಳಿದ್ದ. ಅಪಘಾತದ ಸಂದರ್ಭದಲ್ಲಿ ಅವನ ಜತೆ ವಿಜಯ್ ಎನ್ನುವ ಸ್ನೇಹಿತನಿದ್ದ ಬಹುಶಃ ನೂರುಲ್ ಅವನನ್ನ ಕೇಳುತ್ತಿರಬಹುದೆಂದು ಅಂದುಕೊಂಡಿದ್ದೆ. ಅವನ ನೆನಪಿನ ಶಕ್ತಿ ಮತ್ತೆ ಬಂತು ಎನ್ನುವ ಕಾರಣಕ್ಕೆ ಖುಷಿಯಾಗಿದ್ದೆ. ಆದರೆ ಅವನ ಮುಂದೆ ಅವನ ಸ್ನೇಹಿತ ವಿಜಯ್ನನ್ನು ನಿಲ್ಲಿಸಿದಾಗ ಅವನನ್ನು ನೂರುಲ್ ಗುರುತು ಹಿಡಿಯಲಿಲ್ಲ” ಎಂದು ಹೇಳಿದ್ದಾರೆ.
“ತಮ್ಮ ಮಗನ ಪ್ರತಿಕ್ರಿಯೆಯಿಂದ ಗೊಂದಲಕ್ಕೊಳಗಾದಾಗ ಮನಶ್ಶಾಸ್ತ್ರಜ್ಞರೂ ಆಗಿರುವ ನನ್ನ ಪತ್ನಿ, ನಮ್ಮ ಮಗ ನಟ ದಳಪತಿ ವಿಜಯ್ ಅವರನ್ನು ಉಲ್ಲೇಖಿಸುತ್ತಿದ್ದಾರೆಯೇ ಹೊರತು ಅವರ ಸ್ನೇಹಿತನಲ್ಲ ಎಂದು ಅರ್ಥಮಾಡಿಕೊಂಡಳು. ಇದಾದ ಬಳಿಕ ವಿಜಯ್ ಅವರ ಸಿನಿಮಾ, ಹಾಡುಗಳನ್ನು ಪ್ಲೇ ಮಾಡಿ ಅವನ ನೆನಪಿನ ಶಕ್ತಿಗೆ ಸಹಾಯ ಮಾಡುವ ಕೆಲಸ ಮಾಡಲು ಶುರು ಮಾಡಿದ್ದೀವಿ” ಎಂದು ನಾಸರ್ ಹೇಳಿದ್ದಾರೆ.
“ಈ ಬಗ್ಗೆ ವಿಜಯ್ಗೆ ಹೇಳಿದಾಗ, ಇದನ್ನು ಅವರು ಅರ್ಥ ಮಾಡಿಕೊಂಡ ಅವರು ಹಲವು ಬಾರಿ ಆಸ್ಪತ್ರೆಗೆ ಬಂದು ಭೇಟಿ ಆದರು. ಗಿಟಾರ್ನಲ್ಲಿ ನೂರುಲ್ಗೆ ಆಸಕ್ತಿಗೆ ಇರುವುದರಿಂದ ವಿಜಯ್ ನೂರುಲ್ಗೆ ಗಿಟಾರ್ ಗಿಫ್ಟ್ ನೀಡಿದ್ದರು. ವಿಜಯ್ ನನ್ನ ಜೀವನದಲ್ಲಿ ಮತ್ತು ನನ್ನ ಫೈಜಲ್ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾನೆ” ಎಂದು ನಟ ಹೇಳಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ವಿಜಯ್ ಇತ್ತೀಚೆಗೆ ʼಗೋಟ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ರಾಜಕೀಯ ಅಖಾಡದಲ್ಲಿ ಬ್ಯುಸಿಯಾಗಿದ್ದು, ಹೆಚ್. ವಿನೋದ್ ಅವರ ʼThalapathy 69ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ರಾಜಕೀಯ ರಂಗಕ್ಕೆ ಸಂಪೂರ್ಣವಾಗಿ ತೊಡಗಿಕೊಳ್ಳುವ ಮುನ್ನ ಬರಲಿರುವ ಕೊನೆಯ ಸಿನಿಮಾವೆಂದು ಹೇಳಲಾಗುತ್ತಿದೆ.