“ಗಂಡ ಊರಿಗೆ ಹೋದಾಗ’ ಎಂಬ ಸಿನಿಮಾವೊಂದು ಬರುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ತೆರೆಕಾಣುತ್ತಿದೆ. ಸಾಯಿಕೃಷ್ಣ ಈ ಸಿನಿಮಾದ ನಿರ್ದೇಶಕರು. ಚಿತ್ರದ ಶೀರ್ಷಿಕೆ ಕೇಳಿ ಇದು ಯಾವ ತರಹದ ಸಿನಿಮಾ, ಈ ಸಿನಿಮಾ ಮೂಲಕ ಏನು ಹೇಳಲು ಹೊರಟಿದ್ದಾರೆಂಬ ಸಂದೇಹ ಬರಬಹುದು. ಅದೇ ಕಾರಣದಿಂದ ಚಿತ್ರತಂಡ, ಇದು ಅಶ್ಲೀಲತೆ ಇಲ್ಲದ ಚಿತ್ರವಾಗಿದ್ದು, ಮನೆಮಂದಿಯೆಲ್ಲಾ ಕುಳಿತು ನೋಡುವಂತಹ ಸಿನಿಮಾ ಎನ್ನುತ್ತದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಾಯಿಕೃಷ್ಣ, “ಸಾಮಾನ್ಯವಾಗಿ ಗಂಡ ಇದ್ದಾಗ ಹೆಂಡತಿಯರಿಗೆ ಹೆಚ್ಚು ಸ್ವಾತಂತ್ರ್ಯ ಇರುವುದಿಲ್ಲ. ಅದೇ ಬೇರೆ ಊರಿಗೆ ಹೋದಾಗ ಎಷ್ಟೆಲ್ಲಾ ಸ್ವಾತಂತ್ರ್ಯದಿಂದ ಇರುತ್ತಾರೆ ಎಂಬ ಸುತ್ತ ಕಥೆ ಸಾಗುತ್ತದೆ. ಗಂಡ ಊರಿಗೆ ಹೋದಾಗ ತನ್ನ ಸ್ನೇಹಿತ ಜೊತೆ ಒಂದು ಒಳ್ಳೆಯ ಕೆಲಸಕ್ಕಾಗಿ ಹೊರಗಡೆ ಹೋದಾಗ ಆಕೆಯನ್ನು ಸಮಾಜ ಹೇಗೆ ನೋಡುತ್ತದೆ ಎಂಬ ಅಂಶವನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಿದ್ದೇನೆ.
ಇಲ್ಲಿ ಅಶ್ಲೀಲತೆಯಾಗಲಿ, ಅಸಹ್ಯ ಹುಟ್ಟಿಸುವ ಸಂಭಾಷಣೆಯಾಗಲಿ ಇಲ್ಲ. ಈಗಿನ ಸಂಬಂಧಗಳು ಹೇಗೆಲ್ಲಾ ಇವೆ ಎಂಬುದನ್ನು ಹೇಳಹೊರಟಿದ್ದೇನೆ. ಚಿತ್ರದಲ್ಲಿ ಒಳ್ಳೆಯ ಸಂದೇಶ ಕೂಡಾ ಇದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ನಿರ್ದೇಶಕ ಸಾಯಿಕೃಷ್ಣ. ಚಿತ್ರದಲ್ಲಿ ಕುಡಿಯುವ ದೃಶ್ಯವಿರುವುದರಿಂದ “ಎ’ ಪ್ರಮಾಣ ಪತ್ರ ನೀಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟರು ಸಾಯಿ. ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಚಿತ್ರದಲ್ಲಿ ಸಿಂಧು ರಾವ್, ರಾಧಿಕಾ ರಾಮ್, ಅನು ಗೌಡ, ಶಾಲಿನಿ, ಸ್ವಪ್ನ ನಟಿಸಿದ್ದು, ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡಿದರು. ವಿ.ಸಿ.ಎನ್. ಮಂಜು ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ. ಜೊತೆಗೆ ಚಿತ್ರದಲ್ಲಿ ಒಂದು ಪಾತ್ರ ಕೂಡಾ ಮಾಡಿದ್ದಾರೆ. “ಇದೊಂದು ಸಂದೇಶ ಇರುವ ಚಿತ್ರ. ಇಲ್ಲಿ ಅಸಹ್ಯ ಹುಟ್ಟಿಸುವಂಥದ್ದು ಏನೂ ಇಲ್ಲ. ಒಂದು ಮನರಂಜನೆಯ ಚಿತ್ರವಿದು’ ಎಂಬುದು ಮಂಜು ಮಾತು. ಚಿತ್ರವನ್ನು ಜಗದೀಶ್ ನಿರ್ಮಿಸಿದ್ದು, ಅರುಣ್ ಸಂಗೀತ ನೀಡಿದ್ದಾರೆ.