Advertisement

ಬೀಗ ತೆಗೆಯುವ ಹೊತ್ತು

11:26 PM Jul 04, 2019 | Team Udayavani |

ಕನ್ನಡದಲ್ಲಿ ಕೆಲ ತಿಂಗಳ ಹಿಂದೆ ‘ಲಾಕ್‌’ ಎನ್ನುವ ಹೆಸರಿನಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬಂದಿತ್ತು. ಈಗ ಅದೇ ಅರ್ಥವನ್ನು ಹೊಂದಿರುವ ಮತ್ತೂಂದು ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಬೀಗ’. ಹಾಗಂತ ಆಗ ಬಂದಿದ್ದ ‘ಲಾಕ್‌’ ಚಿತ್ರಕ್ಕೂ, ಈಗ ಬರುತ್ತಿರುವ ‘ಬೀಗ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಎರಡೂ ಚಿತ್ರಗಳ ಹೆಸರು ಒಂದೇ ಅರ್ಥವನ್ನು ಕೊಡುತ್ತವೆ. ಅದು ಕಾಕತಾಳೀಯವಷ್ಟೇ. ಈಗ ವಿಷಯ ಏನಂದ್ರೆ, ಇತ್ತೀಚೆಗೆ ಈ ‘ಬೀಗ’ ಚಿತ್ರ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಮೊದಲ ಟೀಸರ್‌ ಅನ್ನು ಬಿಡುಗಡೆಗೊಳಿಸಿದೆ. ಹಿರಿಯ ನಿರ್ದೇಶಕ ಭಗವಾನ್‌ ‘ಬೀಗ’ ಚಿತ್ರದ ಮೊದಲ ಟೀಸರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಹಿಂದೆ ‘ಅಗ್ರಜ’, ‘ಲೀ’ ಚಿತ್ರಗಳನ್ನು ನಿರ್ದೇಶಿಸಿದ್ದ ಹೆಚ್.ಎಂ ಶ್ರೀನಂದನ್‌ ‘ಬೀಗ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಹೆಚ್.ಎಂ ಶ್ರೀನಂದನ್‌, ‘ಇದೊಂದು ವೈಜ್ಞಾನಿಕ ಕಥಾಹಂದರ ಹೊಂದಿರುವ ಚಿತ್ರ. ಒಂದು ಹೆಣ್ಣು ಮಗು ರಸ್ತೆಗೆ ಬಂದರೆ ಏನೆಲ್ಲಾ ಅನಾಹುತಗಳು ಆಗಬಹುದು ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಕಂಡು-ಕೇಳಿರುವ ಕೆಲ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಪ್ರತಿ ದೃಶ್ಯದಲ್ಲೂ ಕುತೂಹಲ ಮೂಡಿಸುತ್ತ ಚಿತ್ರ ಸಾಗುತ್ತದೆ. ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ನಡೆಸಲಾಗಿದೆ. ಶೀಘ್ರದಲ್ಲಿಯೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದು, ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ’ ಎಂದು ‘ಬೀಗ’ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ರಮೇಶ್‌ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಬೀಗ’ ಚಿತ್ರದಲ್ಲಿ ರವಿಶಂಕರ್‌, ಸುಚೇಂದ್ರ ಪ್ರಸಾದ್‌, ಆಕಾಶ್‌, ಇರ್ಫಾನ್‌, ಅನು, ಸಹರ್‌ ಅಪ್ಸಾ, ಅಕ್ಷಯ್‌ ಗೌಡ, ರಮಾನಂದ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಪ್ರೇಕ್ಷಕರ ಮುಂದೆ ‘ಬೀಗ’ ತೆಗೆಯಲು ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಂಡಿರುವ ಚಿತ್ರತಂಡ, ಸದ್ಯ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳಲ್ಲಿ ನಿರತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next