ನ್ಯೂಯಾರ್ಕ್: ಎರಡು ಪರಮಾಣು ಸಶಸ್ತ್ರ ರಾಷ್ಟ್ರಗಳು ಹೋರಾಡಿದರೇ ಅದರ ಪರಿಣಾಮ ಜಗತ್ತಿನ ಮೇಲೆ ಬೀಳುತ್ತದೆ ಎಂದು ವಿಶ್ವ ಸಂಸ್ಥೆಯ 74 ನೇ ಮಹಾ ಅಧಿವೇಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಇಡೀ ಜಗತ್ತಿಗೆ ಅತ್ಯಂತ ದೊಡ್ಡ ಸವಾಲಾಗಿರುವ ಉಗ್ರವಾದ ಸದೆಬಡಿಯುಲು ಸದಸ್ಯ ರಾಷ್ಟ್ರಗಳು ಒಟ್ಟಾಗಿ ಶ್ರಮಿಸದಿದ್ದರೆ ವಿಶ್ವ ಸಂಸ್ಥೆಯ ಮೂಲ ಉದ್ದೇಶಕ್ಕೆ ಘಾಸಿಯಾಗುತ್ತದೆ. ಉಗ್ರವಾದ ಮನುಕುಲಕ್ಕೆ ದೊಡ್ಡ ಸವಾಲಾಗಿದೆ ಎಂದು ಪಾಕಿಸ್ಥಾನದ ಹೆಸರೆತ್ತದೆ ಉಗ್ರವಾದದ ಆತಂಕದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಪಾಕ್ ಪ್ರಧಾನಿ, ಕಾಶ್ಮೀರ ವಿಷಯವನ್ನು ಮತ್ತೆ ಕೆದಕಿ ಭಾರತ ಮುಸ್ಲಿಮರನ್ನು ತೀವ್ರಗಾಮಿಗಳನ್ನಾಗಿ ಮಾಡುತ್ತಿರುವುದಾಗಿ ಆಕ್ಷೇಪಿಸಿದರು.
ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಗುಂಪುಗಳಿಲ್ಲ ಎಂದು ಮತ್ತೆ ಉಲ್ಟಾ ಹೊಡೆದ ಇಮ್ರಾನ್, ನಾವು ಶಾಂತಿಯನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ್ದಾರೆ. ಅವರು ತಮ್ಮ ಭಾಷಣವನ್ನು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ತೀರ್ಮಾನವನ್ನು ಪ್ರತಿಭಟಿಸುವುದಕ್ಕೆ ಮಾತ್ರ ಸೀಮಿತಗೊಳಿಸಿದರು.
ಯುದ್ದ ನಡೆದರೇ ಏನು ಬೇಕಾದರೂ ಸಂಭವಿಸಬಹುದು, ಒಂದು ರಾಷ್ಟ್ರ ತನಗಿಂತ ಏಳು ಪಟ್ಟು ಸಣ್ಣದಾದ ದೇಶದ ಜೊತೆಗೆ ಹೋರಾಡಿದರೇ ಅದಕ್ಕಿರುವುದು ಕೇವಲ ಎರಡು ಆಯ್ಕೆ. ಒಂದು ಶರಣಾಗುವುದು ಇಲ್ಲವೆ ಮರು ಯುದ್ದ ಮಾಡುವುದು. ಆದರೇ ಅದರ ಪರಿಣಾಮ ಮಾತ್ರ ಜಗತ್ತಿನ ಇತರ ರಾಷ್ಟ್ರಗಳ ಮೇಲೂ ಬೀರುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ 2019ರ ಲೋಕಸಭಾ ಚುನಾವಣಾ ಪ್ರಚಾರ ಕೇವಲ ಸುಳ್ಳುಗಳಿಂದ ಕೂಡಿತ್ತು. ಪುಲ್ವಾಮ ದಾಳಿ ನಡೆದಾಗ ಭಾರತ ನಮ್ಮನ್ನು ದೂಷಿಸಿತು. ಆದರೇ ಅದಕ್ಕೆ ಪುರಾವೇ ನೀಡಲಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.