ಬೆಂಗಳೂರು:ಹಿಂದೆಂದು ಕೇಳಿರದ ಕಥೆ, ವಿಭಿನ್ನ ಟೈಟಲ್, ಗ್ಲಾಮರಸ್ ಇಲ್ಲದ ಅದ್ಭುತ ಸಿನಿಮಾ..ಟೈಟಲ್ ನಿಂದ ಆಶ್ಚರ್ಯ ಹುಟ್ಟುಹಾಕಿದ್ದು, ಟ್ರೇಲರ್ ನಿಂದ ಭರ್ಜರಿ ಹೈಪ್ ಕ್ರಿಯೇಟ್ ಮಾಡಿದ್ದ ವೀಲ್ ಚೇರ್ ರೋಮಿಯೋ ಸಿನಿಮಾ ಮೇ 27ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಒಬ್ಬ ಕಣ್ಣು ಕಾಣದ ವೇಶ್ಯೆ ಮೇಲೆ ಕಾಲಿಲ್ಲದ, ವೀಲ್ ಚೇರ್ ನಲ್ಲಿಯೇ ಕುಳಿತು, ಜೀವನ ಸಾಗಿಸುತ್ತಿರುವ ಹುಡುಗನ ನಡುವೆ ಹುಟ್ಟುವ ಪ್ರೀತಿಯ ಕಥೆ. ಮನಸ್ಸಿನ ಭಾವನೆಗೆ ಬೆಲೆ ಕೊಡದೆ, ಕೇವಲ ದಾಹ ತೀರಿಸಿಕೊಳ್ಳುವ ಜನರ ನಡುವೆ ಇದ್ದ ಆ ಹುಡುಗಿಗೆ ಪ್ರಾಮಾಣಿಕ ಪ್ರೀತಿ ಕೊಡುತ್ತೇನೆ ಎಂದಾಗ ಹೇಗೆ ರಿಸೀವ್ ಮಾಡಿಕೊಳ್ಳುತ್ತಾಳೆ ಮತ್ತು ಆ ನಂತರದ ಚಾಲೆಂಜಸ್ ಗಳೇನು ಎಂಬುದು ಸಿನಿಮಾದ ಕಥಾ ಹಂದರವಾಗಿದೆ.
ಇದರಲ್ಲಿ ತಂದೆ ಮಗನ ಪ್ರೀತಿಯೂ ಅನಾವರಣವಾಗಿದೆ. ಒಂದಷ್ಟು ತಮಾಷೆ, ಒಂದಷ್ಟು ಸಂದೇಶಗಳನ್ನೊಳಗೊಂಡ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ 27ಕ್ಕೆ ತೆರೆಗೆ ಬರುತ್ತಿದೆ. ಹಾಡುಗಳು ಈಗಾಗಲೇ ಜನರ ಮನಸ್ಸನ್ನು ತಟ್ಟಿದೆ.
ಹಲವಾರು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿಯೇ ಪಳಗಿರುವ ನಟರಾಜ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜಿಯೋಗ್ರಫಿ ಚಾನೆಲ್ ನಲ್ಲಿ ಕಂಡ ಆ ಒಂದು ಸೆಂಟಿಮೆಂಟ್ ಅನ್ನು, ಕಥೆಯಾಗಿ ಹರಣೆದು, ಸಿನಿಮಾವಾಗಿ ತಯಾರಿಸಿದ್ದಾರೆ. ಅವರ ಪರಿಶ್ರಮ, ಸಿನಿಮಾ ಮೇಲಿನ ಪ್ರೇಮ ಟ್ರೇಲರ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.
ಇನ್ನು ಕಣ್ಣಿಲ್ಲದ ಕುರುಡಿಯಾಗಿ ಚಾಲೆಂಜಸ್ ಇರುವಂತ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಮಿಂಚಿರುವ ರಾಮ್ ಚೇತನ್ ನಟನಾಗಿ ಎಂಟ್ರಿಯಾಗಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ.