ವಿಶ್ವಾದ್ಯಂತ ಅಲ್ಪಕಾಲದಲ್ಲೇ ಪ್ರಸಿದ್ಧಿ ಪಡೆದು ಮೊಬೈಲ್ ಫೋನ್ ಬಳಕೆದಾರರ ಅಚ್ಚುಮೆಚ್ಚಿನ ಆ್ಯಪ್ ಆಗಿದ್ದ ವಾಟ್ಸಪ್ ಇದೀಗ ತನ್ನ ಪ್ರೈವಸಿ ಪಾಲಿಸಿಯನ್ನು ಅಪ್‌ಡೇಟ್ ಮಾಡಿದೆ. ಈಗ ವಾಟ್ಸಪ್ ಬಳಕೆದಾರರಿಗೆ ನೂತನ ಪಾಲಿಸಿಯನ್ನು Agree ಮಾಡುವಂತೆ ಸಂದೇಶ ಕಳುಹಿಸುತ್ತಿದೆ. ವಾಟ್ಸಪ್ ಬಳಕೆದಾರರ ಕೆಲ ಮಾಹಿತಿಗಳನ್ನು ಫೇಸ್‌ಬುಕ್ ಕುಟುಂಬದ ಇತರ ಆ್ಯಪ್‌ಗಳು ತಮ್ಮ ಜಾಹೀರಾತುದಾರರ ಸಲುವಾಗಿ ಬಳಸಿಕೊಳ್ಳಬಹುದು ಎಂಬುದು ಅಪ್‌ಡೇಟ್‌ನ ಒಂದು ಸಾಲಿನ ಸಾರಾಂಶ. ಅದನ್ನು ಒಪ್ಪಿದೆ ಎಂದು ಒತ್ತಿದರೆ ಅಂಥ ಗ್ರಾಹಕರು ಅವರ ಹೊಸ ಪ್ರೆವೇಸಿ ಪಾಲಿಸಿಗೊಳಪಡುತ್ತಾರೆ. ಹೊಸ ಅಪ್‌ಡೇಟ್‌ಗೆ ಫೆ. 8ರೊಳಗೆ ಒಪ್ಪಿಗೆ ಸೂಚಿಸಬೇಕು ಎಂದು ವಾಟ್ಸಪ್ ತಿಳಿಸಿದೆ. ಒಪ್ಪಿಗೆ ಸೂಚಿಸದೇ ಹೋದರೆ ಫೆ.8ರ ನಂತರ ವಾಟ್ಸಪ್ ಬಳಸಲಾಗುವುದಿಲ್ಲ ಎಂದು ಹಲವು ಸುದ್ದಿಮೂಲಗಳು ಹೇಳುತ್ತಿವೆ. ಆದರೆ ಅದರ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.
ತನ್ನ ಮಾಹಿತಿ ಇತರೆಡೆಗೆ ಸೋರಿಕೆಯಾಗಬಾರದು ಎಂದು ಬಹುತೇಕ ಆನ್‌ಲೈನ್ ಬಳಕೆದಾರರು ಬಯಸುತ್ತಾರೆ. ವಾಟ್ಸಪ್‌ನ ನೂತನ ನೀತಿಯನ್ನು ಅನೇಕರು ಇಷ್ಟಪಡುತ್ತಿಲ್ಲ. ಅದಕ್ಕಾಗಿ ವಾಟ್ಸಪ್ ನಂಥದೇ ಇನ್ನೊಂದು ಪರ್ಯಾಯ ಆ್ಯಪ್ ಮೊರೆ ಹೋಗುತ್ತಿದ್ದಾರೆ. ಟೆಲಿಗ್ರಾಂ, ವೈಬರ್, ಸಿಗ್ನಲ್ ಅಂಥ ಮೂರು ಪರ್ಯಾಯಗಳು. ಆದರೆ ಇವು ಮೂರರ ಪೈಕಿ ಬಳಕೆದಾರರ ಮಾಹಿತಿಗಳನ್ನು ಸಂರಕ್ಷಿಸುವಲ್ಲಿ ಸಿಗ್ನಲ್ ಅತ್ಯುತ್ತಮ ಆ್ಯಪ್ ಎಂದು ಅನೇಕ ಮಂದಿ ಈಗ ಸಿಗ್ನಲ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಲಾರಂಭಿಸಿದಾರೆ. ನಿನ್ನೆ ಮೊನ್ನೆಯವರೆಗೆ ಇಂಥದ್ದೊಂದು ಆ್ಯಪ್ ಇದೆ ಎಂದೇ ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಿಗ್ನಲ್ ಜಗತ್ಪ್ರಸಿದ್ಧವಾಗಿದೆ! ಜನರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಿರುವುದರ ಹೊಡೆತ ತಾಳಲಾರದೇ ಅದರ ಸರ್ವರ್ ಕೆಲ ಸಮಯ ಡೌನ್ ಆಗಿತ್ತು! (ಈಗ ಸರಿಯಾಗಿದೆ)
ಇಂಥ ಸಿಗ್ನಲ್ ಆ್ಯಪ್ ಬಗ್ಗೆ ಉದಯವಾಣಿ.ಕಾಮ್ ಓದುಗರಿಗೆ ಕೆಲ ಉಪಯುಕ್ತ ಮಾಹಿತಿಗಳು
ವಾಟ್ಸಪ್ ಸ್ಥಾಪಿಸಿದಾತನಿಂದ ಸಿಗ್ನಲ್‌ಗೆ ಹಣದ ನೆರವು: ಈ ಸಿಗ್ನಲ್ ಆ್ಯಪ್ 2014ರಿಂದಲೂ ಅಸ್ತಿತ್ವದಲ್ಲಿದೆ! ಸೇ ಹಲೋ ಟು ಪ್ರೈವೇಸಿ ಎಂಬುದು ಇದರ ಧ್ಯೇಯವಾಕ್ಯ. ಇದು ಐಫೋನ್, ಐಪ್ಯಾಡ್, ಅಂಡ್ರಾಯ್ಡ್, ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ಎಲ್ಲ ಫ್ಲಾಟ್‌ಫಾರಂಗಳಲ್ಲೂ ಲಭ್ಯ. ಇದನ್ನು ಸಿಗ್ನಲ್ ಫೌಂಡೇಶನ್ ಮತ್ತು ಸಿಗ್ನಲ್ ಮೆಸೆಂಜರ್ ಎಲ್‌ಎಲ್‌ಸಿ ಅಭಿವೃದ್ಧಪಡಿಸಿವೆ. ಇದೊಂದು ಲಾಭ ಬಯಸದ ಕಂಪೆನಿ. ಸಿಗ್ನಲ್ ಮೆಸೆಂಜರ್ ಅನ್ನು ಅಮೆರಿಕಾದ ಮೋಕ್ಸಿ ಮಾರ್ಲಿನ್‌ಸ್ಪೈಕ್ ಎಂಬಾತ ಸೃಷ್ಟಿಸಿದ. ಈತ ಇದರ ಸಿಇಓ ಕೂಡ.
ಸಿಗ್ನಲ್ ಫೌಂಡೇಶನ್ ಅನ್ನು ವಾಟ್ಸಪ್ ನ ಸಹಸ್ಥಾಪಕ ಬ್ರಿಯಾನ್ ಆಕ್ಟನ್ ಹಾಗೂ ಸಿಗ್ನಲ್ ಸೃಷ್ಟಿಕರ್ತ ಮಾರ್ಲಿನ್ ಸ್ಪೈಕ್ ಸ್ಥಾಪಿಸಿದ್ದಾರೆ. ಇದಕ್ಕೆ ವಾಟ್ಸಪ್ ಸಹಸ್ಥಾಪಕ ಬ್ರಿಯಾನ್ ಆಕ್ಟನ್ 50 ಮಿಲಿಯನ್ ಡಾಲರ್ ಧನ ಸಹಾಯ ನೀಡಿದ್ದಾರೆ.
ಇದು ಜಾಹೀರಾತು ಪಡೆಯುವುದಿಲ್ಲ. ಸಂಪೂರ್ಣ ದಾನಿಗಳ ನೆರವಿನಿಂದ ನಡೆಯುತ್ತಿದೆ. ಯಾರು ಬೇಕಾದರೂ ಅದಕ್ಕೆ ನೆರವು ನೀಡಬಹುದು. ದಾನ ನೀಡಲು ಸೆಟಿಂಗ್ಸ್ ನ ಕೊನೆಯ ಸಾಲಿನಲ್ಲಿ ಆಯ್ಕೆ ಕೂಡ ಇದೆ. ಭಾರತೀಯರು ಅಲ್ಲಿರುವ ಆಯ್ಕೆ ಲಿಂಕ್ ಗೆ ಹೋಗಿ ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಕನಿಷ್ಟ 221 ರೂ.ನಿಂದ ಆರಂಭಿಸಿ ಧನ ಸಹಾಯ ಮಾಡಬಹುದು.
ಮೆಸೇಜ್, ಆಡಿಯೋ, ವಿಡಿಯೋ ಕಾಲ್: ಸಿಗ್ನಲ್ ಸಂಪೂರ್ಣ ಉಚಿತ. ಇದರಲ್ಲಿ ಮೆಸೇಜ್, ಫೋಟೋ, ವಿಡಿಯೋ ಕಳಿಸಬಹುದು, ಆಡಿಯೋ, ವಿಡಿಯೋ ಕಾಲ್‌ಗಳನ್ನು ಮಾಡಬಹುದು. 150 ಜನರ ಗ್ರೂಪ್ ಅನ್ನು ಮಾಡಬಹುದು. ಇದರಲ್ಲಿ ಗ್ರೂಪ್ ಮಾಡಬೇಕಾದರೆ ಸೇರುವವರ ಅನುಮತಿ ಇಲ್ಲದೇ ಆ್ಯಡ್ ಮಾಡುವಂತಿಲ್ಲ. ಅವರಿಗೆ ಆಹ್ವಾನ ಕಳಿಸಬೇಕು. ಅವರು ಅದಕ್ಕೆ ಸಮ್ಮತಿಸಿ ಗ್ರೂಪ್‌ಗೆ ಸೇರಬಹುದು. ಈಗ ವಾಟ್ಸಪ್‌ನಲ್ಲಿ ಯಾರು ಬೇಕಾದರೂ ಗ್ರೂಪ್ ಮಾಡಿ, ನಿಮಗೆ ಇಷ್ಟವಿಲ್ಲದಿದ್ದರೂ ನಿಮ್ಮನ್ನು ತಮ್ಮ ಗ್ರೂಪ್‌ಗೆ ಸೇರಿಸಿಕೊಳ್ಳಬಹುದು!
ಸಿಗ್ನಲ್ ಬಳಸಲು ಹೆಚ್ಚೂ ಕಡಿಮೆ ವಾಟ್ಸಪ್‌ನಂತೆಯೇ ಇದೆ. ವಾಟ್ಸಪ್‌ನಲ್ಲಿರುವ ಫೀಚರ್‌ಗಳೇ ಇದರಲ್ಲೂ ಇವೆ. ಲೇಔಟ್ ವಾಟ್ಸಪ್‌ಗಿಂತಲೂ ಆಕರ್ಷಕವಾಗಿದೆ. ಒಬ್ಬೊಬ್ಬ ಗೆಳೆಯರ ಚಾಟ್, ಒಂದೊಂದು ಬಣ್ಣದಲ್ಲಿರುವಂತೆ ವಿನ್ಯಾಸವಿದೆ.
ಕನ್ನಡ ಆಯ್ಕೆ ಸಹ ಇದೆ: ಸಿಗ್ನಲ್ ಅನ್ನು ಪೂರ್ಣ ಕನ್ನಡದಲ್ಲೂ ಬಳಸಬಹುದು. ಭಾಷೆ ವಿಭಾಗದಲ್ಲಿ ಕನ್ನಡ ಆಯ್ಕೆ ಮಾಡಿದರೆ ಆಪ್‌ನ ಮಾಹಿತಿ, ಸೂಚನೆಗಳೆಲ್ಲವೂ ಕನ್ನಡದಲ್ಲೇ ಬರುತ್ತವೆ. ಅಲ್ಲಿ ಬಳಸಿರುವ ಕನ್ನಡ ಕೂಡ ಚೆನ್ನಾಗಿದೆ. ಥೀಮ್‌ನಲ್ಲಿ ತಿಳಿ ಅಥವಾ ಗಾಢ ಬಣ್ಣದ ಆಯ್ಕೆ ಇದೆ. ನಿಮಗೆ ಬೇಕಾದ ಥರ ಅಳವಡಿಸಿಕೊಳ್ಳಬಹುದು.
ನಿಮ್ಮ ಮಾಹಿತಿ ಸುರಕ್ಷಿತ: ಇದು ಸಂಪೂರ್ಣ ಸುರಕ್ಷತೆ (ಎಂಡ್ ಟು ಎಂಡ್ ಎನ್‌ಕ್ರಿಪ್ಷನ್) ಅಂಶ ಹೊಂದಿದೆ. ಇದು ಸಿಗ್ನಲ್ ನ ಧ್ಯೇಯ ಕೂಡ. ಯಾವುದೇ ಮೂರನೇ ವ್ಯಕ್ತಿ ನಿಮ್ಮ ಮೆಸೇಜ್ ಓದಲಾಗುವುದಿಲ್ಲ ಅಲ್ಲದೇ ಸಿಗ್ನಲ್ ಕಂಪೆನಿ ಸಹ ನಿಮ್ಮ ಮೆಸೇಜ್ ಅಥವಾ ನಿಮ್ಮ ಮಾಹಿತಿ ಓದಲು ಸಾಧ್ಯವಿಲ್ಲ. ಸಿಗ್ನಲ್ ಅನ್ಯ ಕ್ಲೌಡ್ ಬ್ಯಾಕಪ್ ವ್ಯವಸ್ಥೆ ಹೊಂದಿಲ್ಲ. ನಿಮ್ಮ ಮೆಸೇಜು, ನಿಮ್ಮ ಫೋಟೋ ನಿಮ್ಮ ಫೋನ್‌ನಲ್ಲೇ ಬ್ಯಾಕಪ್ ಆಗುತ್ತವೆ. ನಿಮ್ಮ ಫೋನ್ ಕಳೆದುಹೋದರೆ, ನಿಮ್ಮ ಚಾಟ್ ಬ್ಯಾಕ್‌ಅಪ್ ದೊರಕುವುದಿಲ್ಲ! ಆದರೆ ನಿಮ್ಮ ಫೋನ್‌ನಲ್ಲಿ ಮೆಸೇಜ್‌ಗಳನ್ನು ರೆಸ್ಟೋರ್ ಮಾಡಬಹುದು. ಚಾಟ್ ಬ್ಯಾಕಪ್ ಆಯ್ಕೆಗೆ ಹೋಗಿ, ಫೋಲ್ಡರ್ ಆಯ್ಕೆ ಮಾಡಿಕೊಂಡು ಅಲ್ಲಿ ರೆಸ್ಟೋರ್ ಮಾಡಿಕೊಳ್ಳಬಹುದು. ಹೊಸ ಫೋನ್‌ನಲ್ಲಿ ಸಿಗ್ನಲ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ರೆಸ್ಟೋರ್ ಆಯ್ಕೆ ಮಾಡಿಕೊಂಡು ಹಳೆಯ ಫೋನಿನ ಚಾಟ್‌ಗಳನ್ನು ಅಲ್ಲಿ ಪಡೆಯಬಹುದು. (ಇದಕ್ಕೆ ಹಳೆಯ ಫೋನಿನಲ್ಲಿರುವ 30 ಡಿಜಿಟ್‌ಗಳ ಪಾಸ್‌ಕೋಡ್‌ಗಳನ್ನು ಹಾಕಬೇಕು)
ಮೆಸೇಜ್‌ಗಳು ಕಣ್ಮರೆಯಾಗುವ ಸೌಲಭ್ಯ!: ನಿಮ್ಮ ಯಾವುದೇ ಗೆಳೆಯರ ಚಾಟ್‌ಗೆ ಹೋಗಿ, ಮೂರು ಚುಕ್ಕಿಗಳ ಮೇಲೆ ಒತ್ತಿದರೆ ಕಣ್ಮರೆಯಾಗುವ ಸಂದೇಶ ಅಥವಾ ಇಂಗ್ಲಿಷಿನಲ್ಲಾದರೆ ಡಿಸಪಿಯರಿಂಗ್ ಮೆಸೇಜ್ ಅಂತಿರುವ ಆಯ್ಕೆ ಒತ್ತಿದರೆ 5 ಸೆಕೆಂಡಿನಿಂದ ಮೊದಲುಗೊಂಡು 1 ವಾರದ ನಂತರ ನಿಮ್ಮ ಹಾಗೂ ಆ ಗೆಳೆಯನ ಮೆಸೇಜ್‌ಗಳು ಕಣ್ಮರೆಯಾಗುವ ಆಯ್ಕೆ ಇದೆ! (ಇದು ಪ್ರೇಮಿಗಳಿಗೆ ಅನುಕೂಲವಾಗಬಹುದು! ತಾವು ಮಾಡಿದ ಚಾಟ್‌ಗಳನ್ನು ಅಳಿಸದೇ ಮರೆತುಬಿಟ್ಟರೆ ತಾನಾಗೇ ಅಳಿಸಿಹೋಗುತ್ತದೆ!)
ಸ್ಕ್ರೀನ್‌ಲಾಕ್ ಪಿನ್: ಸಿಗ್ನಲ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ನಾಲ್ಕು ಅಂಕೆಗಳ ಪಿನ್ ನೀಡಬೇಕು. ಆ ಪಿನ್ ಅನ್ನು ನೆನಪಿನಲ್ಲಿಟ್ಟುಕೊಂಡಿಬೇಕು. ನೀವು ಇನ್ನೊಂದು ಫೋನ್‌ನಲ್ಲಿ ಸಿಗ್ನಲ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಈ ಪಿನ್ ನೀಡಬೇಕು.
ಸಿಗ್ನಲ್ ಆ್ಯಪ್ ಆಂಡ್ರಾಯ್ಡ್ ಪ್ಲೇಸ್ಟೋರ್ ಹಾಗೂ ಐಒಎಸ್‌ನ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಇನ್‌ಸ್ಟಾಲ್ ಮಾಡಿದ ಬಳಿಕ ಈಗಾಗಲೇ ನಿಮ್ಮ ಕಾಂಟಾಕ್‌ಟ್ನಲ್ಲಿ ಯಾರ‌್ಯಾರು ಸಿಗ್ನಲ್ ಬಳಸುತ್ತಿದ್ದಾರೆ ಎಂದು ತೋರಿಸುತ್ತದೆ. ಅವರಿಗೆ ಹಾಯ್ ಹೇಳುವ ಮೂಲಕ ನೀವು ಸಿಗ್ನಲ್ ಅನ್ನು ಶುಭಾರಂಭ ಮಾಡಬಹುದು!
-ಕೆ.ಎಸ್. ಬನಶಂಕರ ಆರಾಧ್ಯ