ವಾಟ್ಸ್ಯಾಪ್, ಸದಾ ಅಪ್ ಡೇಟ್‌ಗಳನ್ನು ಕೊಡುತ್ತಲೇ ಬಳಕೆದಾರರ ಮನಗೆದ್ದಿರುವ ಜನಪ್ರಿಯ ಅಪ್ಲಿಕೇಶನ್. ಜಗತ್ತಿನಾದ್ಯಂತ 2 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್ ಈಗ 5 ನೂತನ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಏನವು..?
ಹಳೇ ಮೆಸೇಜ್ ಡಿಲೀಟ್ : ಯಾರ ಜೊತೆಗೋ, ಯಾವತ್ತೋ ನೀವು ಚಾಟ್ ಇಲ್ಲವೇ ಮೆಸೇಜ್ ಮಾಡಿರುತ್ತೀರಿ. ಇಂಥ ಚಾಟ್‌ಗಳಿಗೆ ಮುಕ್ತಿ ಕಾಣಿಸಲು “ಎಕ್ಸ್‌ಪೈರಿಂಗ್ ಮೆಸೇಜಸ್’ ಫೀಚರ್ ಅಳವಡಿಕೆ ಆಗುತ್ತಿದೆ. ನಿರ್ದಿಷ್ಟ ಅವಧಿಯ ಬಳಿಕ ಆಟೋಮ್ಯಾಟಿಕ್ ಆಗಿ ಹಳೇ ಮೆಸೇಜುಗಳು ಡಿಲೀಟ್ ಆಗಲಿವೆ. ಈ ಫೀಚರ್ ಬಳಸಿಕೊಳ್ಳಲು ಇಚ್ಚಿಸು ವವರಿಗೆ ಸೆಟ್ಟಿಂಗ್ಸ್‌ನಲ್ಲಿ ಆನ್/ ಆಫ್ ಆಯ್ಕೆಗಳನ್ನು ನೀಡಲಾಗುತ್ತದೆ.
ಸರ್ಚ್ ಆನ್ ವೆಬ್ : ಫಾರ್ವರ್ಡ್ ಮೆಸೇಜ್ ಹಾವಳಿ ವಾಟ್ಸ್ಯಾಪ್ ಬಳಕೆದಾರರಿಗೆ ದೊಡ್ಡ ತಲೆನೋವು. ಯಾವುದು ಸುಳ್ಳು, ಯಾವುದು ಸತ್ಯ ಎಂಬ ಫ್ಯಾಕ್ಟ್ ಚೆಕ್ ಕೆಲಸವನ್ನು ಸರ್ಚ್ ಆನ್ ವೆಬ್ ಫೀಚರ್ ಮಾಡಲಿದೆ. ಈ ಆಯ್ಕೆ ವೆಬ್ ಜಾಲತಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ನೂತನ ಫೀಚರ್ ಜಾರಿಗೆ ಬಂದಿದ್ದರೂ ಭಾರತೀಯ ಬಳಕೆದಾರರಿಗೆ ಇದಿನ್ನೂ ಲಭ್ಯವಿಲ್ಲ.
ಮ್ಯೂಟ್ ಆಲ್ವೇಸ್ : ವಾಟ್ಸ್ಯಾಪ್‌ನಲ್ಲಿ ಗ್ರೂಪ್ ಇಲ್ಲವೇ ಚಾಟ್‌ಗಳನ್ನು ಮ್ಯೂಟ್ ಮಾಡಲು ಈಗಾಗಲೇ ಆಯ್ಕೆ ಇದೆ. ಆದರೆ ಇದು 8 ಗಂಟೆ, 1 ವಾರ, 1 ವರ್ಷಗಳವರೆಗೆ ಮಾತ್ರ ಮ್ಯೂಟ್ ಆಗಲಿದೆ. ಶಾಶ್ವತವಾಗಿ ಮ್ಯೂಟ್ ಮಾಡುವ “ಮ್ಯೂಟ್ ಆಲ್ವೇಸ್’ ಆಯ್ಕೆಯನ್ನು ವಾಟ್ಸ್ಯಾಪ್ ಈಗತಾನೆ ಪರಿಚಯಿಸಿದೆ.
ಪೇಮೆಂಟ್ಸ್ : ವಾಟ್ಸ್ಯಾಪ್ ಪೇಮೆಂಟ್ಸ್ ಈಗಾಗಲೇ ಭಾರತದಲ್ಲಿ ಪ್ರಯೋಗ ಹಂತದಲ್ಲಿದೆ. ಆದರೆ ಇದು ಬೀಟಾದಲ್ಲಿನ ಬಳಕೆದಾರರಿಗೆ ಅಧಿಕೃತವಾಗಿ ಬಳಸಲು ಇನ್ನೂ ಅವಕಾಶ ಸಿಕ್ಕಿಲ್ಲ. ಅನ್ಯ ವಿದೇಶಿ ಆ್ಯಪ್‌ಗ್ಳಂತೆ ವಾಟ್ಸ್ಯಾಪ್ ಕೂಡ ಬಳಕೆದಾರರ ಡೇಟಾ ಭದ್ರತೆ ವಿಚಾರ ಕುರಿತು ವಿಚಾರಣೆಗೊಳಪಟ್ಟಿದೆ. ಆದರೆ, ಈ ಪರೀಕ್ಷೆಯಲ್ಲಿ ವಾಟ್ಸ್ಯಾಪ್ ಪಾಸ್ ಆಗಿದೆ ಎನ್ನಲಾಗುತ್ತಿದೆ. ಯುಪಿಐ ಆಧರಿಸಿ, ವಾಟ್ಸ್ಯಾಪ್ ಪೇಮೆಂಟ್ಸ್ ಕೆಲಸ ಮಾಡಲಿದೆ. ಐಸಿಐಸಿಐ, ಎಚ್‌ಡಿಎಫ್ಸಿ ಬ್ಯಾಂಕ್ ಈ ಸೇವೆಯಲ್ಲಿ ಪಾಲುದಾರಿಕೆ ಹೊಂದಿವೆ.
ಹೊಸ ಇಮೋಜಿಗಳು : ಈಗಾಗಲೇ ವಾಟ್ಸ್ಯಾಪ್ ನಲ್ಲಿ ಇಮೋಜಿಗಳು ಸಾಕಷ್ಟಿವೆ. ಈಗ ಮತ್ತೆ 138 ಹೊಸ ಇಮೋಜಿಗಳನ್ನು ಬಳಕೆದಾರರಿಗೆ ಪರಿಚಯಿಸಲಿದೆ. ಕಾಲಕ್ಕೆ ತಕ್ಕಂತೆ ಎಮೋಜಿಗಳು ಮನುಷ್ಯನ ಭಾವನೆಗಳನ್ನು ಪ್ರತಿನಿಧಿಸುತ್ತವೆ.