ಒಂದು ವಾಟ್ಸಪ್ ಬಳಸದ ವ್ಯಕ್ತಿಗಳಿಲ್ಲ. ಸ್ಮಾರ್ಟ್ ಪೋನ್ ಬಳಸುವವರೆಲ್ಲರ ದೈನಂದಿನ ಜೀವನದ ಭಾಗವಾಗಿದೆ ಎಂದರೆ ತಪ್ಪಿಲ್ಲ. ವಾಟ್ಸಪ್ ಅನ್ನು ಜಾಬ್ ಕೋಮ್ ಮತ್ತು ಬ್ರಿಯಾನ್ ಆ್ಯಕ್ಟನ್ ಎನ್ನುವವರು 2009ರಲ್ಲಿ ಕಂಡುಹಿಡಿಯುತ್ತಾರೆ. ಜಾನ್ ಕೋಮ್ ಉಕ್ರೇನ್ ನಲ್ಲಿ ತೀರಾ ಬಡ ಕುಟುಂಬದಲ್ಲಿ ಜನಿಸಿದ. ಅಲ್ಲಿ ಯಾವುದೇ ಮೂಲ ಸೌಕರ್ಯಗಳಿರಲಿಲ್ಲ. ಪರಿಣಾಮವಾಗಿ ಜಾನ್ ಕೋಮ್ ಕುಟುಂಬ ಉಕ್ರೇನ್ ಬಿಟ್ಟು ಕ್ಯಾಲಿಫೋರ್ನಿಯಾಗೆ ಬರುತ್ತಾರೆ. ಇಲ್ಲಿ ಸರ್ಕಾರ ನೀಡಿದಂತಹ ಮನೆಯೊಂದರಲ್ಲಿ ವಾಸವಾಗಿರುತ್ತಾರೆ.
ಜಾನ್ ಕೋಮ್ ತಮ್ಮ 16ನೇ ವಯಸ್ಸಿನಲ್ಲಿ ಅಂಗಡಿಯೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆಂದು ಸೇರಿಕೊಳ್ಳುತ್ತಾನೆ. ಇಲ್ಲಿದಂಲೇ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ತೆಗೆದುಕೊಂಡು ಕಂಪ್ಯೂಟರ್ ನೆಟ್ ವರ್ಕಿಂಗ್ ಕುರಿತು ಆಸಕ್ತಿ ಬೆಳಸಿಕೊಂಡು ಅದನ್ನು ದಿನವಿಡಿ ಓದುವುದು ಆತನ ನಿತ್ಯದ ಪರಿಪಾಠವಾಗುತ್ತದೆ. ಪರಿಣಾಮ ಎರಡೇ ವರ್ಷದಲ್ಲಿ ಕಂಪ್ಯೂಟರ್ ನೆಟ್ ವರ್ಕಿಂಗ್ ಕುರಿತು ಸಂಪೂರ್ಣವಾಗಿ ಅರಿತುಕೊಳ್ಲುತ್ತಾನೆ. ನಂತರ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಕಲಿಯಬೇಕೆಂಬ ಉತ್ಕಟ ಆಸೆಯಿಂದ ಸ್ಯಾನ್ ಜೋಸ್ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುತ್ತಾನೆ. ಮಾತ್ರವಲ್ಲದೆ ಅದೇ ವಿಶ್ವವಿದ್ಯಾಲಯದಲ್ಲಿ ಸೆಕ್ಯೂರಿಟಿ ಟೆಸ್ಟರ್ ಆಗಿಯೂ ಪಾರ್ಟ್ ಟೈಮ್ ಕೆಲಸ ಮಾಡುತ್ತಿರುತ್ತಾನೆ. ಇಲ್ಲಿಯೇ ಬ್ರಿಯಾನ್ ಆ್ಯಕ್ಟನ್ ಎಂಬ ವ್ಯಕ್ತಿಯ ಪರಿಚಯವೂ ಆಗುತ್ತದೆ. ಆ್ಯಕ್ಟನ್ ಕೂಡ ಕಂಪ್ಯೂಟರ್ ಪ್ರೋಗ್ರಾಂನಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
ಜಾನ್ ಕೋಮ್ ಸ್ಯಾನ್ ಜೋಸೆಯಲ್ಲಿ ಓದುತ್ತಿರುವಾಗಲೇ ಯಾಹೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಲಭ್ಯವಾಗುತ್ತದೆ. ಆದುದ್ದರಿಂದ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿ ಯಾಹೂ ಸಂಸ್ಥೆಗೆ ಸೇರಿಕೊಳ್ಳುತ್ತಾನೆ. ಇದೇ ಸಂಸ್ಥೆಯಲ್ಲಿ ಬ್ರಿಯಾನ್ ಆ್ಯಕ್ಟನ್ ಅವರಿಗೂ ಕೆಲಸ ಸಿಗುತ್ತದೆ. ಇಬ್ಬರೂ ಕೂಡ ಉತ್ತಮ ಸ್ನೇಹಿತರಾಗಿ ಸರಿಸುಮಾರು 8-9 ವರ್ಷಗಳ ಕಾಲ ಕಾರ್ಯನಿರ್ವಹಿಸಿ, 2007ರಲ್ಲಿ ಯಾಹೂ ವನ್ನು ತೊರೆಯುತ್ತಾರೆ.
2009ರ ವೇಳೆಗಾಗಲೇ ಈ ಇಬ್ಬರು ಹಲವು ಕಂಪೆನಿಗಳಿಗೆ ಕೆಲಸಕ್ಕೆಂದು ಅರ್ಜಿ ಹಾಕಿದರೂ ಎಲ್ಲೆಡೆಯೂ ತಿರಸ್ಕೃತವಾದವು. ಫೇಸ್ ಬುಕ್, ಟ್ವೀಟ್ಟರ್ ಕೂಡ ಅಂದು ಕೆಲಸ ಕೊಡಲು ನಿರಾಕರಿಸುತ್ತದೆ. ಈ ಸಮಯದಲ್ಲಿ ಜಾನ್ ಕೋಮ್ ಆ್ಯಪಲ್ ಐಫೋನ್ ಒಂದನ್ನು ಖರೀದಿಸುತ್ತಾನೆ. ಆ್ಯಪಲ್ ಕೂಡ ಆ ವರ್ಷದಲ್ಲಿ ಉತ್ತಮ ಅಪ್ಲಿಕೇಶನ್ ಗಳನ್ನು ಗ್ರಾಹಕರಿಗೆ ನೀಡಬೇಕೆಂದು ಯೋಜನೆ ರೂಪಿಸುತ್ತಿರುತ್ತದೆ. ಜಾನ್ ಕೋಮ್ ಗೆ ಅಗಲೇ ಒಂದು ಯೋಜನೆ ಹೊಳೆದು ತಾನೇಕೆ ಒಂದು ಆ್ಯಪ್ ಕ್ರಿಯೇಟ್ ಮಾಡಬಾರದು ಎಂದು ಯೋಚಿಸುತ್ತಾನೆ.
ಇದರ ಫಲಶ್ರುತಿಯೆಂಬಂತೆ 24-9-2009 ರಂದು ವಾಟ್ಸಾಪ್ ಎಂಬ ಹೆಸರಿನಲ್ಲಿ ಅಪ್ಲಿಕೇಶನ್ ಒಂದನ್ನು ಆರಂಭಿಸುತ್ತಾನೆ. ಆರಂಭದಲ್ಲಿ ಈ ಆ್ಯಪ್ ಜನರಿಗೆ ತಲುಪಲೇ ಇಲ್ಲ. ಮಾತ್ರವಲ್ಲದೆ ಹಲವಾರು ಸಮಸ್ಯೆ ಇದರಲ್ಲಿ ಉದ್ಭವಿಸಿದವು. ಕೆಲವೊಮ್ಮೆ ಹ್ಯಾಂಗ್ ಆದರೆ. ಮತ್ತೊಮ್ಮೆ ಮೆಸೇಜ್ ಕೂಡ ಸೆಂಡ್ ಆಗುತ್ತಿರಲಿಲ್ಲ. ಜಾನ್ ಸ್ನೇಹಿತ ಬ್ರಿಯಾನ್ ಆ್ಯಕ್ಟ್ ಹಲವು ಸಲಹೆ ಮಾರ್ಗ ಸೂಚಿಗಳನ್ನು ನೀಡುತ್ತಾರೆ. ಅದಾಗ್ಯೂ ಈ ಆ್ಯಪ್ ಕೆಲಕಾಲ ಬೆಳವಣಿಗೆಯನ್ನೇ ಕಾಣಲಿಲ್ಲ.
ಜೂನ್ 2009ರಂದು ಆ್ಯಪಲ್ ಸಂಸ್ಥೆ ಪುಶ್ ನೋಟಿಫಿಕೇಶನ್(Push Notification) ಜಾರಿಗೆ ತರುತ್ತಾರೆ. ಆ ಸಮಯದಲ್ಲಿ ಜಾನ್ ಕೋಮ್ ಕೂಡ ತನ್ನ ಮೆಸೆಂಜಿಂಗ್ ಆ್ಯಪ್ ಅನ್ನು ಅಪ್ ಡೇಟ್ ಮಾಡುತ್ತಾರೆ. ಪರಿಣಾಮವಾಗಿ ಸುಲಭವಾಗಿ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ವಾಟ್ಸಾಪ್ ಮೂಲಕ ಮೆಸೇಜ್ ಬಂದಾಗ ನೋಟಿಪಿಕೇಶನ್ ಗಳು ಕೂಡ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆರಂಭದಲ್ಲಿ ವಾಟ್ಸಾಪ್ ಇನ್ ಟ್ಸಾಲ್ ಮಾಡಿಕೊಳ್ಳುವ ಗ್ರಾಹಕರಿಗೆ ಒಟಿಪಿ ನಂಬರ್ ಕಳುಹಿಸಬೇಕಾಗಿತ್ತು. ಈ ನಂಬರ್ ಕಳುಸುವುದಕ್ಕಾಗಿ ನಿಗದಿತ ಬೆಲೆ ತೆರಬೇಕಾಗಿತ್ತು. ಇದಕ್ಕಾಗಿಯೇ ಜಾನ್ ಕೋಮ್ ಬ್ಯಾಂಕ್ ಅಕೌಂಟ್ ನಿಂದ ಕೋಟ್ಯಾಂತರ ಹಣ ವೆಚ್ಚವಾಗತೊಡಗಿದವು.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ವಾಟ್ಸಾಪ್ ಅನ್ನು 2.5 ಲಕ್ಷ ರಷ್ಟು ಜನರು ಬಳಕೆ ಮಾಡಲು ಆರಂಭಿಸುತ್ತಾರೆ. ಇದರಿಂದ ಉತ್ಸಾಹಿತನಾದ ಬ್ರಿಯಾನ್ ಆ್ಯಕ್ಟನ್ 2009ರ ಆಗಸ್ಟ್ ನಲ್ಲಿ ವಾಟ್ಸಾಪ್ ಗೆ ಅಧಿಕೃತವಾಗಿ ಸೇರಿಕೊಳ್ಳುತ್ತಾನೆ. ಮಾತ್ರವಲ್ಲದೆ ಯಾಹೂ ಸ್ನೇಹಿತರ ಜೊತೆಗೂಡಿ ಹಣಕಾಸಿನ ನೆರವನ್ನು ಓದಗಿಸುತ್ತಾನೆ. ಪರಿಣಾಮವಾಗಿ ಆ್ಯಪಲ್ ಸ್ಟೋರ್ ನಲ್ಲಿ ವೆರಿಫ್ಯ್ ಆಗಿದ್ದು ಮಾತ್ರವಲ್ಲದೆ 2010 ರಲ್ಲಿ ವಾಟ್ಸಾಪ್ ಭಾರತದಲ್ಲಿ ಬಿಡುಗಡೆಯಾಗುತ್ತದೆ.
2011ರಲ್ಲಿ ಹಲವು ಕಂಪೆನಿಗಳು ವಾಟ್ಸಾಪ್ ಗೆ ಹೂಡಿಕೆ ಮಾಡಲು ತೊಡಗುತ್ತವೆ. 2013ರಲ್ಲಿ 20 ಕೋಟಿ ಜನರು ಜನರು ಇದರತ್ತ ಆಕರ್ಷಿತರಾಗಿ ಈ ಆ್ಯಪ್ ಬಳಕೆ ಮಾಡಿದರೆ, 2014ರಲ್ಲಿ ಈ ಸಂಖ್ಯೆ ದ್ವಿಗುಣಗೊಂಡು 50 ಕೋಟಿ ಜನರು ಬಳಕೆ ಮಾಡುತ್ತಾರೆ. ಪರಿಣಾಮ ತಂತ್ರಜ್ಞಾನ ದೈತ್ಯ ಕಂಪೆನಿಗಳೆಲ್ಲಾ ವಾಟ್ಸಾಪ್ ನತ್ತ ತಿರುಗಿ ನೋಡುವಂತಾಯಿತು. ಇದೆ ವೇಳೆಗೆ ವಾಟ್ಸಾಪ್ ಅನ್ನು ಫೇಸ್ ಬುಕ್ ಬರೋಬ್ಬರಿ 19 ಬಿಲಿಯನ್ ಡಾಲರ್ ನೀಡಿ ಖರೀದಿಸುತ್ತದೆ. ಮಾತ್ರವಲ್ಲದೆ ಜಾನ್ ಕೋಮ್ ಫೇಸ್ ಬುಕ್ ಮಂಡಳಿಯ ಸದಸ್ಯರು ಕೂಡ ಆಗುತ್ತಾರೆ. ಗಮನಾರ್ಹ ಸಂಗತಿಯೆಂದರೇ ಅತೀ ಹೆಚ್ಚು ಬೆಲೆಗೆ ಖರೀದಿಸಲ್ಪಟ್ಟ ಆ್ಯಪ್ ಎಂದರೇ ಅದು ವಾಟ್ಸಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಇದೇ ಫೇಸ್ ಬುಕ್ ಕಂಪೆನಿ ಈ ಮೊದಲು ಜಾನ್ ಕೋಮ್ ಮತ್ತು ಬ್ರಿಯಾನ್ ಆ್ಯಕ್ಟನ್ ಅವರಿಗೆ ಕೆಲಸ ಕೊಡಲು ನಿರಾಕರಿಸಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.
ವಾಟ್ಸಾಪ್ ಅನ್ನು ಬಳಕೆಗೆ ತರುವಾಗ ಜಾನ್ ಕೋಮ್ ಅವರ ಮೂಲ ಉದ್ದೇಶ, ಯಾವುದೇ ಜಾಹೀರಾತುಗಳಿಲ್ಲದೆ, ಪ್ರೈವಸಿಗೆ ಧಕ್ಕೆ ಬಾರದಂತೆ ಬಳಕೆದಾರರಿಗೆ ಉತ್ತಮ ಮೆಸೆಂಜಿಂಗ್ ಸೇವೆ ನೀಡಬೇಕೆಂಬುದೇ ಆಗಿತ್ತು. ವಾಟ್ಸಾಪ್ ಬಳಕೆಗೆ ಬಂದು 10 ವರ್ಷ ಕಳೆದರೂ ಇಂದಿಗೂ ಕೂಡ ಅದರಲ್ಲಿ ಜಾಹೀರಾತು ಕಾಣಿಸಿಕೊಂಡಿಲ್ಲ. ಈ ಆ್ಯಪ್ ನ ಯಶಸ್ಸಿನಲ್ಲಿ ಇದು ಕೂಡ ಬಹುಮುಖ್ಯ ಪಾತ್ರವಹಿಸುತ್ತದೆ. ಇಂದು 30 ಬಿಲಿಯನ್ ಮೆಸೇಜಸ್ ಗಳು ವಾಟ್ಸಾಪ್ ಮೂಲಕ ಪ್ರತಿದಿನ ಹರಿದಾಡುತ್ತದೆ.
ವರ್ಷ ಕಳೆದಂತೆ ವಾಟ್ಸಾಪ್ ಅಪ್ ಡೇಟ್ ಆಗುತ್ತಿದ್ದು ಇಂದು ಟೆಕ್ಸ್ಟ್ ಮೆಸೇಜ್, ವಾಯ್ಸ್ ಕಾಲ್ಸ್, ರೆಕಾರ್ಡೆಡ್ ವಾಯ್ಸ್ ಮೆಸೇಜಸ್, ವಿಡಿಯೋ ಕಾಲ್ ಮುಂತಾದ ಹಲವು ಸೌಲಭ್ಯಗಳನ್ನು ಪರಿಚಯಿಸಿದೆ.
ಇತರ ಪ್ರಮುಖ ಅಂಶಗಳು:
- 180 ದೇಶಗಳಲ್ಲಿ 1.5 ಬಿಲಿಯನ್ ಆ್ಯಕ್ಟಿವ್ ಯೂಸರ್ಸ್
- ವಾಟ್ಸಾಪ್ ಸ್ಟೇಟಸ್ ಅನ್ನು ಪ್ರತಿನಿತ್ಯ 500 ಮಿಲಿಯನ್ ಜನರು ಅಪ್ ಡೇಟ್ ಮಾಡುತ್ತಾರೆ.
- ಭಾರತದಲ್ಲಿ ವಾಟ್ಸಾಪ್ ಬಳಸುವವರ ಸಂಖ್ಯೆ – 400 ಮಿಲಿಯನ್
- ಚೀನಾದಲ್ಲಿ ಕೇವಲ 2 ಮಿಲಿಯನ್ ಜನರು ವಾಟ್ಸಾಪ್ ಬಳಸುತ್ತಾರೆ.
-ಮಿಥುನ್ ಮೊಗೇರ