Advertisement

ವಾಟ್ಸಾಪ್‌ ಕತೆ : ಕೊನೆಯ ಬೆಂಚಿನ ಹುಡುಗ

06:30 PM Nov 02, 2019 | Team Udayavani |

ಯೋಗೀಶ್‌ ಕಾಂಚನ್‌
ಅವನೊಬ್ಬ ಕೊನೆಯ ಬೆಂಚಿನ ಹುಡುಗ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆ ಇಲ್ಲ. ತಾಯಿ ಮನೆಮನೆಯಲ್ಲಿ ಕಸ ಬಳಿದು, ಮುಸುರೆ ತಿಕ್ಕಿ ಜೀವನ ಸಾಗಿಸುತ್ತಿದ್ದಳು. ಈ ಹುಡುಗನೂ ಬೆಳಗ್ಗೆ ಬೇಗ ಎದ್ದು ಪೇಪರ್‌ ಹಾಕಿ, ಶಾಲೆಗೆ ಹೋಗಿ, ಸಂಜೆ ಮರಳಿ ಬಂದು, ಅಂಗಡಿಯೊಂದರಲ್ಲಿ ಸಾಮಾನು ಕಟ್ಟಿ- ಅದು ಹೇಗೋ ಜೀವನ ಸಾಗಿಸುತ್ತಿದ್ದ. ಓದಲು ಅವಕಾಶವಿಲ್ಲ. ಅಂಕಗಳು ಕಡಿಮೆ. ಈ ಹುಡುಗ ರಿಪೇರಿಯಾಗುವವವನಲ್ಲ ಎಂದು ಮೇಷ್ಟ್ರುಗಳು ನಿರ್ಲಕ್ಷ್ಯ ವಹಿಸಿದರು. ಸಹಪಾಠಿಗಳು ಅವನನ್ನು “ದಡ್ಡ’ ಎಂದು ದೂರ ಇಟ್ಟರು.

Advertisement

ಅವನ ಸಹಪಾಠಿಯೊಬ್ಬನಿದ್ದ. ಎಲ್ಲ ವಿಷಯಗಳಲ್ಲಿಯೂ ಪ್ರಥಮ ಸ್ಥಾನಿ. ಎಲ್ಲರಿಗೂ ಅವನ ಬಗ್ಗೆ ಅಚ್ಚುಮೆಚ್ಚು. ಶಾಲಾದಿನಗಳು ಮುಗಿದವು. ಎಷ್ಟೋ ಮಳೆಗಾಲಗಳು ಕಳೆದುಹೋದವು. ಎಲ್ಲರೂ ಬೇರೆಬೇರೆ ಕಡೆಗಳಿಗೆ ಚದುರಿಹೋದರು. ಕಲಿಯುವುದರಲ್ಲಿ ಮುಂದಿದ್ದು ಪ್ರಥಮಸ್ಥಾನಿಯಾದ ಹುಡುಗ ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ. ಕೆಲವು ಸಮಯ ದುಡಿದ ಬಳಿಕ ಅವನಿಗೆ ಆ ಕಂಪೆನಿ ಬಿಟ್ಟು ಬೇರೆಡೆಗೆ ಸೇರಬೇಕೆಂದೆನಿಸಿತು.

ಮತ್ತೂಂದು ಕಂಪೆನಿಗೆ ಅರ್ಜಿ ಹಾಕಿದ. ಇಂಟರ್‌ವ್ಯೂಗೆ ಕರೆಬಂತು. ಹೋದ. ಕಂಪೆನಿಯ ಮುಖ್ಯಸ್ಥನ ಕೊಠಡಿಯನ್ನು ಪ್ರವೇಶಿಸಿದ.  ನೋಡಿದರೆ… ಅದೇ ಪರಿಚಿತ ಮುಖ. “ನೀನು ಅವನಲ್ಲವಾ?’ ಎಂಬ ಉದ್ಗಾರವೊಂದು ಅವನ ಬಾಯಿಯಿಂದ ಹೊರಟಿತು! “ಹೌದು ನಾನೇ!’

ಸಂತೆಯ ದಾರಿ
ಮಂಜುನಾಥ ಸ್ವಾಮಿ ಕೆ. ಎಂ.
ಪ್ರತಿ ಗುರುವಾರ ನಾನು ಕೆಲಸ ಮಾಡುವ ಶ್ರೀರಾಮನಗರದಲ್ಲಿ ವಾರದ ಸಂತೆಯಿರುತ್ತದೆ. ಕಾಲೇಜಿನ ಅವಧಿಯ ನಂತರ ಮನೆಗೆ ಸೊಪ್ಪು, ತರಕಾರಿ ತರಲು ಸಹೋದ್ಯೋಗಿಗಳ ಜೊತೆಗೆ ಹೋಗುವುದು ವಾಡಿಕೆ. ಸಂಜೆಯಾಗಿರುವುದರಿಂದ ಜನಜಂಗುಳಿ ಜಾಸ್ತಿ. ನಾವು ಸಂತೆ ಮಾರುಕಟ್ಟೆ ಪ್ರವೇಶಿಸುವ ದಾರಿಯೂ ಹೆಚ್ಚು ಗಜಿಬಿಜಿಯಿಂದ ಕೂಡಿರುತ್ತದೆ. ತರಕಾರಿ, ಸೊಪ್ಪು ಇತ್ಯಾದಿಗಳನ್ನು ಕೊಂಡ ನಂತರ ಪಾಪ್‌ಕಾರ್ನ್ ಮಾರುವವನ ಹತ್ತಿರ ಹೋಗಿ ಒಂದು ಪಾಕೆಟ್‌ ಕೊಳ್ಳುವುದು ವಾಡಿಕೆ.

ಪಾಪ್‌ ಕಾರ್ನ್ ಮಾರುವವನು, “ಹತ್ತುರೂಪಾಯಿಗೊಂದು ಪಾಕೆಟ್‌ ‘ ಎಂದು ಕೂಗುತ್ತ , ನನ್ನನ್ನು ಕಂಡೊಡನೆ, “ಬರ್ರೀ ಮೇಷ್ಟ್ರೇ ತೊಗೊಳ್ಳಿ’ ಎಂದು ಒಂದು ಪಾಕೆಟ್‌ ನೀಡುತ್ತಿದ್ದ. ಆತ ರಸ್ತೆ ಮಧ್ಯೆ ನಿಂತು ಪಾಪ್‌ಕಾರ್ನ್ ಮಾರುತ್ತಿದ್ದುದರಿಂದ ಉಳಿದ ಜನರಿಗೆ, ಹಿಂದೆ ಮುಂದೆ ಓಡಾಡುವವರಿಗೆ ತೊಂದರೆಯೆನಿಸುತ್ತಿತ್ತು. ಒಂದು ದಿನ ಆ ಗೌಜುಗದ್ದಲದ ನಡುವೆ ಆತನನ್ನು ಮಾತಿಗೆಳೆದು, “”ದಾರಿ ಮಧ್ಯೆ ನಿಂತು ನೀನು ವ್ಯಾಪಾರ ಮಾಡುವುದರಿಂದ ಉಳಿದವರಿಗೆ ತೊಂದರೆ ಆಗುವುದಿಲ್ಲವಾ?” ಎಂದು ಕೇಳಿದೆ.

Advertisement

ಅದಕ್ಕವನು, “ಏನ್ಮಾಡೋದು ಸಾರ್‌, ಹೊಟ್ಟೆಪಾಡು’ ಎನ್ನುತ್ತ, “”ಈಗ ಸಂತೆಯಾಗಿರುವುದು ಒಂದು ಕಾಲದ ಜನ ನಡೆದಾಡುತ್ತಿದ್ದ ದಾರಿಯಾಗಿರಬಹುದು. ಅಂದರೆ, ಜನ ನಡೆದಾಡುತ್ತಿದ್ದ ದಾರಿಯಲ್ಲಿ ಈಗ ಸಂತೆ ಇಟ್ಟಿರಬಹುದು. ಹಾಗೆ ನೋಡಿದರೆ, ಸಂತೆಯೇ ಕೆಲವರ ಬದುಕಿನ ದಾರಿಯಲ್ಲವೆ…” ಎಂದೆಲ್ಲ ಹೇಳುತ್ತಿದ್ದಂತೆ ನಾನು ಅಲ್ಲಿಂದ ಮೆಲ್ಲನೆ ಕದಲಿದೆ.

ಮಾತಿನ ಬೆಲೆ
ಹೀರಾ ರಮಾನಂದ್‌
ಹಲ್ಲು ನೋವಿನಿಂದ ಒದ್ದಾಡುತ್ತಿದ್ದೆ. ಆಟೋಸ್ಟಾಂಡಿಗೆ ಬಂದೆ. ಡಾಕ್ಟರ್‌ ಕ್ಲಿನಿಕ್‌ ಹತ್ತಿರ ಇರುವುದರಿಂದ ಆಟೋದವರು ಬರಲು ಒಪ್ಪುತ್ತಿರಲಿಲ್ಲ. ಆದರೂ ಒಬ್ಬನನ್ನು ವಿನಂತಿಸಿ ಹೇಗೋ ಕ್ಲಿನಿಕ್‌ ತಲುಪಿದೆ.

ಕ್ಲಿನಿಕ್‌ನಲ್ಲಿ ಜನ ಬಹಳ. ಸುಮಾರು ಜನರ ನಂತರ ನನ್ನ ಸರದಿ ಬಂತು. ಬಾಯಿ ತೆಗೆಯಬೇಕಾರೆ ನೋವು ! “ಅಮ್ಮಾ’ ಅಂತ ಕಿರುಚಿದೆ. ಹಲ್ಲು ಕಿತ್ತು ಬಾಯಿ ತುಂಬಾ ಹತ್ತಿ ಇಟ್ಟು ,”ಎರಡು ಗಂಟೆ ಮಾತನಾಡಬೇಡಿ’ ಎಂದು ಹೇಳಿ ಔಷಧಿ ಚೀಟಿ ಬರೆದುಕೊಟ್ಟರು.

ಔಷಧಿ ಚೀಟಿಯ ಮತ್ತೂಂದು ಮಗ್ಗುಲಲ್ಲಿ ನನ್ನ ಮನೆಯ ವಿಳಾಸ ಬರೆದಿದ್ದೆ- ಆಟೋದವರಿಗೆ ತೋರಿಸಲು ! ಆಟೋಸ್ಟಾಂಡಿನ ಬಳಿಗೆ ಬಂದು ಚಾಲಕನೊಬ್ಬನಿಗೆ ಚೀಟಿಯಲ್ಲಿ ಬರೆದ ವಿಳಾಸ ತೋರಿಸಿದೆ. ಅಂತರ ಹೆಚ್ಚಿಲ್ಲದ ಕಾರಣ ಆತ ನನ್ನನ್ನು ಡ್ರಾಪ್‌ ಮಾಡಲು ಒಪ್ಪಲಿಲ್ಲ. ಆದರೂ ನನ್ನನ್ನೊಮ್ಮೆ ನೋಡಿ, ಆಟೋದಲ್ಲಿ ಕುಳಿತುಕೊಳ್ಳಲು ಹೇಳಿದ. ಪಕ್ಕದ ಆಟೋದವನ ಬಳಿ, “ಪಾಪ! ಈ ಹೆಂಗಸಿಗೆ ಮಾತು ಬಾರದು. ಇಲ್ಲೇ ಹತ್ತಿರ ಮನೆಯಿರಬೇಕು. ಬೇಗ ಬಿಟ್ಟು ಬರುತ್ತೇನೆ’ ಎಂದು ಆಟೋ ಸ್ಟಾರ್ಟ್‌ ಮಾಡಿ ಬರ್ರ ಅಂತ ಹೊರಟ.  ಅನಿವಾರ್ಯವಾಗಿ ಒದಗಿದ ಮೂಕತನ ನನಗೆ ಮಾತಿನ ಬೆಲೆಯನ್ನು ಗೊತ್ತು ಮಾಡಿಸಿತ್ತು !

Advertisement

Udayavani is now on Telegram. Click here to join our channel and stay updated with the latest news.

Next