ಮುಂಬೈ: ಈಗಾಗಲೇ ಮೇ 15 ರಿಂದ ವಾಟ್ಸ್ ಆ್ಯಪ್ ತನ್ನ ಹೊಸ ಗೌಪ್ಯತಾ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದಕ್ಕಾಗಿ ಮತ್ತೊಮ್ಮೆ ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಲು ಆರಂಭಿಸಿದ್ದು, ಹೊಸ ಪ್ರೈವಸಿ ಪಾಲಿಸಿಗೆ ಒಪ್ಪಿಗೆ ಸೂಚಿಸುವಂತೆ ತಿಳಿಸಿದೆ.
ಈ ಮೊದಲು ಫೆಬ್ರವರಿ 8ರಂದು ವಾಟ್ಸ್ ಆ್ಯಪ್, ಹೊಸ ಗೌಪ್ಯತಾ ನೀತಿ ಜಾರಿಗೊಳಿಸುವುದಾಗಿ ತಿಳಿಸಿತ್ತು, ಮಾತ್ರವಲ್ಲದೆ ಹೊಸ ಸೇವಾ ನಿಯಮ ಒಪ್ಪದಿದ್ದರೇ ಅಕೌಂಟ್ ಡಿಲೀಟ್ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಆದರೆ ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಬಳಿಕ ಹೊಸ ನಿಯಮವನ್ನು ಮೇ 15ಕ್ಕೆ ಮುಂದೂಡಲಾಗಿತ್ತು.
ಇದನ್ನೂ ಓದಿ: ನಮ್ಮ ಗೌರವ ರಕ್ಷಣೆಗೆ ನ್ಯಾಯಾಲಯದ ಮೊರೆ, ನಮಗೆ ಯಾವುದೇ ಭಯವಿಲ್ಲ: ಸಚಿವ ನಾರಾಯಣಗೌಡ
ಈ ವೇಳೆ ಹಲವಾರು ಬಳಕೆದಾರರು ವಾಟ್ಸಾ ಆ್ಯಪ್ ನಿಂದ ಸಿಗ್ನಲ್, ಟೆಲಿಗ್ರಾಂ ನಂತಹ ಆ್ಯಪ್ ಗಳತ್ತ ಮುಖಮಾಡಿದ್ದರು. ಇದಕ್ಕೆಲ್ಲಾ ಖಾಸಗಿ ಮಾಹಿತಿಗಳನ್ನು ವಾಟ್ಸಾಪ್, ಮತ್ತೊಂದು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನೊಂದಿಗೆ ಹಂಚಿಕೊಳ್ಳುತ್ತಿದೆ ಎಂಬುದೇ ಕಾರಣವಾಗಿತ್ತು. ಈ ಕುರಿತು ವಾಟ್ಸಾಪ್ ಸಂಸ್ಥೆ ಹಲವಾರು ಬಾರಿ ಸ್ಪಷ್ಟನೆ ನೀಡಿತ್ತು. ಅದರ ಜೊತೆಗೆ ಎಂಡ್ ಟು ಎಂಡ್ ಎನ್ ಕ್ರಿಫ್ಟೆಡ್ ಕುರಿತು ಸಮರ್ಪಕವಾದ ಮಾಹಿತಿ ನೀಡಿತ್ತು.
ಇದೀಗ ಮಗದೊಮ್ಮೆ ತನ್ನ ಪಾಲಿಸಿ ಒಪ್ಪುವಂತೆ ವಾಟ್ಸ್ ಆ್ಯಪ್ ನೋಟಿಫಿಕೇಶನ್ ಕಳುಹಿಸಲು ಆರಂಭಿಸಿದ್ದು, ಹೊಸ ಸೇವೆ ಪಡೆಯಬೇಕಾದರೆ ಮೇ 15 ರೊಳಗೆ ಅದಕ್ಕೆ ಒಪ್ಪಿಗೆ ನೀಡಿ ಎಂದು ತಿಳಿಸಿದೆ. ಈ ಕುರಿತು ಹಲವಾರು ಬಳಕೆದಾರರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.