Advertisement

ವಾಟ್ಸಾಪ್ ಪೇಮೆಂಟ್ ಆರಂಭ: ಇನ್ನು ಫೋಟೋ ಕಳುಹಿಸಿದಷ್ಟು ಸುಲಭವಾಗಿ ಹಣ ವರ್ಗಾವಣೆ !

12:59 PM Jun 16, 2020 | Mithun PG |

ಬ್ರೆಜಿಲ್: ಗೂಗಲ್ ಪೇ, ಫೋನ್ ಪೇ ರೀತಿಯೇ ಇದೀಗ ವಾಟ್ಸಾಪ್ ಪೇಮೆಂಟ್ ಸೇವೆ  ಬ್ರೆಜಿಲ್‌ನಲ್ಲಿ ಆರಂಭವಾಗಿದೆ. ವಾಟ್ಸಾಪ್ ನಲ್ಲಿ ಹಣ ವರ್ಗಾವಣೆಯನ್ನು  ಫೇಸ್‌ಬುಕ್ ಪೇ ತಂತ್ರಜ್ಞಾನದಿಂದ ನಡೆಸಲಾಗುವುದು, ಮಾತ್ರವಲ್ಲದೆ ಈ  ಪಾವತಿ ಸೇವೆಯನ್ನು ಬ್ರೆಜಿಲ್‌ನ ಫಿನ್‌ಟೆಕ್ ಕಂಪನಿ ಸಿಯೆಲೊ ಪ್ರಕ್ರಿಯೆಗೊಳಿಸಲಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಫೇಸ್ ಬುಕ್ ಸಂಸ್ಥಾಪಕ  ಮಾರ್ಕ್ ಜುಕರ್‌ಬರ್ಗ್ “ಇನ್ನು ಮುಂದೆ ನಾವು ಫೋಟೋಗಳನ್ನು ಹಂಚಿಕೊಳ್ಳುವಷ್ಟು ಸುಲಭವಾಗಿ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅದರ ಜೊತೆಗೆ ಸಣ್ಣ ಉದ್ಯಮಗಳು ತಮ್ಮ ಉತ್ಪನ್ನಗಳನ್ನು  ವಾಟ್ಸಾಪ್‌ ನಲ್ಲಿಯೇ ಮಾರಾಟ ಮಾಡಲು ಅನುವು ಮಾಡಿಕೊಡಲಾಗುವುದು” ಎಂದಿದ್ದಾರೆ.

ಬ್ರೆಜಿಲ್ ನಲ್ಲಿ ವಾಟ್ಸಾಪ್  ಅನ್ನು ಸುಮಾರು 120 ಮಿಲಿಯನ್ ಜನರು ಬಳಸುತ್ತಿದ್ದಾರೆ.  ಇದು ಭಾರತದ ನಂತರದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ನಂತರ ವಾಟ್ಸಾಪ್ ಪೇಮೆಂಟ್ ಪರೀಕ್ಷಿಸಲಾದ ಎರಡನೇ ದೇಶ ಬ್ರೆಜಿಲ್. ಭಾರತದಲ್ಲಿ 2018ರಲ್ಲೇ ಈ ಫೀಚರ್ ಅನ್ನು ಪರಿಚಯಿಸಲಾಗಿತ್ತು.

ಬ್ರೆಜಿಲ್ ನಲ್ಲಿ ವಾಟ್ಸಾಪ್  ಹಲವಾರು ಸ್ಥಳೀಯ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದಾಗಿ ಬಳಕೆದಾರರು ಅವರೊಂದಿಗೆ ಚಾಟ್ ಮಾಡಬಹುದು ಮತ್ತು ಸುಲಭವಾಗಿ ಪಾವತಿಗಳನ್ನು ಮಾಡಬಹುದು. ಇದಕ್ಕಾಗಿ ಬಳಕೆದಾರರು  ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇವಲ ಒಂದು ಬಾರಿ ನಮೂದಿಸಿದರಾಯಿತು. ಯಾವುದೇ ಹಣವನ್ನು ವಿಶೇಷವಾಗಿ ಪಾವತಿಸಬೇಕಾಗಿಲ್ಲ ಎಂದು ಜುಕರ್ ಬರ್ಗ್ ಸ್ಪಷ್ಟನೆ ನೀಡಿದ್ದಾರೆ.

Advertisement

ವಾಟ್ಸಾಪ್ ಪೇಮೆಂಟ್ ಸೇವೆಯನ್ನು ಇನ್ನು ಹಲವಾರು ರಾಷ್ಟ್ರಗಳಿಗೆ ವಿಸ್ತರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next