ಕ್ಯಾಲಿಫೋರ್ನಿಯಾ: ಸಂದೇಶ ಸೇವೆ ನೀಡುವ ಸಾಮಾಜಿಕ ಜಾಲತಾಣ ವಾಟ್ಸಪ್ ಇಂದು ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತವಾಗಿತ್ತು. ವಾಟ್ಸಪ್ ಇತಿಹಾಸದಲ್ಲಿ ಅತೀ ಹೆಚ್ಚು ಕಾಲ ಡೌನ್ ಆದ ಪ್ರಸಂಗ ಇದಾಗಿದ್ದು, ವಿಶ್ವದ ಹಲವು ದೇಶಗಳಲ್ಲಿ ಕೋಟ್ಯಾಂತರ ಜನರ ಬಳಕೆದಾರರು ಪರದಾಡಿದರು.
ಮಧ್ಯಾಹ್ನ 12.07ರಿಂದ ವಾಟ್ಸಪ್ ಡೌನ್ ಆದ ಬಗ್ಗೆ ಆನ್ ಲೈನ್ ಟೂಲ್ ಡೌನ್ ಡಿಟೆಕ್ಟರ್ ಗಮನಿಸಿದೆ. ಆದರೆ ಭಾರತದಲ್ಲಿ ಬಹುತೇಕ 12.30ರ ಬಳಿಕ ಸಮಸ್ಯೆ ಕಂಡುಬಂತು. ವಾಟ್ಸಪ್ ನ ಅತೀ ದೊಡ್ಡ ಬಳಕೆದಾರರ ಮಾರುಕಟ್ಟೆಯಾದ ಭಾರತದಲ್ಲಿ ಸಮಸ್ಯೆ ಹೆಚ್ಚಾಗಿ ಕಂಡು ಬಂತು.
ಭಾರತ ಮತ್ತು ಇತರ ದೇಶಗಳಲ್ಲಿ ಮಧ್ಯಾಹ್ನದ ನಂತರ ಅದು ಕೆಲಸ ಮಾಡುವುದನ್ನು ನಿಲ್ಲಿಸಿತು. ಮಧ್ಯಾಹ್ನ 2.15 ರ ಹೊತ್ತಿಗೆ ಮರುಸ್ಥಾಪನೆಯು ಪ್ರಾರಂಭವಾಯಿತು, ಆದರೂ ಬಳಕೆದಾರರು ಅದರ ಡೆಸ್ಕ್‌ಟಾಪ್ ಅಪ್ಲಿಕೇಶನ್ ನಲ್ಲಿ ದೋಷವಿದ್ದು, ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲಹೊತ್ತು ವರದಿ ಮಾಡಿದ್ದಾರೆ. ಬಳಿಕ ಆ ಸಮಸ್ಯೆಯೂ ಪರಿಹಾರ ಕಂಡಿದೆ.
ಇದನ್ನೂ ಓದಿ:ಗಂಡನಿಂದ ಜೀವಂತ ಸಮಾಧಿ ಆದಾಕೆ ಆ್ಯಪಲ್ ವಾಚ್ ನಿಂದ ಬದುಕಿ ಬಂದಳು.!
ಇಟಲಿ ಮತ್ತು ಟರ್ಕಿಯ ಸಾಮಾಜಿಕ ಮಾಧ್ಯಮ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಯುಕೆಯಾದ್ಯಂತ ಬಳಕೆದಾರರಿಗೆ ಸಂದೇಶ ಕಳುಹಿಸುವ ಸೇವೆಯು ಸ್ಥಗಿತಗೊಂಡಿದೆ ಎಂದು ಬಿಬಿಸಿ ವರದಿ ಮಾಡಿದೆ. ಸುಮಾರು ಎರಡು ಬಿಲಿಯನ್ ಬಳಕೆದಾರರು ಸಂವಹನ ಮತ್ತು ಪಾವತಿಗಾಗಿ ವಾಟ್ಸಪ್ ಅನ್ನು ಅವಲಂಬಿಸಿದ್ದಾರೆ.
ವಾಟ್ಸಪ್ ಸ್ಥಗಿತವಾಗಿದ್ದಾಗ ಟ್ವೀಟ್ ಮಾಡಿರುವ ಮೆಟಾದ ವಕ್ತಾರರು, ಪ್ರಸ್ತುತ ಕೆಲವು ಜನರು ಸಂದೇಶಗಳನ್ನು ಕಳುಹಿಸಲು ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗ ಎಲ್ಲರಿಗೂ ವಾಟ್ಸಪನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.