ಸ್ಯಾನ್ ಫ್ರಾನ್ಸಿಸ್ಕೋ : ಸಂದೇಶ ರವಾನೆ ಸೇವೆಗಳ ದಿಗ್ಗಜ ವಾಟ್ಸಾಪ್ ನ ಸಹ ಸಂಸ್ಥಾಪಕ ಜಾನ್ ಕೋಮ್ ಅವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತಾನು ಫೇಸ್ ಬುಕ್ ಕಂಪೆನಿಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ದಿನ ನಿತ್ಯ ಒಂದು ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಕಂಪೆನಿಯನ್ನು ನಾಲ್ಕು ವರ್ಷಗಳ ಹಿಂದೆ, ಅಂದರೆ 2014ರಲ್ಲಿ 19 ಶತಕೋಟಿ ಡಾಲರ್‌ಗಳಿಗೆ ಫೇಸ್ ಬುಕ್ ಖರೀದಿಸಿತ್ತು. ಜಾನ್ ಕೋಮ್ ಅವರು ಸ್ಟಾನ್‌ಫರ್ಡ್ ಹಳೆವಿದ್ಯಾರ್ಥಿ ಹಾಗೂ ಉಕ್ರೇನ್ ವಲಸಿಗರಾಗಿದ್ದಾರೆ.
ಫೇಸ್ ಬುಕ್‌ನಲ್ಲಿ ಬಳಕೆದಾರರ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಗಳ ರಕ್ಷಣೆಯ ಆದ್ಯ ಪ್ರತಿಪಾದಕರಾಗಿದ್ದ ಜಾನ್ ಕೋಮ್ ಅವರ ನಿರ್ಗಮನದಿಂದ ಫೇಸ್ ಬುಕ್ ಗೆ ಬಳಕೆದಾರರ ಮಾಹಿತಿ ಗೌಪ್ಯತೆಯನ್ನು ಕಾಪಿಡುವ ಬದ್ಧತೆಗೆ ಭಾರೀ ಹಿನ್ನಡೆ ಒದಗಿದಂತಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಬಳಕೆದಾರರ ಮಾಹಿತಿಗಳನ್ನು ಬಳಸುವಲ್ಲಿ ಮತ್ತು ಅದರ ಎನ್‌ಕ್ರಿಪ್‌ಶನ್ ಅನ್ನು ದುರ್ಬಲಗೊಳಿಸುವಲ್ಲಿನ ಫೇಸ್ ಬುಕ್ ಯತ್ನಗಳ ಬಗ್ಗೆ ನಡೆಯುತ್ತಿದ್ದ ಚರ್ಚೆಗಳ ಬಗ್ಗೆ ಮಾಹಿತಿ ಹೊಂದಿರುವ ಒಳಗಿನವರನ್ನು ಉಲ್ಲೇಖೀಸಿ ವಾಷಿಂಗ್ಟನ್ ಪೋಸ್ಟ್ ಈಚೆಗೆ ವರದಿ ಮಾಡಿತ್ತು.
ವಾಟ್ಸಾಪ್ ತಂತ್ರಗಾರಿಕೆ ಮತ್ತು ಫೇಸ್ ಬುಕ್ ಮಾಹಿತಿ ಕೊಯ್ಲು ಕುರಿತ ವಿಷಯಗಳಲ್ಲಿ ಉಂಟಾಗಿರುವ ಭಿನ್ನಮತದ ಫಲವಾಗಿಯೇ ಜಾನ್ ಕೋಮ್ ಅವರು ಕಂಪೆನಿಯಿಂದ ನಿರ್ಗಮಿಸಿರುವುದಾಗಿ ವರದಿಯಾಗಿದೆ.