ಸ್ಯಾನ್ ಫ್ರಾನ್ಸಿಸ್ಕೋ: ಇತ್ತೀಚೆಗೆ ದತ್ತಾಂಶ ದುರ್ಬಳಕೆ ವಿಚಾರದಲ್ಲಿ ವಿವಾದಕ್ಕೀಡಾಗಿದ್ದ ಫೇಸ್‌ಬುಕ್ ಇದೀಗ, ವಾಟ್ಸ್ ಆ್ಯಪ್ ನಲ್ಲೂ ಬಳಕೆದಾರರ ಗೌಪ್ಯತೆಯನ್ನು ಸಡಿಲಗೊಳಿಸುತ್ತಿದೆ ಎಂಬ ಊಹಾಪೋಹ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ವಾಟ್ಸ್ ಆ್ಯಪ್ ಸಂಸ್ಥಾಪಕ ಜಾನ್ ಕೋಮ್ ರಾಜೀನಾಮೆ ನೀಡಿದ್ದಾರೆ. ಆದರೆ ಜಾನ್ ರಾಜೀನಾಮೆಗೆ ಯಾವುದೇ ಕಾರಣ ನೀಡಿಲ್ಲ.
ವಾಟ್ಸ್ ಆ್ಯಪ್ ಬಳಕೆದಾರರ ದತ್ತಾಂಶ ಬಳಕೆ ಮತ್ತು ಎನ್‌ಕ್ರಿಪ್ಷನ್ ವಿಧಾನವನ್ನು ಕ್ಷೀಣಗೊಳಿಸುವ ಫೇಸ್ ಬುಕ್ ನ ನೀತಿಯಿಂದಾಗಿ ಕಂಪನಿಯಿಂದ ಹೊರ ಬರಲು ಜಾನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜಾನ್ ಜೊತೆಗೆ ವಾಟ್ಸ್ ಆ್ಯಪ್ ಹುಟ್ಟುಹಾಕಿದ್ದ ಬ್ರಿಯಾನ್ ಆಕ್ಟನ್ ಕೂಡ ಕಳೆದ ಸೆಪ್ಟೆಂಬರ್‌ನಲ್ಲೇ ಕಂಪನಿಗೆ ರಾಜೀನಾಮೆ ನೀಡಿದ್ದರು.
2009ರಲ್ಲಿ ಜಾನ್ ಮತ್ತು ಬ್ರಿಯಾನ್ ಹುಟ್ಟುಹಾಕಿದ ವಾಟ್ಸ್ ಆ್ಯಪ್ ಅನ್ನು ಫೇಸ್ ಬುಕ್ 2014ರಲ್ಲಿ ಖರೀದಿಸಿತ್ತು. ವಾಟ್ಸ್ ಆ್ಯಪ್ ನ ಬಳಕೆದಾರರ ದತ್ತಾಂಶ ಹಾಗೂ ಫೋನ್ ನಂಬರುಗಳನ್ನು ಬಳಸಿಕೊಂಡು ಉತ್ಪನ್ನ ಅಭಿವೃದ್ಧಿ ಮತ್ತು ಜಾಹೀರಾತುಗಳ ಪ್ರಸಾರ ಮಾಡುವ ಬಗ್ಗೆ ಫೇಸ್ ಬುಕ್ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಯುರೋಪಿಯನ್ ನಿಯಂತ್ರಕ ಸಂಸ್ಥೆಗಳು ಇದಕ್ಕೆ ನಿರ್ಬಂಧ ಹೇರಿದ್ದವು. ಆದರೂ, ಈ ನಿಟ್ಟಿನಲ್ಲಿ ಯೋಚಿಸಿ ಮುಂದುವರಿಯಲಾಗುತ್ತದೆ ಎಂದು ಇತ್ತೀಚೆಗೆ ವಾಟ್ಸ್ ಆ್ಯಪ್ ಆಡಳಿತ ಮಂಡಳಿ ಹೇಳಿತ್ತು. ವಾಟ್ಸ್ ಆ್ಯಪ್ ನ ಎನ್ ಕ್ರಿಪ್ಷನ್ ತಂತ್ರಜ್ಞಾನದಿಂದಾಗಿ ಬಳಕೆದಾರರ ಪಠ್ಯ ಹಾಗೂ ಸಂದೇಶಗಳು ಬಳಕೆದಾರರ ಫೋನ್‌ನಲ್ಲೇ ಇರುತ್ತವೆ. ಕಂಪನಿಯ ಸರ್ವರ್ ಗಳಲ್ಲಿ ಕೇವಲ ಎನ್ ಕ್ರಿಪ್ಟ್ ಆದ ದತ್ತಾಂಶವಷ್ಟೇ ಇರುತ್ತವೆ. ಹೀಗಾಗಿ ವಾಟ್ಸ್ ಆ್ಯಪ್ ಹೆಚ್ಚು ಸುರಕ್ಷಿತ ಎನ್ನಲಾಗಿದೆ. ಆದರೆ ಫೇಸ್ ಬುಕ್ ನ ದತ್ತಾಂಶ ಬಳಕೆಯು ಇತ್ತೀಚೆಗೆ ಕೇಂಬ್ರಿಜ್ ಅನಾಲಿಟಿಕಾ ವಿವಾದದಿಂದಾಗಿ ಟೀಕೆಗೊಳಗಾಗಿದೆ.