ಬೆಂಗಳೂರು: ಜೈಲಿಂದ ಬಿಡುಗಡೆಯಾದ ಮೂರೇ ದಿನಕ್ಕೆ ಗಾಂಜಾ ಮಾರಾಟ ದಂಧೆಯಲ್ಲಿ ಸಕ್ರಿಯಗೊಂಡಿದ್ದ ಯುವಕ ಹಾಗೂ ಬಿಬಿಎ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜುನೈದ್ ಅಹ್ಮದ್ (24) ಹಾಗೂ ಕೇರಳ ಮೂಲದ ನೀಲಕಂಠನ್ (19) ಬಂಧಿತರು. ಎಸ್‌ಜಿ ಪಾಳ್ಯದ ಶ್ರೀನಿವಾಸ ಥಿಯೇಟರ್ ಬಳಿ ಮಾದಕವಸ್ತು ಮಾರಾಟ ಮಾಡಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಸ್ಥಳದಲ್ಲಿದ್ದ ಜುನೈದ್ ಹಾಗೂ ನೀಲಕಂಠನ್‌ನನ್ನು ಬಂಧಿಸಲಾಯಿತು. ಅವರ ಬಳಿಯಿದ್ದ 6.50 ಲಕ್ಷ ರೂ. ಮೌಲ್ಯದ ಎಲ್‌ಎಸ್‌ಡಿ ಹಾಗೂ ಗಾಂಜಾ ಜಪ್ತಿ ಪಡಿಸಿಕೊಂಡಿದೆ.
ಕಾಲೇಜು ವಿದ್ಯಾರ್ಥಿಗಳು ಹಾಗೂ ಪಿ.ಜಿಗಳಲ್ಲಿ ಉಳಿದುಕೊಂಡಿದ್ದ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಎಲ್‌ಎಸ್‌ಡಿ ಮಾದಕ ವಸ್ತು ಹಾಗೂ ಗಾಂಜಾವನ್ನು ನೇರವಾಗಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ತಮ್ಮ ಬಳಿ ಮಾದಕವಸ್ತು ಕೊಂಡುಕೊಳ್ಳುವವರ ಜತೆ ವ್ಯವಹಾರ ನಡೆಸಲು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿದ್ದರು ಎಂಬ ಅಂಶ ಪೊಲೀಸರ ತನಿಖೆಯಲ್ಲಿ ಬಹಿರಂಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಜುನೈದ್ ಬಳಿಯಿಂದ ಮೊಬೈಲ್ ವಶಪಡಿಸಿಕೊಂಡಿದ್ದು, ಪರಿಶೀಲಿಸಿದಾಗ ಆತ ಮಾದಕವಸ್ತು ಕೊಳ್ಳುವವರ ಜತೆ ವಾಟ್ಸ್‌ಆ್ಯಪ್ ಗ್ರೂಪ್ ರಚಿರುವುದು ಕಂಡುಬಂದಿದೆ. ಗ್ರೂಪ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರು, ಖಾಸಗಿ ಕಂಪನಿ ಉದ್ಯೋಗಿಗಳು ಸೇರಿ 60ರಿಂದ 70 ಮಂದಿ ಸದಸ್ಯರಿದ್ದಾರೆ. ಗಾಂಜಾ ಬೇಕಾದವರು “ಸ್ಕೋರ್’ ಹೆಸರಿನ ಕೋಡ್ ವರ್ಡ್‌ನಲ್ಲಿ ಚರ್ಚಿಸಿದ್ದಾರೆ.
ಒಬ್ಬ ಸದಸ್ಯರು “ವಿ ನೀಡ್ ಸ್ಕೋರ್ ಒನ್ ಕೆ’ (ನಮಗೆ ಒಂದು ಸಾವಿರ ರೂ. ಮೌಲ್ಯದ ಗಾಂಜಾ ಬೇಕಿದೆ) ಎಂಬಂತಹ ಸಂದೇಶಗಳನ್ನು ಕಳುಹಿಸಿದ್ದಾರೆ. ಇದಕ್ಕೆ ಜುನೈದ್ ಕೂಡ ಕೊಡುವುದಾಗಿ ಪ್ರತಿಕ್ರಿಯಿಸಿದ್ದಾನೆ. ಮಾದಕ ವಸ್ತು ಸೇವಿಸುವವರ ವಿರುದ್ಧವೂ ಕೇಸು ದಾಖಲಿಸಿ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ, ಆರೋಪಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಾದಕವಸ್ತು ಖರೀದಿಸುತ್ತಿದ್ದವರ ಪಟ್ಟಿ ಮಾಡಿದ್ದು, ನೋಟಿಸ್ ನೀಡಿ ವಿಚಾರಣೆಗೊಳಪಡಿಸಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಆರೋಪಿ ಜುನೈದ್ ಹಲವು ವರ್ಷಗಳಿಂದ ಮಾದಕವಸ್ತು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದಾನೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ ಎಲ್‌ಎಸ್‌ಡಿ ಹಾಗೂ ಗಾಂಜಾ ತರಿಸುತ್ತಿದ್ದೆ ಎಂದು ಹೇಳುತ್ತಾನೆ. ಹೀಗಾಗಿ, ಈತನಿಗೆ ಸರಬರಾಜು ಮಾಡುತ್ತಿದ್ದವರನ್ನು ಪತ್ತೆಹಚ್ಚಲು ಕ್ರಮ ವಹಿಸಲಾಗಿದೆ. ಕಳೆದ ವರ್ಷ ಗಾಂಜಾ ಕೇಸ್‌ನಲ್ಲಿ ಬಂಧಿತನಾಗಿದ್ದ ಜುನೈದ್, ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಜಾಮೀನಿನ ಮೇರೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದ. ಜೈಲಿಂದ ಬಿಡುಗಡೆಯಾದ ಮೂರೇ ದಿನಗಳಲ್ಲಿ ಪುನಃ ದಂಧೆಯಲ್ಲಿ ಸಕ್ರಿಯಗೊಂಡಿದ್ದ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.
ಗಾಂಜಾ ಚಟಕ್ಕೆ ಬಲಿಯಾದ ನೀಲಕಂಠನ್ ಕೇರಳ ಮೂಲದ ನೀಲಕಂಠನ್ ಖಾಸಗಿ ಕಾಲೇಜಿನಲ್ಲಿ ಬಿಬಿಎ 2ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಸ್ನೇಹಿತರ ಜತೆಗೂಡಿ ಗಾಂಜಾ ಹೊಡೆ ಯುವುದನ್ನು ರೂಢಿಸಿಕೊಂಡಿದ್ದ. ಬರಬರುತ್ತಾ ಜುನೈದ್ ಜತೆ ಸೇರಿ ಮಾರಾಟ ದಂಧೆಯಲ್ಲೂ ತೊಡಗಿಸಿಕೊಂಡಿದ್ದಾನೆ. ಇಬ್ಬರೂ ಕರ್ನೂಲ್‌ನಿಂದ ಮಾದಕವಸ್ತು ತರಿಸಿಕೊಂಡು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ ಪರಿಚಯದ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ಚಿಕ್ಕ ತುಣುಕಿನ ಎಲ್‌ಎಸ್‌ಡಿ ಮಾದಕವಸ್ತುವಿಗೆ 5 ಸಾವಿರ ರೂ ಪಡೆಯುತ್ತಿದ್ದರು. 100 ಗ್ರಾಂ ಗಾಂಜಾಗೆ ಒಂದೂವರೆಯಿಂದ 2 ಸಾವಿರ ರೂ. ಪಡೆದು ಮಾರಾಟ ಮಾಡುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿ ವಿವರಿಸಿದರು.