Advertisement

Whatsapp: ವಿಶ್ವದ ಈ 5 ಪ್ರಬಲ ರಾಷ್ಟ್ರಗಳಲ್ಲಿ ವಾಟ್ಸ್‌ಆಪ್‌ ಬ್ಯಾನ್‌..! ಯಾಕೆ ಗೊತ್ತೇ..?

06:39 PM Nov 22, 2023 | Team Udayavani |

21 ನೇ ಶತಮಾನ ಟೆಕ್ನಾಲಜಿಯ ಯುಗ. ಇಂದು ಇಡೀ ಜಗತ್ತೇ ಟೆಕ್ನಾಲಜಿಯ ಮೇಲೆ ಓಡುತ್ತಿದೆ. ಜೀವನದ ಪ್ರತಿಯೊಂದು ಅಂಶಗಳೂ ಒಂದೊಂದು ಅಪ್ಲಿಕೇಶನ್‌ನ ಮೇಲೆಯೇ ಆಧಾರಿತವಾಗಿರುವಂತಿದೆ. ಅದರಲ್ಲೂ ವಾಟ್ಸ್‌ಆಪ್‌, ಇನ್ಟಾಗ್ರಾಮ್‌, ಟ್ವಿಟರ್‌ನಂತಹಾ ಸಾಮಾಜಿಕ ಮಾಧ್ಯಮಗಳಂತೂ ಜನರೊಂದಿಗೆ ಅತಿಯಾಗಿ ಬೆರೆತುಕೊಂಡಿವೆ. ಇಂತಹಾ ಪ್ಲಾಟ್‌ಫಾರ್ಮ್‌ಗಳು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಜನರನ್ನು ಸುಲಭವಾಗಿ ತಲುಪುವ ಅವಕಾಶವನ್ನು ನೀಡಿವೆ. ಇಂದು ಕೇವಲ ಯುವಜನತೆಯಷ್ಟೇ ಅಲ್ಲದೇ ಎಲ್ಲಾ ವಯಸ್ಸಿನವರೂ ವಾಟ್ಸ್‌ಆಪ್‌ ಅನ್ನು ಉಪಯೋಗಿಸುತ್ತಿದ್ದಾರೆ.

Advertisement

2009ರಲ್ಲಿ ಬ್ರಿಯಾನ್‌ ಆಕ್ಟನ್‌ ಮತ್ತು ಜಾಣ್‌ ಕೌಂ ಎಂಬಿಬ್ಬರಿಂದ ವಾಟ್ಸ್‌ಆಪ್‌ ಹುಟ್ಟಿಕೊಂಡಿತು. ಜನ್ಮ ತಳೆದ ಕೆಲವೇ ವರ್ಷಗಳಲ್ಲಿ ವಾಟ್ಸ್‌ಆಪ್‌ ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶವಾಹಕ ಅಪ್ಲಿಕೇಶನ್‌ ಆಗಿ ಬೆಳೆದಿದೆ. 2016 ರ ಫೆಬ್ರವರಿಯಲ್ಲೇ ವಿಶ್ವದಾದ್ಯಂತ ವಾಟ್ಸ್‌ಆಪ್‌ ಬಳಕೆದಾರರ ಸಂಖ್ಯೆ ಬರೋಬ್ಬರಿ 100 ಕೋಟಿ ದಾಟಿತ್ತು .

ಮೆಸೆಜಿಂಗ್‌ ವ್ಯವಸ್ಥೆಗೆ ಪರ್ಯಾಯವೆಂಬಂತಿರುವ ವಾಟ್ಸ್‌ಆಪ್‌ನಿಂದ ವಿಶ್ವದ ಯಾವ ಮೂಲೆಯಿಂದ ಯಾವ ಮೂಲೆಗೆ ಬೇಕಾದರೂ ಸಂದೇಶಗಳನ್ನು ಕಳುಹಿಸಿಕೊಡಬಹುದು. ಕೇವಲ ಸಂದೇಶಗಳನ್ನು ಮಾತ್ರವಲ್ಲದೆ, ಫೋಟೊಗಳು, ವಿಡಿಯೋಗಳು, ವಾಯ್ಸ್‌ ಮೆಸೆಜ್‌ಗಳು, ವಿಡಿಯೋ ಕಾಲ್‌, ವಾಯ್ಸ್‌ ಕಾಲ್‌ ಹೀಗೆ ಹತ್ತು ಹಲವು ವಿಶೇಷ ಫೀಚರ್‌ಗಳನ್ನು ಹೊಂದಿರುವ ವಾಟ್ಸ್‌ಆಪ್‌ನ ಬಳಕೆ ಆಕರ್ಷಕವಾಗಿದೆ. ಕಾಲದಿಂದ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಿರುವ ವಾಟ್ಸ್‌ಆಪ್‌ ಜನರನ್ನು ಇನ್ನೂ ತನ್ನಲ್ಲೇ ಹಿಡಿದುಕೊಂಡಿದೆ. ಭಾಷೆಗಳನ್ನು ಬದಲಾಯಿಸುವ ವ್ಯವಸ್ಥೆ ವಿಶ್ವದ ಯಾವುದೇ ರಾಷ್ಟ್ರದ ಜನರೂ ತಮಗೆ ಅನುಕೂಲವಾಗುವ ಭಾಷೆಯಲ್ಲಿ ವಾಟ್ಸ್‌ಆಪ್‌ ಅನ್ನು ಉಪಯೋಗಿಸಿಕೊಳ್ಳುವಂತೆ ಮಾಡಿದೆ.

ಇಡೀ ವಿಶ್ವವೇ ವಾಟ್ಸ್‌ಆಪ್‌ಗೆ ಒಗ್ಗಿಕೊಂಡಂತಿರುವ ಕಾಲದಲ್ಲಿಯೂ ಪ್ರಪಂಚದ ಬಲಿಷ್ಟವಾದ ಕೆಲವೊಂದು ರಾಷ್ಟ್ರಗಳು ವಿವಿಧ ಕಾರಣಗಳನ್ನು ನೀಡಿ ತನ್ನ ದೇಶದ ಜನರು ವಾಟ್ಸ್‌ಆಪ್‌ ಬಳಕೆ ಮಾಡುವುದನ್ನೇ ನಿಷೇಧಿಸಿದೆ.

Advertisement

ವಾಟ್ಸಾಪ್‌ ನಿಷೇಧಿಸಿರುವ 5 ದೇಶಗಳು

ಚೀನಾ
ಆಧುನಿಕ ವಿಶ್ವಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲೂ ಚೀನಾ ಎಂಬ ದೇಶದ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಪ್ರಪಂಚದ ಇಂಟರ್ನೆಟ್‌, ಟೆಕ್ನಾಲಜಿಯೂ ಸೇರಿ ಹತ್ತು ಹಲವು ವಿಚಾರಗಳಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಇಂದಿಗೂ ಚೀನಾ ಒಂದು ಹೆಜ್ಜೆ ಮುಂದಿದೆ ಎಂದರೆ ತಪ್ಪಗಲಾರದು. ಆದರೂ ಇಂಟರ್ನೆಟ್‌ಗೆ ಸಂಬಂಧಿಸಿದಂತೆ ವಿಶ್ವದ ಅತ್ಯಂತ ನಿರ್ಬಂಧಿತ ರಾಷ್ಟ್ರಗಳಲ್ಲಿ ಚೀನಾವೂ ಒಂದಾಗಿದೆ. ರಾಷ್ಟ್ರೀಯ ಭದ್ರತೆ, ಸಂವಹನೆಗಾಗಿ ತಮ್ಮದೇ ದೇಶದ ಅಪ್ಲಿಕೇಷನ್‌ಗಳನ್ನು ಬಳಸಬೇಕು ಎಂಬ ನೀತಿಯೂ ಚೀನಾದಲ್ಲಿ ಇದೆ. ಇದರ ಪರಿಣಾಮವಾಗಿ, ಚೀನಾದಲ್ಲಿ ವಾಟ್ಸಾಪ್‌ ಬಳಕೆಗೆ ನಿಷೇಧವಿದೆ.

ಚೀನಾದಲ್ಲಿ ಕಟ್ಟುನಿಟ್ಟಾದ ಸೆನ್ಸಾರ್‌ಶಿಪ್ ನೀತಿಗಳಿವೆ. ಈ ಕಾರಣದಿಂದಾಗಿ ಜನಸಾಮಾನ್ಯರು ವಾಟ್ಸಾಪ್‌ ಬಳಸುವಂತೆಯೇ ಇಲ್ಲ. ಇಷ್ಟೆಲ್ಲಾ ನಿರ್ಬಂಧಗಳಿದ್ದರೂ ಜನರು ವಾಟ್ಸ್‌ಆಪ್‌ ಅನ್ನು ಬಳಸಲೇಬಾರದು ಎಂಬ ಕಟ್ಟುನಿಟ್ಟಿನ ಆಜ್ಙೆಯೇನೂ ಆದೇಶದಲ್ಲಿಲ್ಲ. ಒಂದು ವೇಳೆ ಜನರು ವಾಟ್ಸ್‌ಆಪ್‌ ಬಳಸಬೇಕು ಎಂದಾದಲ್ಲಿ ಬಳಕೆದಾರರು ವಿಪಿಎನ್‌ಗಳಂತಹ ಪರ್ಯಾಯ ವಿಧಾನಗಳನ್ನು ಉಪಯೋಗಿಸಿ ವಾಟ್ಸ್‌ಆಪ್‌ ಬಳಕೆ ಮಾಡಬಹುದು. ಆದರೆ ಮೆಸೇಜ್‌, ವಾಯ್ಸ್‌ ಅಥವಾ ವಿಡಿಯೋ ಕಾಲ್‌ಗಳನ್ನು ಮಾಡುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚೀನಾವು ವಾಟ್ಸ್‌ಆಪ್‌ ಬದಲು ವಿ ಚಾಟ್‌, ಕಕಾವೋ ಟಾಕ್ಸ್‌ ಹೀಗೆ ಹಲವು ಸಂವಹನ ಅಪ್ಲಿಕೇಶನ್‌ಗಳನ್ನು ಹೊಂದಿದೆ.

ಇರಾನ್
ಇರಾನ್‌ನಲ್ಲೂ ಜನಸಾಮಾನ್ಯರು ವಾಟ್ಸಾಪ್‌ ಬಳಸುವಂತಿಲ್ಲ. ಈ ದೇಶದಲ್ಲೂ ರಾಷ್ಟ್ರೀಯ ಭಧ್ರತೆಯ ವಿಚಾರಗಳಿಂದಾಗಿ ಜನರು ವಾಟ್ಸ್‌ಆಪ್‌ ಬಳಕೆಯನ್ನು ನಿಷೇಧಿಸಲಾಗಿದೆ. ನಾಗರಿಕರ ದಂಗೆಗಳು ಮತ್ತು ಪ್ರತಿಭಟನೆಗಳ ಕಾರಣದಿಂದಾಗಿ ಇರಾನ್‌ನಲ್ಲಿ ವಾಟ್ಸಾಪ್ ಬಳಕೆಯ ಮೇಲೆ ನಿಷೇಧವನ್ನು ಹೇರಿದ್ದಾರೆ. ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಒಡೆತನದ ವಾಟ್ಸಾಪ್ ಜಿಯೋನಿಸ್ಟ್ ಪಿತೂರಿಯ ಭಾಗವಾಗಿದೆ ಎಂಬ ಅಭಿಪ್ರಾಯವನ್ನು ಇರಾನ್‌ನ ಅಧಿಕಾರಿಗಳು ಹೊಂದಿದ್ದಾರೆ. ಈ ಕಾರಣದಿಂದಾಗಿ ಇರಾನ್‌ನಲ್ಲಿ ವಾಟ್ಸಾಪ್‌ ಬಳಕೆಗೆ ಹೇರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಯೋನಿಸ್ಟ್‌ ಪಿತೂರಿಯು ಇರಾನ್‌ನ ಬದ್ಧ ವೈರಿ ಇಸ್ರೇಲ್‌ ದೇಶಕ್ಕೆ ಸಂಬಂಧಿಸಿದ್ದು ಎಂಬುದು ವಿಶೇಷ.

ಉತ್ತರ ಕೊರಿಯಾ
ಸರ್ವಾಧಿಕಾರಿ ಆಡಳಿತ ಹೊಂದಿರುವ ಉತ್ತರ ಕೊರಿಯಾದಲ್ಲೂ ವಾಟ್ಸ್‌ಆಪ್‌ಗೆ ನಿರ್ಬಂಧವಿದೆ. ಕಿಮ್ ಜಾಂಗ್ ಅನ್ ನೇತೃತ್ವದ ಉತ್ತರ ಕೊರಿಯಾದಲ್ಲಿ ವಾಟ್ಸಾಪ್ ಸೇರಿ ಇಂಟರ್ನೆಟ್ ಬಳಕೆಯನ್ನೇ ನಿಯಂತ್ರಿಸಲಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ದೇಶದಲ್ಲಿ ಆಡಳಿತ ವಿಭಾಗಕ್ಕೆ ಸಂಬಂಧಿಸಿದ ಗಣ್ಯರು ಸೇರಿದಂತೆ ಆಯ್ದ ಕೆಲವರಿಗೆ ಮಾತ್ರ ಇಂಟರ್ನೆಟ್ ಬಳಸಲು ಅನುಮತಿ ಇದೆ. ಆದರೂ, ಉತ್ತರ ಕೊರಿಯಾದಲ್ಲಿನ ನಾಗರಿಕರು ವಾಟ್ಸ್‌ಆಪ್‌ ಸೇರಿದಂತೆ ವಿದೇಶಿ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಸಿರಿಯಾ
2011 ರಿಂದ ಸುದೀರ್ಘವಾದ ಅಂತರ್ಯುದ್ಧವನ್ನು ಕಾಣುತ್ತಿರುವ ದೇಶ ಸಿರಿಯಾ. ಇದೇ ಕಾರಣದಿಂದಾಗಿ ಸಿರಿಯನ್ ಸರ್ಕಾರವು ಇನ್ಫಾರ್ಮೇಷನ್‌ ಮತ್ತು ಕಮ್ಯುನಿಕೇಶನ್‌ ವ್ಯವಸ್ಥೆಯ ಮೇಲೆ ತನ್ನ ನಿಯಂತ್ರಣವನ್ನು ಹೆಚ್ಚಿಸಿದೆ. ಸಿರಿಯನ್ ಆಡಳಿತದಿಂದ ನಿಷೇಧಿಸಲ್ಪಟ್ಟ ಹಲವಾರು ಅಪ್ಲಿಕೇಶನ್‌ಗಳ ಪೈಕಿ ವಾಟ್ಸ್‌ಆಪ್‌ ಕೂಡಾ ಸೇರಿದೆ. ದೇಶವಿರೋಧಿಗಳು, ಬಂಡುಕೋರರನ್ನು ಒಗ್ಗೂಡಿಸಲು ಮತ್ತು ಅವರು ತಮ್ಮ ಸಂಪರ್ಕ ಸಾಧಿಸಲು ವಾಟ್ಸ್‌ಆಪ್‌ ಒಂದು ಮುಂಚೂಣಿ ಮಾಧ್ಯಮವೆಂಬ ಕಾರಣ ನೀಡಿ ಅದರ ಬಳಕೆಗೆ ನಿರ್ಬಂಧ ಹೇರಲಾಗಿದೆ.

ಟರ್ಕಿ
ಟರ್ಕಿ ದೇಶವೂ ವಾಟ್ಸ್‌ಆಪ್‌ ಮಾತ್ರವಲ್ಲದೆ ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್‌ ಮೇಲೆಯೂ ದಿಗ್ಬಂಧನವನ್ನು ವಿಧಿಸಿದೆ. ಅಲ್ಲಿಯ ಅಧ್ಯಕ್ಷ ಎರ್ಡೋಗನ್ ಅವರ ಸರ್ಕಾರವು ಸಾಮಾಜಿಕ ಮಾಧ್ಯಮದ ಮೇಲಿನ ನಿಯಂತ್ರಣವನ್ನು ಹೆಚ್ಚಿಸಲು ಶಾಸನವನ್ನು ಪ್ರಸ್ತಾಪಿಸಿತು. ವಿಶೇಷವೇನೆಂದರೆ ಟರ್ಕಿಯ ಅಧಿಕಾರಿಗಳು ವಾಟ್ಸ್‌ಆಪ್‌ ಬಳಕೆದಾರರ ಡೇಟಾವನ್ನು ಕೋರಿದರು. ಆದರೆ ಟರ್ಕಿಯ ಈ ವಿನಂತಿಯನ್ನು ವಾಟ್ಸ್‌ಆಪ್‌ ನಿರಾಕರಿಸಿತು.

ಇದನ್ನೂ ಓದಿ: IPL : ಪ್ರಮುಖ ಆಟಗಾರರನ್ನು ವಿನಿಮಯ ಮಾಡಿಕೊಂಡ ಲಕ್ನೋ, ರಾಜಸ್ಥಾನ್ 

Advertisement

Udayavani is now on Telegram. Click here to join our channel and stay updated with the latest news.

Next