ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಮತ್ತೊಂದು ಘಟನೆ ನಡೆದಿದ್ದು ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನೇ ಬಳಸಿ ಹ್ಯಾಕರ್ ಗಳು ಹಣ ಎಗರಿಸಿರುವ ಅಚ್ಚರಿಯ ಘಟನೆ ನಡೆದಿದೆ.
ಈ ಹಿಂದೆ ವಾಟ್ಸ್ ಆ್ಯಪ್, ಫೇಸ್ ಬುಕ್ ಮೂಲಕ ಕೂಡ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಾಗುತ್ತಿದೆ ಎಂಬ ಮಾಹಿತಿ ಇತ್ತು. ಅದರ ಜೊತೆಗೆ ಬ್ಯಾಂಕ್ ಆ್ಯಪ್ ಮೂಲಕ ಬಳಕೆದಾರರ ಖಾತೆ ಮೇಲೆ ಹ್ಯಾಕರ್ ಗಳು ಹತೋಟಿ ಸಾಧಿಸುತ್ತಿದ್ದರು. ಆದರೀಗ ಮಾಧ್ಯಮವೊಂದರ ವರದಿ ಪ್ರಕಾರ, ರಿಯಾ ಶರ್ಮಾ ಎಂಬ ಮಹಿಳೆಯೋರ್ವರು ಇನ್ಸ್ಟಾಗ್ರಾಂ ಸಮೀಕ್ಷೆ ವೇಳೆ ಫೋನ್ ಸಂಖ್ಯೆಯೂ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದರು.
ಅದೇ ಈಗ ಆಕೆಗೆ ಎರವಾಗಿದ್ದು 46 ಸಾವಿರ ರೂ ಗಳನ್ನು ಕಳೆದುಕೊಂಡಿದ್ದಾರೆ. ಆಕೆಯ ಮೊಬೈಲ್ ಸಂಖ್ಯೆಯನ್ನು ವಾಟ್ಸ್ ಆ್ಯಪ್ ಗ್ರೂಪ್ವೊಂದಕ್ಕೆ ಸೇರಿಸಲಾಗಿದ್ದು, ಗ್ರೂಪ್ ಅಡ್ಮಿನ್ ಅದರಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ಬಟ್ಟೆ, ಆಭರಣಗಳಿಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಂಡು ಪಾವತಿಗಾಗಿ ಫೋನ್ ಪೇ ಲಿಂಕ್ ಅನ್ನು ಕೂಡ ನೀಡಿದ್ದನು. ಇದರಲ್ಲಿ ರಿಯಾ ಎರಡು ಪ್ರೊಡಕ್ಟ್ಗಳನ್ನು ಬುಕ್ ಮಾಡಿದ್ದರು. ಆದರೇ ಹಣ ಪಾವತಿಗಾಗಿ ಫೋನ್ ಪೇ ಲಿಂಕ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆ, ಅವರ ಖಾತೆಯಿಂದ 46 ಸಾವಿರ ರೂಪಾಯಿಗಳು ವರ್ಗಾವಣೆಯಾಗಿದೆ.
ನಕಲಿ ಲಿಂಕ್ ವೊಂದನ್ನು ನೀಡಿದ್ದ ಹ್ಯಾಕರ್ ಗಳು ನೇರವಾಗಿ ಖಾತೆಯಲ್ಲಿನ ಹಣವನ್ನು ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ. ಅದುದರಿಂದ ಈ ಬಗ್ಗೆ ಎಚ್ಚರ ವಹಿಸವುದು ಸೂಕ್ತ ಎಂದು ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅನ್ ಲೈನ್ ನಲ್ಲಿ ಸಿಗುವ ಕೂಪನ್ ಗಳು, ಫೇಸ್‌ಬುಕ್, ಇನ್ ಸ್ಟಾಗ್ರಾಮ್ ಅಥವಾ ಇಮೇಲ್‌ನಲ್ಲಿ ಬರುವಂತಹ ಸಮೀಕ್ಷೆಯಲ್ಲಿ ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಯೋಚಿಸುವುದು ಒಳಿತು. ಇಂತಹ ಲಿಂಕ್ಗಳ ಮೂಲಕವೇ ಹ್ಯಾಕರ್ ಗಳು ಕೋಟಿ ಕೋಟಿ ಹಣವನ್ನು ಎಗರಿಸುತ್ತಾರೆ.