ಸಾಮಾಜಿಕ ಮಾಧ್ಯಮಗಳು ಹರಡುವ ಸುಳ್ಳು ಸುದ್ದಿಗಳು ಅನಾಹುತಕಾರಿ ಪರಿಣಾಮಗಳಿಗೆ ಕಾರಣವಾಗುತ್ತಿವೆ. ಅದರಲ್ಲೂ ವಾಟ್ಸ್‌ಆ್ಯಪ್ ಸೃಷ್ಟಿಸುತ್ತಿರುವ ಅವಾಂತರಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಹರಡುವ ಮಕ್ಕಳ ಕಳ್ಳರೆಂಬ ಸುಳ್ಳು ಸುದ್ದಿಗಳನ್ನು ನಂಬಿ ಜನರು ಗುಂಪುಗೂಡಿ ಥಳಿಸಿ ಸಾಯಿಸಿದ ಹಲವು ಪ್ರಕರಣಗಳು ದೇಶದ ಹಲವೆಡೆಗಳಲ್ಲಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಾಟ್ಸ್‌ಆ್ಯಪ್‌ಗೆ ಲಗಾಮು ಹಾಕುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನಿನ್ನೆ ವಾಟ್ಸ್‌ಆ್ಯಪ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ಕರೆಸಿಕೊಂಡು ಸುಳ್ಳು ಸುದ್ದಿಗಳ ಮೂಲವನ್ನು ಪತ್ತೆಹಚ್ಚಲು ತಾಂತ್ರಿಕವಾದ ದಾರಿಯನ್ನು ಹುಡುಕಬೇಕೆಂದು ಕಟ್ಟುನಿಟ್ಟಾಗಿ ಹೇಳಿರುವುದು ಸ್ವಾಗತಾರ್ಹ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತನ್ನನ್ನು ಭೇಟಿಯಾದ ವಾಟ್ಸ್‌ಆ್ಯಪ್ ಸಿಇಒ ಕ್ರಿಸ್ ಡೇನಿಯಲ್ಸ್‌ಗೆ ಭಾರತದಲ್ಲಿ ಕಾರ್ಪೋರೇಟ್ ಘಟಕ ಸ್ಥಾಪಿಸಿ ಸ್ಥಳೀಯ ಕಚೇರಿ ತೆರೆಯಬೇಕೆಂದು ಹೇಳಿದ್ದಾರೆ ಹಾಗೂ ಜೊತೆಗೆ ಭಾರತೀಯ ಗ್ರಾಹಕರ ಅಹವಾಲುಗಳನ್ನು ಆಲಿಸಲು ಅಧಿಕಾರಿಯನ್ನು ನೇಮಿಸಲೂ ಸೂಚಿಸಿದ್ದಾರೆ.
ಸುಳ್ಳು ಸುದ್ದಿಗಳು ಹರಡುವುದನ್ನು ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ತಾಕೀತು ಮಾಡಿದ ಬೆನ್ನಿಗೆ ದಿಲ್ಲಿಗೆ ದೌಡಾಯಿಸಿದ ಡೇನಿಯಲ್ಸ್‌ಗೆ ಪ್ರಸಾದ್ ನೆಲದ ಕಾನೂನು ಪಾಲಿಸಬೇಕೆಂದು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತದಲ್ಲಿ ಕಚೇರಿ ಆರಂಭಿಸಿದರೆ ನೆಲದ ಕಾನೂನು ವ್ಯಾಪ್ತಿಗೆ ಈ ಕಚೇರಿಯೂ ಒಳಪಡುವುದರಿಂದ ಕಾನೂನು ಪಾಲನೆ ಸಾಧ್ಯವಾಗುತ್ತದೆ. ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಜನಪ್ರಿಯ ಸೋಷಿಯಲ್ ಮೀಡಿಯಾಗಳ ಕಚೇರಿಗಳಿರುವುದು ವಿದೇಶಗಳಲ್ಲಿ. ಹೀಗಾಗಿ ಅವುಗಳಿಗೆ ಮೂಗುದಾರ ತೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಸುಳ್ಳು ಸುದ್ದಿ ಸೃಷ್ಟಿಸಿದ್ದು ಯಾರೆಂದು ತಿಳಿಯಬೇಕಿದ್ದರೆ ಈ ಕಚೇರಿಗಳಿಗೆ ಮನವಿ ಮಾಡಬೇಕಿತ್ತು. ವಿದೇಶ ಗಳಲ್ಲಿರುವ ಅಧಿಕಾರಿಗಳು ಇಷ್ಟವಿದ್ದರೆ ಮಾಹಿತಿ ಕೊಡುತ್ತಿದ್ದರು ಇಲ್ಲದಿದ್ದರೆ ನಿರ್ಲಕ್ಷಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಈ ಮಾಧ್ಯಮವನ್ನು ಉತ್ತರದಾಯಿ ಮಾಡುವ ಅವಕಾಶ ಸರಕಾರಕ್ಕಿರಲಿಲ್ಲ. ಹೀಗಾಗಿ ಇದು ಒಂದು ಉತ್ತಮ ಕ್ರಮ. ವಾಟ್ಸ್‌ಆ್ಯಪ್ ಮಾತ್ರವಲ್ಲದೆ ಫೇಸ್‌ಬುಕ್ ಸೇರಿದಂತೆ ಉಳಿದ ಸೋಷಿಯಲ್ ಮೀಡಿಯಾಗಳಿಗೂ ಕಚೇರಿಯನ್ನು ಸ್ಥಾಪಿಸಲು ಹೇಳಬೇಕು.
ಲಿಂಚಿಂಗ್ ಪ್ರಕರಣಗಳು ಕಳವಳಕಾರಿಯಾಗಿ ಹೆಚ್ಚಿದ ಬಳಿಕ ವಾಟ್ಸ್‌ಆ್ಯಪ್ ಕೇಂದ್ರದ ದೂರಿನ ಮೇರೆಗೆ ಸಂದೇಶದಲ್ಲಿ ಫಾರ್‌ವರ್ಡೆಡ್ ಎಂದು ತೋರಿಸುವ ಫೀಚರ್ ಸೇರಿಸಿಕೊಂಡಿದೆ ಹಾಗೂ ಸಂದೇಶ ವಿನಿಮಯವನ್ನು ಐದು ಗ್ರೂಪುಗಳಿಗೆ ಸೀಮಿತಗೊಳಿಸಿದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನ ಆಗಿಲ್ಲ. ಈ ನಿಯಮ ಬಂದ ಬಳಿಕವೂ ಗುಂಪು ಥಳಿತ ಪ್ರಕರಣ ಸಂಭವಿಸಿದೆ.
ಭಾರತ ಮಾತ್ರವಲ್ಲದೆ ಇತರ ದೇಶಗಳಲ್ಲೂ ನಿರ್ದಿಷ್ಟವಾಗಿ ವಾಟ್ಸ್‌ಆ್ಯಪ್ ಕುರಿತಾದ ದೂರುಗಳು ಹೆಚ್ಚೇ ಇವೆ. 12 ದೇಶಗಳಲ್ಲಿ ವಾಟ್ಸ್‌ಆ್ಯಪ್‌ಗೆ ಒಂದಲ್ಲ ಒಂದು ಸಂದರ್ಭದಲ್ಲಿ ನಿಷೇಧ ಹೇರಲಾಗಿತ್ತು. ಉಗಾಂಡದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಗೆ ಪ್ರತ್ಯೇಕ ತೆರಿಗೆಯೇ ಇದೆ. ವಾಟ್ಸ್‌ಆ್ಯಪ್ ಈ ಪರಿಯಲ್ಲಿ ದುರ್ಬಳಕೆಯಾಗಲು ಅದರ ತಂತ್ರಜ್ಞಾನದಲ್ಲಿರುವ ದೋಷವೂ ಕಾರಣ. ವಾಟ್ಸ್‌ಆ್ಯಪ್‌ನಲ್ಲಿರುವ ಗ್ರೂಪ್‌ಗ್ಳ ಮುಖಾಂತರ ಸುಳ್ಳು ಸುದ್ದಿಗಳು ಕ್ಷಿಪ್ರವಾಗಿ ರವಾನೆ ಯಾಗುತ್ತವೆ. ಇದಕ್ಕೆ ಗ್ರೂಪ್ ಅಡ್ಮಿನಿಸ್ಟ್ರೇಟರ್‌ನನ್ನು ಹೊಣೆ ಮಾಡಿದರೂ ಇದು ಪರಿಣಾಮಕಾರಿಯೇನಲ್ಲ. ಏಕೆಂದರೆ ಅಡ್ಮಿನ್‌ಗೂ ಸದಸ್ಯರು ಕಳುಹಿಸುವ ಸಂದೇಶಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ. ಅಂದರೆ ಎಲ್ಲ ಡೇಟಾಗಳು ಆಯಾಯ ಮೊಬೈಲ್‌ನಲ್ಲಿ ಸೇವ್ ಆಗಿರುತ್ತವೆಯೇ ಹೊರತು ವಾಟ್ಸ್‌ಆ್ಯಪ್ ಸರ್ವರ್‌ನಲ್ಲಿ ಅಲ್ಲ. ಈ ವಿಚಾರವನ್ನು ಸ್ವತಹ ವಾಟ್ಸ್‌ಆ್ಯಪ್ ಒಪ್ಪಿಕೊಂಡಿದೆ. ಹೀಗಾಗಿ ಸಂದೇಶಗಳ ಮೇಲೆ ಕಂಪೆನಿಗೂ ನಿಯಂತ್ರಣವಿರುವುದಿಲ್ಲ ಹಾಗೂ ಅವುಗಳ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಆ್ಯಪ್‌ನಲ್ಲಿ ಯಾವ ಚರ್ಚೆ ಆಗುತ್ತದೆ ಎನ್ನುವುದು ಕಂಪೆನಿಗೂ ಗೊತ್ತಿರುವುದಿಲ್ಲ. ಸಂದೇಶ ರವಾನೆಯಾದ ಕೂಡಲೇ ಸರ್ವರ್‌ನಿಂದ ಡಿಲೀಟ್ ಆಗುತ್ತದೆ ಎನ್ನುವ ಸೂಚನೆ ವಾಟ್ಸ್‌ಆ್ಯಪ್ ವೆಬ್‌ಸೈಟಿನಲ್ಲೇ ಇದೆ. ಈ ದೃಷ್ಟಿಯಿಂದಲೂ ವಾಟ್ಸ್‌ಆ್ಯಪ್ ಸುಳ್ಳು ಸುದ್ದಿಗಳ ಮೂಲ ಪತ್ತೆಹಚ್ಚಲು ತಾಂತ್ರಿಕವಾದ ಪರಿಹಾರ ಕಂಡುಕೊಳ್ಳುವುದು ಅತಿ ಅಗತ್ಯ.
ಹಾಗೆಂದು ಸೋಷಿಯಲ್ ಮೀಡಿಯಾಗಳಿಂದ ಬರೀ ಕೆಡುಕು ಮಾತ್ರ ಆಗುತ್ತದೆ ಎಂದಲ್ಲ. ದುರಂತಗಳ ಸಂದರ್ಭದಲ್ಲಿ ಮೊದಲು ನೆರವಿಗೆ ಬರುವುದೇ ಸೋಷಿಯಲ್ ಮೀಡಿಯಾ ಎನ್ನುವುದು ಕೇರಳ ಮತ್ತು ಕೊಡಗಿನ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮತ್ತೂಮ್ಮೆ ಸಾಬೀತಾಗಿದೆ. ಆದರೆ ಜನರು ಅದನ್ನು ಒಳಿತಿಗಿಂತ ಕೆಡುಕಿಗೆ ಹೆಚ್ಚು ಉಪಯೋಗಿಸುತ್ತಿರು ವುದರಿಂದ ವರವಾಗಬೇಕಾದ ಆವಿಷ್ಕಾರ ಶಾಪವಾಗಿ ಪರಿಣಮಿಸುತ್ತಿದೆ.