Advertisement

ಮೋದಿ ಹೆಸರಲ್ಲಿ ಮತ ಯಾಚಿಸಿದರೆ ತಪ್ಪೇನು?

11:12 AM Apr 20, 2019 | Team Udayavani |

ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸಹಕಾರ ನೀಡಿದ್ದಾರೆ. ಅವರ ಹೆಸರಲ್ಲಿ ಮತ ಕೇಳುವುದಲ್ಲಿ ತಪ್ಪೇನಿದೆ. ಕಳೆದ 15 ವರ್ಷಗಳಲ್ಲಿ ಸುಸಂಸ್ಕೃತ ರಾಜಕಾರಣ ಮಾಡಿದ್ದೇನೆ. 2 ಲಕ್ಷ ಮತಗಳ ಅಂತರದಿಂದ ನನ್ನ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮೋದಿ ಅಲೆ ಇಲ್ಲ ಎನ್ನುವುದು, ನಂತರ ಮೋದಿ ಅಲೆಯಿಂದ ಗೆದ್ದಿದ್ದಾರೆ ಎನ್ನುವುದು ಕಾಂಗ್ರೆಸ್‌ ನಾಯಕರ ದೌರ್ಬಲ್ಯ. ದೇಶಕ್ಕಾಗಿ ಮೋದಿ ಶ್ರಮಿಸಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ನಾನು ಶಕ್ತಿಮೀರಿ ಶ್ರಮಿಸಿದ್ದೇನೆ. ಅವರೊಂದಿಗೆ ಆತ್ಮೀಯ ಸಂಬಂಧವಿದೆ. ಅಭಿಮಾನವಿದೆ. ಹೀಗಾಗಿ ನನ್ನನ್ನು ಅವರ ಬೆಂಬಲಿಗ, ಅಭಿಮಾನಿ ಅಥವಾ ಭಕ್ತ ಎಂದು ಕರೆದರೂ ಸಂತಸದಿಂದ ಸ್ವೀಕರಿಸುತ್ತೇನೆ ಎಂದರು.

ಹಿಂದಿನ ಕೆಲ ಚುನಾವಣೆಗಳು ಋಣಾತ್ಮಕ ಅಥವಾ ಭಾವನಾತ್ಮಕ ವಿಚಾರಗಳ ಮೇಲೆ ನಡೆದಿರಬಹುದು. ಈ ಚುನಾವಣೆ ಅಭಿವೃದ್ಧಿ ಕಾರ್ಯಗಳು ಹಾಗೂ ಗುಣಾತ್ಮಕ ಅಂಶಗಳ ಮೇಲೆ ನಡೆಯುತ್ತಿದೆ. ಕಿಮ್ಸ್‌ಗೆ ಅನುದಾನ, ಐಐಟಿ, ಐಐಐಟಿ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗೆ 1200 ಕೋಟಿ ರೂ. ಅನುದಾನ, 30 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ, ಬಿಐಎಸ್‌ ಕಚೇರಿ, ಖಾದಿ ಮತ್ತು ಗ್ರಾಮೋದ್ಯೋಗ ಮಿಷನ್‌ ಕಚೇರಿ, 72 ಸಾವಿರ ಕುಟುಂಬಗಳಿಗೆ ಉಜ್ವಲ್ ಯೋಜನೆ ಗ್ಯಾಸ್‌ ವಿತರಣೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬೈಪಾಸ್‌ ರಸ್ತೆಗಳು ಸೇರಿದಂತೆ ಹಲವು ಯೋಜನೆಗಳು ಆಗಿವೆ. ರಾಜಕೀಯ ಲಾಭವಿಲ್ಲದಿದ್ದರೂ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಶಾಲೆಗಳಿಗೆ 15000 ಡೆಸ್ಕ್ ನೀಡಲಾಗಿದ್ದು, ಸ್ಮಾರ್ಟ್‌ ಕ್ಲಾಸ್‌, ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಮುಂದಿನ ಯೋಜನೆಗಳು: ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ-2ರಲ್ಲಿ ಸಂಪರ್ಕ ರಸ್ತೆಗಳು, ಗ್ರಾಮಗಳಲ್ಲಿ ಮೂಲಸೌಲಭ್ಯ, ಕುಡಿಯುವ ನೀರಿನ ಯೋಜನೆ, ಹು-ಧಾ ಮಹಾನಗರದಲ್ಲಿ ಸುಗಮ ಸಂಚಾರಕ್ಕೆ ಯೋಜನೆ, ಸಣ್ಣ ನೀರಾವರಿಗೆ ಹೆಚ್ಚಿನ ಒತ್ತು ಕೊಡಲು ಯೋಜನೆ ಸಿದ್ಧಪಡಿಸಿಕೊಂಡಿದ್ದೇನೆ.

ರಾಜ್ಯದ ಇತರೇ ಸಂಸದರ ಆದರ್ಶ ಗ್ರಾಮಗಳಿಗೆ ಹೋಲಿಕೆ ಮಾಡಿದರೆ ನಾನು ಒಂದನೇ ಸ್ಥಾನದಲ್ಲಿದ್ದೇನೆ. ಸ್ಥಳೀಯ ರಾಜಕಾರಣದ ಪ್ರಭಾವದಿಂದ ಹಿಂದಿನ ಜಿಲ್ಲಾಡಳಿತದಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಒಂದೆರೆಡು ಘಟನೆಗಳನ್ನು ಹೊರತುಪಡಿಸಿ ನಮ್ಮ ಸರಕಾರಗಳ ಅವಧಿಯಲ್ಲಿ ಯಾವುದೇ ಗಲಭೆಗಳು ಇಲ್ಲ. ಧಾರವಾಡದಲ್ಲಿ ನಡೆದ ಘಟನೆಯಲ್ಲಿ ರಾಜ್ಯ ಸರಕಾರದ ಪೊಲೀಸರ ಕೆಟ್ಟ ತೀರ್ಮಾನದಿಂದ ಒಂದಿಬ್ಬರು ನೌಕರಿ ಕಳೆದುಕೊಂಡರೆ ಕೇಂದ್ರ ಸರಕಾರ ಅಥವಾ ನಾನು ಜವಾಬ್ದಾರನಲ್ಲ ಎಂದರು.

Advertisement

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ವಿಚಾರದಲ್ಲಿ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ಗೊಂದಲ ಸೃಷ್ಟಿಯಾಗಿದ್ದು, ಈ ವಿಚಾರ ಹಸಿರು ವನ್ಯಜೀವಿ ಮಂಡಳಿ ಮುಂದಿರುವುದರಿಂದ ಯೋಜನೆಗೆ ತಡೆಯಾಜ್ಞೆ ನೀಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಸಮಜಾಯಿಷಿ ನೀಡುವ ಮೂಲಕ ಯೋಜನೆಗೆ ಒತ್ತು ನೀಡುತ್ತೇವೆ.

ತೇಜಸ್ವಿನಿ ಟಿಕೆಟ್ ತಪ್ಪಿಸಿಲ್ಲ: ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನಾನು ಸೇರಿದಂತೆ ಬಿ.ಎಸ್‌. ಯಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ ಅವರಿದ್ದ ಕೋರ್‌ ಕಮಿಟಿ ತೇಜಸ್ವಿನಿ ಅನಂತಕುಮಾರ ಅವರ ಹೆಸರನ್ನು ಸೂಚಿಸಿತ್ತು. ನಂತರದಲ್ಲಿ ತೇಜಸ್ವಿ ಸೂರ್ಯ ಅವರ ಹೆಸರು ಅಂತಿಮವಾಗಿದೆ. ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು ಯೋಚಿಸಿ ಈ ನಿರ್ಧಾರ ಕೈಗೊಂಡಿರುತ್ತಾರೆ ಎನ್ನುವ ಕಾರಣಕ್ಕೆ ಇದನ್ನು ತೇಜಸ್ವಿನಿ ಅವರು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ನನ್ನನ್ನು ಸೇರಿದಂತೆ ಹಲವರ ಮೇಲೂ ಸುಳ್ಳು ಆರೋಪಗಳು ಕೇಳಿ ಬಂದವು ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.

ಮಹದಾಯಿ ಕೂಗು ಎತ್ತಿದ್ದು ನಾನು

ಮಹದಾಯಿ ವಿಚಾರಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದು ನಾನು. ಈ ಕುರಿತು ಕಾಂಗ್ರೆಸ್‌ನ ಒಬ್ಬ ಸಂಸದರು ಧ್ವನಿ ಎತ್ತಲಿಲ್ಲ. 2010ರಲ್ಲಿ ಅಫಿಡವಿಟ್ ಸಲ್ಲಿಸುವಾಗ ಕುಡಿಯುವ ನೀರಿನ ವಿಚಾರ ಹೊರಗಿಟ್ಟು ನ್ಯಾಯಾಧೀಕರಣ ರಚಿಸುವಂತೆ ಕೇಳಲಿಲ್ಲ. ಇದರ ಪರಿಣಾಮ ಮಾತುಕತೆ ಮೂಲಕ ಈ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ. ಇದೀಗ ನ್ಯಾಯಾಧೀಕರಣದಲ್ಲಿ ತೀರ್ಪು ಬಂದ ನಂತರ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದೆ. ಹೀಗಿರುವಾಗ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್‌ ಹೊರಡಿಸಲು ಸಾಧ್ಯವಿಲ್ಲ. ಈ ಕುರಿತು ಕಾನೂನು ತಜ್ಞರೇ ಸ್ಪಷ್ಟಪಡಿಸಿದ್ದಾರೆ. ಮೋದಿಯವರು ಬಂದ ನಂತರ ನ್ಯಾಯಾಧೀಕರಣದಲ್ಲಿ ತೀರ್ಪು ಬಂದಿದೆ ಎಂದು ಜೋಶಿ ಹೇಳಿದರು.
ನಮ್ಮ ಪಕ್ಷದಲ್ಲಿ ಲಿಂಗಾಯತ ನಾಯಕರ ಬಹು ದೊಡ್ಡ ಪಡೆಯೇ ಇದೆ. ನಮ್ಮ ಪಕ್ಷದಲ್ಲಿ ಲಿಂಗಾಯತರನ್ನು ತುಳಿಯುತ್ತಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇಂತಹ ಆರೋಪಗಳಿಗೆ ನಮ್ಮ ಪಕ್ಷದ ನಾಯಕರು ಉತ್ತರ ಕೊಡುತ್ತಾರೆ. ನಮ್ಮ ನಾಯಕರಾದ ಜಗದೀಶ ಶೆಟ್ಟರ ಅವರೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಆಹ್ವಾನ ನೀಡಿದ್ದರು. ಲಿಂಗಾಯತರನ್ನು ತುಳಿಯುತ್ತಿದ್ದಾರೆ ಎನ್ನುವ ಸಿನಿಕ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ.
•ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ
Advertisement

Udayavani is now on Telegram. Click here to join our channel and stay updated with the latest news.

Next