Advertisement

ಚಂಪಾ ಹೇಳಿಕೆಯಲ್ಲಿ ತಪ್ಪೇನಿದೆ: ಸಿಎಂ

12:37 PM Nov 29, 2017 | Team Udayavani |

ಮೈಸೂರು: ಜಾತ್ಯತೀತ ಪಕ್ಷಕ್ಕೆ ಮತ ನೀಡಿ ಎಂದು ಪೊ›.ಚಂದ್ರಶೇಖರ ಪಾಟೀಲರು ಹೇಳಿದ್ದರಲ್ಲಿ ತಪ್ಪೇನಿದೆ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಂಪಾ ಭಾಷಣವನ್ನು ಸಮರ್ಥಿಸಿಕೊಂಡರು.

Advertisement

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಗಳವಾರ ವಿಶೇಷ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲ. ಅದಕ್ಕೆ ಚಂಪಾ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ತಾವು ಕೋಮುವಾದಿಗಳು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹರಿಹಾಯ್ದರು.

ಚಂಪಾ ಅವರ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಮಾಡಿರುವ ಟೀಕೆಗಳಿಗೆ ಉತ್ತರ ನೀಡಲು ಹೋಗಲ್ಲ. ಪ್ರತಾಪ್‌ಸಿಂಹ ಎಂತಹವನು ಎಂಬುದು ಗೊತ್ತಿದೆ ಎಂದು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

ಕುಂಬಳ ಕಾಯಿ ಕಳ್ಳ ಎಂದರೆ ಬಿಜೆಪಿಯವರೇಕೆ ಹೆಗಲು ಮುಟ್ಟಿಕೊಂಡು ನೋಡಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಚಂಪಾ ವಿರುದ್ಧ ಟೀಕೆ ಮಾಡುತ್ತಿರುವುದನ್ನು ಲೇವಡಿಮಾಡಿದರು.

ಮೈಸೂರು ರಾಜಮನೆತನದವರನ್ನು ಸಾಹಿತ್ಯ ಸಮ್ಮೇಳನಕ್ಕೆ ಕರೆಯಬೇಕಿದ್ದುದು ಕನ್ನಡ ಸಾಹಿತ್ಯ ಪರಿಷತ್‌ನವರ ಜವಾಬ್ದಾರಿ. ಸಮ್ಮೇಳನಕ್ಕೆ ಸರ್ಕಾರ ಅನುದಾನ ಕೊಟ್ಟಿರುವುದು ಬಿಟ್ಟರೆ, ಅದು ಸರ್ಕಾರಿ ಕಾರ್ಯಕ್ರಮ ಅಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಸಚಿವರ ಪಾತ್ರ ಇಲ್ಲ: ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್‌ ಕುಲಕರ್ಣಿ ಭಾಗಿಯಾಗಿರುವ ಆರೋಪ ನಿರಾಧಾರ. ಮಾಧ್ಯಮದಲ್ಲಿ ಬಂದ ಆಡಿಯೋ, ವೀಡಿಯೋ ನೋಡಿದ್ದೇನೆ. ಅದರಲ್ಲಿ ಏನೂ ಇಲ್ಲ. ಆದರೂ ಬಿಜೆಪಿಯವರು ವಿನಯ್‌ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ: ಅಧಿಕಾರಕ್ಕೆ ಬಂದರೆ ದಲಿತರು, ಅಲ್ಪಸಂಖ್ಯಾತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಲೇವಡಿ ಮಾಡಿದ ಮುಖ್ಯಮಂತ್ರಿ, ಅವರು ಅಧಿಕಾರಕ್ಕೆ ಬರಲ್ಲ. ಅದಕ್ಕೆ ಹಾಗೆ ಹೇಳುತ್ತಾರೆ. ಜೆಡಿಎಸ್‌ ಯಾವತ್ತಾದ್ರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದನ್ನು ನೋಡಿದ್ದೀರಾ?

ಅವರು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಅವರು ಎಂದಾದರೂ ಅಧಿಕಾರಕ್ಕೆ ಬರುತ್ತಾರಾ? ಸುಮ್ಮನೆ ಹೇಳಿಕೊಂಡು ತಿರುಗುತ್ತಿದ್ದಾರೆ. ಅಧಿಕಾರಕ್ಕೆ ಬರದಿರುವಾಗ ಉಪಮುಖ್ಯಮಂತ್ರಿ ಮಾಡುವುದು ಎಲ್ಲಿಂದ ಎಂದು ಪ್ರಶ್ನಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿಗಳನ್ನೆಲ್ಲಾ ಮುಚ್ಚಲಾಗಿದೆ. ಉಳಿದಿರುವ ಗುಂಡಿಗಳನ್ನೂ ಮುಚ್ಚಲಾಗುವುದು. ಯಾಕೆ ರಸ್ತೆ ಗುಂಡಿ ಮುಚ್ಚಬಾರದಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಕೇಂದ್ರದ ವಿರುದ್ಧ ವಾಗ್ಧಾಳಿ: ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಇತರೆ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ದೂರಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳೂ ಅಭಿವೃದ್ಧಿಯಾದರೆ ಪರಸ್ಪರ ವಿಶ್ವಾಸ ವೃದ್ಧಿಯಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಮಾಡುತ್ತಿದೆ ಎಂದು ಆರೋಪಿಸಿದರು.

ಬೆಳೆ ನಷ್ಟ ಪರಿಹಾರಕ್ಕಾಗಿ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ. ಪರಿಹಾರ ಧನ ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ 1500 ಕೋಟಿಯನ್ನಷ್ಟೇ ನೀಡಿದೆ. ರಾಜಸ್ಥಾನದ ನಂತರ ಅತಿಹೆಚ್ಚು ಒಣ ಭೂಮಿ ಪ್ರದೇಶ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಆದರೆ, ಕೇಂದ್ರ ಸರ್ಕಾರ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next