ಈ ವಯಸ್ಸೇ ಹಾಗೆ ಅನ್ಸುತ್ತೆ, ಪ್ರೀತಿ- ಪ್ರೇಮದ ಅಮಲು ಏರಿದ್ರೆ ಮನಸ್ಸು ಯಾರ ಮಾತನ್ನೂ ಕೇಳಲ್ಲ. ಈ ಪರಿ ಪ್ರೀತೀಲಿ ಬೀಳ್ತೀನಿ ಅಂತ ನಾನು ಯಾವತ್ತೂ ಅಂದುಕೊಂಡೇ ಇರಲಿಲ್ಲ. ಅದು ಹೇಗೋ ನನ್ನಲ್ಲೂ ಪ್ರೀತಿ ಹುಟ್ಟಿತು. ಅದು ಒಳ್ಳೆಯದಕ್ಕೋ ಕೆಟ್ಟದಕ್ಕೋ ಗೊತ್ತಾಗಲಿಲ್ಲ. ಈ ಪ್ರೀತಿಯ ಅಮಲು ಇಳಿಯೋ ಹೊತ್ತಿಗೆ, ನನ್ಮ ಹೃದಯವೇ ಕಲ್ಲಾಗಿ ಹೋಗಿತ್ತು.
ಅವನಿಗೆ ನನ್ನ ಮೇಲೆ ಎಳ್ಳಷ್ಟೂ ಪ್ರೀತಿ ಇರಲಿಲ್ಲ. ನಾನೇ ಅತಿಯಾಗಿ ಹಚ್ಚಿಕೊಂಡೆ. ಎಷ್ಟರಮಟ್ಟಿಗೆ ಅಂದರೆ, ನನ್ನನ್ನ ನಾನೇ ಕಳೆದುಕೊಳ್ಳುವಷ್ಟು. ಎಂದೂ ನಾನು ಬೇರೆಯವರಂತೆ ಬದುಕಬೇಕು ಅಂದಕೊಂಡವಳಲ್ಲ. ಅವನು, ನಾನು ಸದಾ ಜೊತೆಗಿರಬೇಕು ಅನ್ನೋ ಆಸೆಯಷ್ಟೇ ನನಗೆ ಇದ್ದುದು . ಅವನಿಗಾಗಿ ಕಾದಿದ್ದೇನೆ, ಅತ್ತಿದ್ದೇನೆ. ಅವನಿಂದಾಗಿ ಅವಮಾನಗೊಂಡಿದ್ದೇನೆ. ಆದರೆ, ನಕ್ಕಿದ್ದಂತೂ ನೆನಪಿಗೆ ಬರುತ್ತಿಲ್ಲ. ಕಣ್ಣೀರೊಂದೇ ನಂಗೆ ಅವನು ಕೊಟ್ಟ ಉಡುಗೊರೆ…
ನನ್ ಕಂಡ್ರೆ ಅವನಿಗೆ ಉದಾಸೀನವೇ ಹೆಚ್ಚು. ನನ್ನ ಮೇಲಿನ ಪ್ರೀತಿಗಿಂತ ಮೋಜು ಮಸ್ತಿನೇ ಮುಖ್ಯ ಅನ್ನುವಂತೆ ಆತ ನಡೆದುಕೊಂಡ. ಸ್ನೇಹಿತರ ಜೊತೆ ಗಂಟೆಗಟ್ಟಲೇ ಹರಟೆ ಹೊಡೆಯೋಕೆ, ಪಬ್ ಜೀ ಆಡೋಕೆ, ಇನ್ಯಾರದ್ದೋ ಜೊತೆ ಚಾಟಿಂಗ್ ಮಾಡೋಕೆ ಅವನಿಗೆ ಟೈಮ್ ಇರ್ತಾ ಇತ್ತು. ಆದರೆ, ನನ್ನೊಟ್ಟಿಗೆ ಹತ್ತು ನಿಮಿಷ ಮಾತಾಡೋಕೆ ಟೈಂ ಸಿಗ್ತಾ ಇರಲಿಲ್ಲ. ಇಷ್ಟೆಲ್ಲಾ ಆದರೂ, ಆನಂತರ ಕೂಡ ಅವನಿಗಾಗಿ, ಅವನ ಫೋನಿಗಾಗಿ, ಅವನ ಮೆಸೇಜ್‌ಗಾಗಿ ಕಾದೆ.
ಒಮ್ಮೆಯಂತೂ ರಾತ್ರಿಯಿಡೀ ಒಂಟಿಯಾಗಿ ಮನೆಯ ಮೆಟ್ಟಿಲ ಮೇಲೆಯೇ ಕಳೆದಿದ್ದೆ. ಅದು ಅವನಿಗೂ ಗೊತ್ತಿದೆ. ಹಾಗಿದ್ದರೂ ಸಾರಿ ಎಂಬ ಒಂದೇ ಒಂದು ಮಾತು ಅವನಿಂದ ಬರಲಿಲ್ಲ. ಅವತ್ತೇ ಗೊತ್ತಾಯ್ತು ಅವನ ನಿಜ ಬಣ್ಣ. ನನ್ನನ್ನು ಆಟಕ್ಕೆ ಇಟ್ಟ ಗೊಂಬೆ ಅಂದುಕೊಂಡಿದಾನೇ ಅಂತ. ಅಂಥವರಿಗಾಗಿ ಯೋಚಿಸುತ್ತಾ, ಅನರ್ಹನೊಬ್ಬನನ್ನು ಧ್ಯಾನಿಸುತ್ತಾ ನನ್ನ ಬದುಕಿನ ಸಮಯವನ್ನು ಕಳೆದುಕೊಂಡಿದ್ದಕ್ಕೆ ವಿಷಾದವಿದೆ. ಹುಡುಗರು ಹೀಗೂ ಇರುತ್ತಾರೆ ಎಂಬ ಸತ್ಯದ ದರ್ಶನ ಮಾಡಿಸಿದ್ದಕ್ಕೆ ಅವನಿಗೆ ಧನ್ಯವಾದ ಹೇಳಲೇಬೇಕಿದೆ ನಾನು…
–ಸುನೀತ ರಾಥೋಡ್, ದಾವಣಗೆರೆ