Advertisement

ಕಲಿಯದೆ ತೇರ್ಗಡೆಯಾದರೆ ಫ‌ಲವೇನು? ಸಮಗ್ರ ಶಿಕ್ಷಣ ನೀತಿಗೆ ಸಕಾಲ

01:30 PM Jul 24, 2017 | |

ಶೇ. 35ಕ್ಕಿಂತ ಕಡಿಮೆ ಅಂಕ ಬಂದರೆ ಫೇಲು ಎಂಬ ಪದ್ಧತಿಗೆ ಮರಳುವುದು ಕೂಡ ಸರಿಯಾದ ಕ್ರಮವಲ್ಲ. ಬಈ ರೀತಿ ಬರೆಯಬೇಕಿತ್ತು ಎಂದು ವಿದ್ಯಾರ್ಥಿಗೆ ತಿಳಿವಳಿಕೆ ಮೂಡಿಸುವ ಮಧ್ಯಮ ದಾರಿಯೊಂದನ್ನು ಅನ್ವೇಷಿಸುವುದು ಈಗಿನ ಅಗತ್ಯ. 

Advertisement

ಎಂಟನೇ ತರಗತಿ ತನಕ ಮಕ್ಕಳನ್ನು ಅನುತ್ತೀರ್ಣಗೊಳಿಸದಿರುವ ನಿಯಮದಿಂದಾಗಿ ಶಿಕ್ಷಣದ ಗುಣಮಟ್ಟ  ಮತ್ತು ಕಲಿಕೆಯ ಆಸಕ್ತಿ ಕುಸಿದಿದೆ ಎಂಬ ವಾದವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಫ‌ಲಶ್ರುತಿಯಾಗಿ ಈ ನಿಯಮವನ್ನು ಬದಲಾಯಿಸುವ ಕುರಿತು ಬಿರುಸಿನ ಚಿಂತನೆ ನಡೆದಿದೆ. 2009ರಲ್ಲಿ ಯುಪಿಎ ಸರಕಾರ ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ಎಂಟನೇ ತರಗತಿ ತಲಪುವ ತನಕ ಮಕ್ಕಳನ್ನು ಯಾವ ಕಾರಣಕ್ಕೂ ಅನುತ್ತೀರ್ಣಗೊಳಿಸಬಾರದು ಎಂಬ ನಿಯಮವಿದೆ. ಅನುತ್ತೀರ್ಣರಾಗುವ ಮಕ್ಕಳು ಅರ್ಧದಲ್ಲಿ  ಶಾಲೆ ಬಿಟ್ಟು ಹೋಗುವುದನ್ನು ತಡೆಯುವ ಉತ್ತಮ ಉದ್ದೇಶ ಇದರ ಹಿಂದೆ ಇದೆ. ಆದರೆ ಇದೇ ವೇಳೆ ಶಿಕ್ಷಣದ ಗುಣಮಟ್ಟದ ಮೇಲೆ ನಿಯಮ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವುದು ಕೂಡ ನಿಜ. 25ಕ್ಕೂ ರಾಜ್ಯಗಳು ನಿಯಮಕ್ಕೆ ಆಕ್ಷೇಪ ಎತ್ತಿವೆ. ಶಿಕ್ಷಣ ತಜ್ಞರು, ಶಿಕ್ಷಕರು ಮಾತ್ರವಲ್ಲದೆ ಹೆತ್ತವರು ಕೂಡ ಈಗ ಈ ನಿಯಮವನ್ನು ಪರಿಷ್ಕರಿಸಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ. ಕೆಲವು ದೇಶಗಳಲ್ಲಿ ಇಂತಹ ನಿಯಮ ಇರುವುದು ನಿಜವಾಗಿದ್ದರೂ ಅಲ್ಲಿನ ಶಿಕ್ಷಣ ಕ್ರಮ  ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರೀಕ್ಷಿಸಲು ಭಿನ್ನವಾದ ಪದ್ಧತಿಗಳೂ ಇವೆ. ಆದರೆ ನಾವು ಅದೇ ಪುರಾತನ ಪದ್ಧತಿಯನ್ನು ಇಟ್ಟುಕೊಂಡು ನಪಾಸು ನಿಯಮ ಜಾರಿಗೆ ತಂದಿರುವುದು ಶಿಕ್ಷಣದ ಒಟ್ಟು  ಆಶಯವನ್ನೇ ನಿರರ್ಥಕ ಗೊಳಿಸಿದಂತಾಗಿದೆ.

ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬೆನ್ನಿಗೆ ಆಗ ಮಾನವ ಸಂಪದ ಸಚಿವರಾಗಿದ್ದ ಸ್ಮತಿ ಇರಾನಿಯವರು ನಪಾಸು ನಿಯಮ ಬದಲಾವಣೆಗೆ ಮುಂದಾಗಿದ್ದರು. ಅನಂತರ ಈ ಖಾತೆಗೆ ಬಂದ ಪ್ರಕಾಶ್‌ ಜಾವಡೇಕರ್‌ ನಿಯಮ ಬದಲಾವಣೆಗಾಗಿ ಶಿಕ್ಷಣ ಹಕ್ಕು ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆ ಮಂಡಿಸುವ ಕುರಿತು ಮಾತನಾಡಿದ್ದಾರೆ. ಐದು ಮತ್ತು ಎಂಟನೇ ತರಗತಿಯಲ್ಲಿ  ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಅವಕಾಶ ಇರಬೇಕು ಎನ್ನುವುದು ಅವರ ವಾದ.  ಪ್ರತಿ ವರ್ಷ ತೇರ್ಗಡೆಯಾಗುವ ಅವಕಾಶವಿರುವುದರಿಂದ ಯಾರೂ ಕಲಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿಕಲ್ಲ ಎನ್ನುವುದು ಅಧ್ಯಯನದಿಂದ ಕಂಡು ಬಂದಿದೆ. ಆರನೇ ತರಗತಿಗೆ ಬಂದ ಮಕ್ಕಳಿಗೆ ಮೂರನೇ ತರಗತಿಯ ಗಣಿತವೂ ತಿಳಿದಿರುವುದಿಲ್ಲ. 7ನೇ ತರಗತಿಯ ಮಕ್ಕಳು ಎರಡನೇ ತರಗತಿಯ ಪುಸ್ತಕಗಳನ್ನು ಓದಲು ಕಷ್ಟಪಡುತ್ತಾರೆ. ಇದರಿಂದಾಗಿ ಪ್ರಾಥಮಿಕ ಶಿಕ್ಷಣದ ಒಟ್ಟು  ಉದ್ದೇಶವೇ ವಿಫ‌ಲವಾಗಿದೆ.

ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅರಿಯುವ ಮಾನದಂಡವೇ ಇಲ್ಲದಿರುವುದರಿಂದ ಶಿಕ್ಷಕರು ಕೂಡ  ಗೊಂದಲಕ್ಕೀಡಾಗಿದ್ದಾರೆ. ಇಷ್ಟು  ಮಾತ್ರವಲ್ಲದೆ ಇದರಿಂದ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೂ ವ್ಯತಿರಿಕ್ತ ಪರಿಣಾಮಗಳು ಆಗುತ್ತಿವೆ ಎಂದು ಶಿಕ್ಷಣ ತಜ್ಞರು ಎಚ್ಚರಿಸುತ್ತಿದ್ದಾರೆ. ಹೇಗಿದ್ದರೂ ಪಾಸಾಗುತ್ತೇನೆ ಎಂಬ ವಿಶ್ವಾಸ ಇರುವುದರಿಂದ ಮಕ್ಕಳಲ್ಲಿ  ಕಷ್ಟಪಡುವ ಸ್ವಭಾವ ಬೆಳೆಯುವುದಿಲ್ಲ. ಎಂಟನೇ ತರಗತಿ ತನಕ ಸರಾಗವಾಗಿ ತೇರ್ಗಡೆಯಾಗಿ ಬಂದ ಮಗು ಒಂಬತ್ತು ಅಥವಾ ಹತ್ತನೇ ತರಗತಿಯಲ್ಲಿ  ಫೇಲಾದರೆ ಆಘಾತಕ್ಕೊಳಗಾಗುತ್ತದೆ. ಹಾಗೆಂದು ಫೇಲು ಮಾಡಿದ ಕೂಡಲೇ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ ಎಂದಲ್ಲ. ಆದರೆ ಕಷ್ಟಪಟ್ಟರೆ ಮಾತ್ರ ಫ‌ಲ ಸಿಗುತ್ತದೆ ಎಂಬ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು ಬಹಳ ಅಗತ್ಯ.

ಶೇ. 35ಕ್ಕಿಂತ ಕಡಿಮೆ ಅಂಕ ಬಂದರೆ ಫೇಲು ಮಾಡುವ ಹಳೆ ಪದ್ಧತಿಗೆ ಮರಳುವುದು ಕೂಡ ಸರಿಯಾದ ಕ್ರಮವಲ್ಲ. ನೀನು ಬರೆದ ಉತ್ತರ ತಪ್ಪು ಅಥವಾ ಸರಿ ಎಂದು ನಿಷ್ಠುರವಾಗಿ ಹೇಳುವ ಬದಲು ನೀನು ಈ ರೀತಿ ಬರೆಯಬೇಕಿತ್ತು ಎಂದು ತಿಳಿವಳಿಕೆ ಮೂಡಿಸುವ ಮಧ್ಯಮ ದಾರಿಯೊಂದನ್ನು ಅನ್ವೇಷಿಸುವುದು ಈಗಿನ ಅಗತ್ಯ. ಇದಕ್ಕಾಗಿ ಸಮಗ್ರ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಬೇಕು. ಇದಾಗಬೇಕಿದ್ದರೆ ಸಮಗ್ರವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next