Advertisement

ವ್ಯಾಸಂಗ ಪರಿವಾರಕ್ಕೆ ಸಿಕ್ಕಿದ್ದೇನು?

09:41 AM Mar 07, 2020 | Lakshmi GovindaRaj |

ರಾಜ್ಯ ಸರ್ಕಾರಿ ವ್ಯವಸ್ಥೆಯಡಿಯಲ್ಲಿರುವ ಪ್ರಾಥಮಿಕ, ಪ್ರೌಢ, ಉನ್ನತ, ತಾಂತ್ರಿಕ, ವೈದ್ಯಕೀಯ ಶಿಕ್ಷಣದ ಅಭಿವೃದ್ಧಿಗೆ ಹೊಸ ಯೋಜನೆ ಘೋಷಣೆ ಮಾಡದೆ, ಇರುವ ಕಾರ್ಯಕ್ರಮವನ್ನೇ ಉನ್ನತೀಕರಿಸುವ ಮೂಲಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮುಂದಾಗಿದೆ. ಪ್ರತಿವರ್ಷ ರಾಜ್ಯ ಬಜೆಟ್‌ನ ಒಟ್ಟಾರೆ ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಸಿಂಹ ಪಾಲು ಸಿಗುತಿತ್ತು. ಆದರೆ, 2020-21ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಗದೆ ಇದ್ದರೂ ಒಟ್ಟು ಬಜೆಟ್‌ನ ಶೇ.11ರಷ್ಟು(29,768 ಕೋಟಿ ರೂ.) ಮೀಸಲಿಡಲಾಗಿದೆ. ಹೊಸ ಯೋಜನೆ ಗಳನ್ನು ಘೋಷಿಸಿಲ್ಲ.

Advertisement

ಸದ್ಯ ಇರುವ ಯೋಜನೆಗಳನ್ನು ಇನ್ನಷ್ಟು ಸುಧಾ ರಿಸುವ ಜತೆಗೆ ಕೆಲವೊ ಂದು ಕಾರ್ಯ ಕ್ರಮಗಳನ್ನು ಹೊಸದಾಗಿ ರೂಪಿಸಲಾಗಿದೆ. ಕೊಠಡಿ ದುರಸ್ತಿಗೆ ಅನು ದಾನ, ಶಿಕ್ಷಕ ಮಿತ್ರ ಮೊಬೈಲ್‌ ಆ್ಯಪ್‌, ಸಂಭ್ರಮ ಶನಿವಾರ, ಯುವಿಸಿಇಗೆ ಸ್ವಾಯತ್ತ ಸ್ಥಾನ ಮಾನ, ಉನ್ನತ ಶಿಕ್ಷಣದಲ್ಲಿ ಇಂಟ ರ್ಯಾಕ್ಟೀವ್‌ ಆನ್‌ಲೈನ್‌ ಕೋರ್ಸ್‌, ವೈದ್ಯಕೀಯ, ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಕೇಂದ್ರೀಕೃತ ಉದ್ಯೋಗ ಕೋಶ ತೆರೆಯುವ ಬಗ್ಗೆ ಬಜೆಟ್‌ನಲ್ಲಿ ಬೆಳಕು ಚೆಲ್ಲಲಾಗಿದೆ.

ಶಿಕ್ಷಕ ಮಿತ್ರ ಮೊಬೈಲ್‌ ಆ್ಯಪ್‌: ರಾಜ್ಯ ಸರ್ಕಾರದ ಶಿಕ್ಷಕರು ಶೈಕ್ಷಣಿಕ ಗುಣಮಟ್ಟದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಮತ್ತು ಸಮಸ್ಯೆ ನಿವಾರಣೆಗಾಗಿ ತರಗತಿ ಚಟುವಟಿಕೆ ಗಳನ್ನು ಬಿಟ್ಟು ಇಲಾಖೆಯ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಶಿಕ್ಷಕ ಮಿತ್ರ ಮೊಬೈಲ್‌ ಆ್ಯಪ್‌ ಅನ್ನು ರಾಜ್ಯ ಸರ್ಕಾರ ಪರಿಚಯಿಸುತ್ತಿದೆ.

ಎಲ್ಲಾ ಸೇವೆ ಒಂದೆಡೆ ಲಭ್ಯ: ಶಿಕ್ಷಕರು ತರಗತಿ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದು ಶಿಕ್ಷಣದ ಗುಣಮಟ್ಟದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ತಮ್ಮ ಹಕ್ಕಿನ ಸೌಲಭ್ಯಗಳಿಗಾಗಿ ತರಗತಿಯಿಂದ ಹೊರಗುಳಿದು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಶಿಕ್ಷಕರಿಗೆ ಎಲ್ಲ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ನಿರ್ಧರಿಸ ಲಾ ಗಿದೆ. ಈ ಉದ್ದೇಶಕ್ಕಾಗಿ ಶಿಕ್ಷಕ ಮಿತ್ರ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಹಿಂದಿನ ವರ್ಷಗಳ ಆಯವ್ಯಯ ಘೋಷಣೆಯಂತೆ ರಾಜ್ಯದಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿ ಪೂರ್ವ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು 276 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಮೂಲಭೂತ ಸೌಕರ್ಯ ಗಳಿಗಾಗಿ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

Advertisement

ಕೊಠಡಿ ಕಾಮಗಾರಿಗೆ ಅನುದಾನ: ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಭೀಕರ ಅತಿವೃಷ್ಟಿಯಿಂದ ಹಲವು ಶಾಲಾ ಕೊಠಡಿಗಳು ತೀವ್ರ ಹಾನಿಗೊಳಗಾಗಿವೆ. ಇಂಥ ಶಾಲೆಗಳನ್ನು ಪುನರ್‌ ನಿರ್ಮಾಣ ಮಾಡಲು 26 ಜಿಲ್ಲೆಗಳ 3,386 ಸರ್ಕಾರಿ ಶಾಲೆಗಳ 6,469 ಶಾಲಾ ಕೊಠಡಿಗಳ ಕಾಮಗಾರಿಯನ್ನು ನಬಾರ್ಡ್‌ ಸಹಯೋಗದೊಂದಿಗೆ 758 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಶಾಸಕರಿಂದ ಶಾಲೆ ದತ್ತು: ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಶಾಸಕರುಗಳಿಂದ ತಮ್ಮ ಕ್ಷೇತ್ರವ್ಯಾಪ್ತಿಯ ಲ್ಲಿರುವ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮಕೈಗೊಳ್ಳಲು ಪ್ರಸ್ತಾಪಿಸಲಾಗಿದೆ. ಶಾಸಕರು ಶಾಲೆಗಳನ್ನು ದತ್ತು ಪಡೆಯುವುದರಿಂದ ಸರ್ಕಾರಿ ಶಾಲೆಗೆ ಇನ್ನಷ್ಟು ಬಲ ಬರಲಿದೆ.

ಸಂಭ್ರಮ ಶನಿವಾರ: ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ತಿಂಗಳಿನ ಎರಡು ಶನಿವಾರಗಳನ್ನು ಬ್ಯಾಗ್‌ರಹಿತ ದಿನಗಳೆಂದು ಪರಿಗಣಿಸಿ, ಸಂಭ್ರಮ ಶನಿವಾರ ಎಂದು ಆಚರಿಸಲಾಗುವುದು. ಆ ದಿನ ಗಳಂದು ಮಕ್ಕಳಿಗೆ ವಿವಿಧ ಚಟುವಟಿಕೆಗಳ ಮೂಲಕ ದೇಶದ ಉತ್ತಮ ನಾಗರಿಕರಾಗಲು ಅವಶ್ಯವಿರುವ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಬ್ಯಾಗ್‌ ರಹಿತ ದಿನ ಮಾಡಬೇಕು ಎಂಬುದು ಶಿಕ್ಷಣ ಇಲಾಖೆಯ ಬಹುದಿನದ ಕನಸಾಗಿತ್ತು. ಅದು ಈಗ ಬಜೆಟ್‌ನಲ್ಲಿ ಘೋಷಣೆಯಾಗಿರುವುದರಿಂದ ವಿದ್ಯಾರ್ಥಿಗಳಿಗೂ ಸ್ಪಲ್ಪ ಮಟ್ಟಿನ ಹೊರೆ ಇಳಿಯಲಿದೆ.

ವಸತಿ ಶಾಲೆ ಮೇಲ್ದರ್ಜೆಗೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕ ರಿಸಲಾಗುವುದು. ಈಗಾಗಲೇ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರೌಢಶಾಲೆಗಳ ವರೆಗಿನ ಶಿಕ್ಷಣ ನೀಡಲಾ ಗುತಿತ್ತು. ಇನ್ಮುಂದೆ ಇಲ್ಲಿ ಪದವಿ ಪೂರ್ವ ಶಿಕ್ಷಣವೂ ಸಿಗು ವಂತೆ ಸರ್ಕಾರ ಮೇಲ್ದರ್ಜೆಗೆ ಏರಿಸಲು ಬಜೆಟ್‌ನಲ್ಲಿ ತಿಳಿಸಿದೆ.

ಸ್ಕೌಟ್ಸ್‌ ಕೇಂದ್ರಕ್ಕೆ ಅನುದಾನ: ಇಂದಿನ ಮಕ್ಕಳನ್ನು ಮುಂದಿನ ಪೀಳಿಗೆಗೆ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯು ಶ್ರಮಿಸುತ್ತಿದೆ. ಈ ಸಂಸ್ಥೆಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ದಾವಣಗೆರೆ, ಉಡುಪಿ ಮತ್ತು ದೊಡ್ಡಬಳ್ಳಾಪುರದಲ್ಲಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೇಂದ್ರಗಳಿಗೆ ನಾಲ್ಕು ಕೋಟಿ ರೂ. ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ.

ಉರ್ದು ಶಾಲೆಯಲ್ಲಿ ಆಂಗ್ಲ ಮಾಧ್ಯಮ: 2020-21ನೇ ಸಾಲಿನಿಂದ ರಾಜ್ಯದ 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರೂ. ಅನುದಾನ ಒದಗಿಸಲಾಗುತ್ತದೆ.

ಐಐಟಿ ಮಾದರಿಯಲ್ಲಿ ಅಭಿವೃದ್ಧಿ: ಬೆಂಗಳೂರಿನ ಕೆ.ಆರ್‌.ವೃತ್ತದಲ್ಲಿರುವ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜನ್ನು ಐಐಟಿ ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಯ ನಂತರ ಯುವಿಸಿಇ ಯಾವ ವಿಶ್ವವಿದ್ಯಾಲಯಕ್ಕೆ ಸೇರಬೇಕು ಎಂಬುದು ಸ್ಪಷ್ಟವಾಗಿರಲಿಲ್ಲ.

ಭೌಗೋಳಿಕವಾಗಿ ಯುವಿಸಿಯು ಬೆಂಗಳೂರು ಕೇಂದ್ರ ವಿವಿಯ ವ್ಯಾಪ್ತಿಯಲ್ಲಿದ್ದರೂ, ಆಡಳಿತಾತ್ಮವಾಗಿ ಬೆಂಗಳೂರು ವಿವಿಗೆ ಒಳಪಟ್ಟಿತ್ತು. ಯುವಿಸಿಇ ತಮ್ಮಲ್ಲೇ ಉಳಿಸಿಕೊಳ್ಳುವುದಕ್ಕಾಗಿ ಎರಡು ವಿಶ್ವವಿದ್ಯಾಲಯ ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಸುತ್ತಲೇ ಇದ್ದವು. ಈ ರಾಜ್ಯ ಸರ್ಕಾರ ಅದೆಲ್ಲದಕ್ಕೂ ತೆರೆ ಎಳೆದು, ಐಐಟಿ ಮಾದರಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸುವುದಾಗಿ ಘೋಷಿಸುವ ಜತೆಗೆ ಈ ಉದ್ದೇಶಕ್ಕಾಗಿ 10 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next