ಒಬ್ಬ ರಾಜನಿಗೆ ಪ್ರಶ್ನೆಗಳನ್ನು ಕೇಳಿ ಬಹುಮಾನ ಕೊಡುವ ಗೀಳಿತ್ತು. ಒಮ್ಮೆ ರಾಜ ತನ್ನ ಮಂತ್ರಿ ಮತ್ತು ಸೇವಕರೊಂದಿಗೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಒಂದು ಸುಂದರವಾದ ಹಕ್ಕಿಯನ್ನು ಕಂಡ. ಅದನ್ನು ನೋಡಿದ ರಾಜ ತನ್ನ ಸೇವಕರಲ್ಲಿ ಆ ಹಕ್ಕಿಯನ್ನು ಹಿಡಿದು ತರಲು ಹೇಳಿದ. ರಾಜನ ಆಜ್ಞೆಯಂತೆ ರಾಜಭಟರು ಹಕ್ಕಿಯನ್ನು ಹಿಡಿದು ತಂದು ರಾಜನ ಮುಂದಿರಿಸಿದರು. “ಈ ಹಕ್ಕಿಯ ಹೆಸರೇನು?’ ಎಂದು ರಾಜ ಕೇಳಿದ. ಆಸ್ಥಾನದಲ್ಲಿ ನೆರೆದಿದ್ದ ಯಾರಿಗೂ ಉತ್ತರ ತಿಳಿದಿರಲಿಲ್ಲ.
ರಾಜ, ಹಕ್ಕಿಯನ್ನು ಊರೆಲ್ಲಾ ಮೆರವಣಿಗೆ ಮಾಡಿಸಿದ. ಈ ಹಕ್ಕಿಯ ಹೆಸರನ್ನು ಹೇಳಿದವರಿಗೆ ಸಾವಿರ ಚಿನ್ನದ ನಾಣ್ಯದ ಬಹುಮಾನ ಕೊಡುವುದಾಗಿ ಘೋಷಿಸಿದ. ಆದರೆ ಆ ಅಪರೂಪದ ಹಕ್ಕಿಯನ್ನು ಇದಕ್ಕೆ ಮುಂಚೆ ನೋಡಿದವರು ಯಾರೂ ಆ ರಾಜ್ಯದಲ್ಲಿರಲಿಲ್ಲ. ರಾಜನಿಗೆ ಬೇಸರವಾಯಿತು. ಅವನಿಗೆ ಆ ಹಕ್ಕಿ ತುಂಬಾ ಪ್ರಿಯವಾಗಿತ್ತು. ಅದಕ್ಕಾಗಿ ಬಂಗಾರದ ಪಂಜರ, ಸಮಯಕ್ಕೆ ಸರಿಯಾಗಿ ಆಹಾರ, ಅದರ ಆರೋಗ್ಯ ನೋಡಿಕೊಳ್ಳಲು ವೈದ್ಯರು, ಆಳುಕಾಳುಗಳು ಹೀಗೆ ಎಲ್ಲದರ ಏರ್ಪಾಟು ಮಾಡಿದ್ದ.
ಒಂದು ದಿನ ಮೆರವಣಿಗೆಯಿಂದ ಹಕ್ಕಿಯನ್ನು ಕರೆತರುವಾಗ ಸೇವಕನ ಕೈ ತಪ್ಪಿ ಹಕ್ಕಿ ಹಾರಿಹೋಗುತ್ತದೆ. ಮತ್ತೆಂದೂ ಅದು ವಾಪಸ್ ಬರುವುದಿಲ್ಲ. ರಾಜ ತುಂಬಾ ದುಃಖೀತನಾದ. ಅದೇ ಒಂದು ಕೊರಗಾಯಿತು. ಅದೇ ಯೋಚನೆಯಲ್ಲಿ ರಾಜ ಹುಷಾರು ತಪ್ಪಿದ. ರಾಜ್ಯದಲ್ಲಿದ್ದ ವೈದ್ಯರೆಲ್ಲರೂ ಔಷಧಿ ನೀಡಿದರೂ ರಾಜನ ಆರೋಗ್ಯ ಸರಿಹೋಗಲಿಲ್ಲ. ಮಂತ್ರಿಗೆ ಒಂದೊಳ್ಳೆ ಉಪಾಯ ಹೊಳೆಯಿತು.
ರಾಜನ ಬಳಿ ತೆರಳಿ ಲೋಕಾಭಿರಾಮವಾಗಿ ಮಾತನಾಡುತ್ತಾ ಹಕ್ಕಿಯ ವಿಷಯ ಎತ್ತಿದ. ರಾಜ ಏನು ಮಾತಾಡಿದರೆ ಏನು ಬಂತು ಹಕ್ಕಿ ಹಾರಿಹೋಯಿತಲ್ಲ ಎಂದು ನಿಟ್ಟುಸಿರು ಬಿಟ್ಟ. ಅದೇ ಸಂದರ್ಭ ಕಾಯುತ್ತಿದ್ದ ಮಂತ್ರಿ “ಆ ಹಕ್ಕಿಯ ಹೆಸರು ತಿಳಿದ ವ್ಯಕ್ತಿ ರಾಜ್ಯದಲ್ಲೇ ಇಲ್ಲ. ಹೆಸರು ತಿಳಿದಾಗ ಅಲ್ಲವೇ ಅದಕ್ಕೆ ಬೆಲೆ ಬರುವುದು. ಹೆಸರೂ ಗೊತ್ತಿಲ್ಲದ್ದರಿಂದ ಅದಕ್ಕೆ ಬೆಲೆಯೇ ಇಲ್ಲದಂತಾಯಿತು. ಅಂಥಾ ಹಕ್ಕಿ ನಿಮ್ಮ ಬಳಿ ಇದ್ದರೆಷ್ಟು ಬಿಟ್ಟರೆಷ್ಟು!’ ಎಂದನು. ಮಂತ್ರಿಯ ಮಾತು ಕೇಳಿ ರಾಜನಿಗೆ ಸಂತಸವಾಯಿತು. ಅವನ ಕೊರಗು ಒಂದೇ ಕ್ಷಣದಲ್ಲಿ ಮಾಯವಾಯಿತು. ರಾಜ ಮಂತ್ರಿಯನ್ನು ವಿಶ್ವಾಸದಿಂದ ಆಲಂಗಿಸಿದ.
ವೇದಾವತಿ ಹೆಚ್. ಎಸ್.