Advertisement

ಹುಡುಗಿಯಾದರೇನು; ಕಾಡನ್ನು ಹೊಕ್ಕು ಸಂಶೋಧನೆ ಕೈಗೊಳ್ಳಬಾರದೇನು?

12:30 AM Mar 08, 2019 | Team Udayavani |

ನನಗೆ ಕಾಡುಗಳ ಬಗ್ಗೆ ವಿಪರೀತ ವ್ಯಾಮೋಹ ಹುಟ್ಟಿಕೊಂಡಿತ್ತು. ಕಾಡು ನೋಡಬೇಕು, ಸುತ್ತಾಡಬೇಕು ಎನ್ನುವ ಅದಮ್ಯ ಆಸೆ ಕೈಗೂಡಿದ್ದು, ನಾನು ಸಂಶೋಧನಾ ವಿದ್ಯಾರ್ಥಿನಿಯಾಗಿ ಆನೆಗಳ ಬಗ್ಗೆ ಸಂಶೋಧನೆಯನ್ನು ಆಯ್ದುಕೊಂಡಾಗ. ಸಂಶೋಧನೆಯ ಸುಮಾರು ಎರಡೂವರೆ ವರ್ಷಗಳ ಕಾಲ ನಾನು ನಾಗರಹೊಳೆ, ಬಂಡೀಪುರದ ಕಾಡುಗಳಲ್ಲಿ ಸುತ್ತಾಡಬಹುದಾದ ಮಹತ್ತರವಾದ ಅವಕಾಶ ನನಗೆ ದೊರಕಿತು.

Advertisement

ನಾವು ಒಳಸೇರಿದಂತೆ ದಿನದಿನವೂ ಇನಿತಿನಿತು ಪರಿಚಯವಾಗಿ ಕಾಡು ತನ್ನ ಗಹನತೆಯನ್ನು ಬಿಟ್ಟುಕೊಡುತ್ತ ಮತ್ತಷ್ಟು ಆಪ್ತವೆನಿಸತೊಡಗಿತು. ಜೀರುಂಡೆಗಳ ಝೇಂಕಾರ, ಹಕ್ಕಿಗಳ ಇಂಚರ, ಎಲ್ಲೋ ಎಲೆಯ ಮರೆಯಲ್ಲಿ ಕುಳಿತು “ಕುಹೂ’ ಎನ್ನುವ ಕೋಗಿಲೆಯ ಇಂಪು ಗಾಯನ, ಕಾಡಿನ ಇಂಚಿಂಚಿನಲ್ಲೂ ಲೆಕ್ಕವಿಲ್ಲದ ಕ್ರಿಯೆಪ್ರಕ್ರಿಯೆಗಳು ಜರುಗಿದರೂ ತನಗದರ ಸಂಬಂಧವಿಲ್ಲದಂತೆ ಮುಂಜಾವಿನ ಹನಿಗಳ ಮುತ್ತಿನ ತೋರಣವನ್ನು ಧರಿಸಿಕೊಂಡು ಗಾಂಭೀರ್ಯದಿಂದ ಲಕಲಕಿಸುತ್ತಾ ತೂಗುವ ಜೇಡರ ಬಲೆ… ಹೀಗೆ ನಾಗರಹೊಳೆ, ಬಂಡೀಪುರದ ಕಾಡುಗಳು, ಅವುಗಳ ಆಂತರ್ಯದಲ್ಲಿ ಸ್ಥಳ ಪಡೆದ ವೈವಿಧ್ಯಮಯ ಮರಗಳು, ಇವುಗಳ ನಡುವೆ ನಾವು ಆನೆಗಳ ಜಾಡನ್ನು ಹಿಡಿದು ಹೊರಡುವ ಸೊಟ್ಟ ಸೊಟ್ಟಗಿನ ಹಾದಿ, ಅದರ ನಡುವೆ ನಿಧಾನವಾಗಿ ಸಾಗುವ ನಮ್ಮ ಜೀಪು, ಕಬಿನಿಯ ತೀರ, ದುರ್ಬೀನು ಕೈಯಲ್ಲಿ ಹಿಡಿದು ಆನೆಗಳ ಗಾತ್ರ, ಎತ್ತರ, ಕಿವಿಯ ಅಗಲ, ಓರೆಕೋರೆ, ದಂತ ಎಂದು ಒಂದೊಂದನ್ನೇ ವೀಕ್ಷಿಸುತ್ತ ನೋಟ್ಸ್‌ ಬರೆಯುತ್ತ ಕೂರುವ ನಾವು, ಗುಂಪಿನಲ್ಲಿ ಆನೆಗಳ ಸ್ವಭಾವ, ವರ್ತನೆಯನ್ನು ವೀಡಿಯೋ ಮಾಡುತ್ತ ದಾಖಲಿಸುವ ಆ ಕ್ಷಣ, ಕಾಡಿನ ಕಥೆಗಳನ್ನು ನನ್ನೊಂದಿಗೆ ಸಮಯ ಸಿಕ್ಕಿದಾಗಲೆಲ್ಲ ಹಂಚಿಕೊಳ್ಳುವ ಜೇನು ಕುರುಬ ಕೃಷ್ಣ , ಸುತ್ತಮುತ್ತಲ ಹಳ್ಳಿಗಳು, ಹಳ್ಳಿಯ ಜನರು… ಎಲ್ಲವೂ ಸುಂದರ ಚಿತ್ರವಾಗಿ ನನ್ನ ಮನದ ಕ್ಯಾನ್‌ವಾಸಿನಲ್ಲಿ ಬಿತ್ತರಗೊಂಡಿದೆ.

ಬಿಸಿಲಿನ ಝಳಕ್ಕೆ ಕಾಡುಗಳು ಬೆಂಕಿಗಾಹುತಿಯಾಗುವುದನ್ನು  ನೋಡಿದ್ದೆವು. ಜನರು ಕಾಡಾನೆಗಳ ದಾಳಿಗೆ ತುತ್ತಾದ ಕಥೆಗಳನ್ನು ಕೇಳಿದ್ದೆವು. ನರಭಕ್ಷಕ ಹುಲಿಗಳು  ಮನುಷ್ಯರನ್ನು ಎತ್ತಿಕೊಂಡು ಹೋದ ಕಥೆಗಳನ್ನೂ ಕೇಳಿದ್ದೆವು. ಕಾಡಿನಲ್ಲಿದ್ದಾಗ ಒಮ್ಮೊಮ್ಮೆ ಇಂಥ ಘಟನೆಗಳು  ನೆನಪಾಗಿ ಎದೆಯಲ್ಲಿ ಭೀತಿಯ ಅಲೆಯನ್ನು ಎಬ್ಬಿಸುತ್ತಿದ್ದವು. ಒಂದೊಮ್ಮೆ ಹುಲಿಯೊಂದು ನಮ್ಮ ಜೀಪಿನ ಸಮೀಪದಿಂದಲೇ ಜಿಗಿದು ಹಾದುಹೋಗಿ ಝಲ್ಲೆಂದು  ಹುಟ್ಟಿಸಿದ ನಡುಕ ಇನ್ನೂ ಎದೆಯಲ್ಲೇ ಇದೆ. ಇನ್ನೊಂದು ಸಲ ಜಿಂಕೆಯೊಂದನ್ನು ಕೆನ್ನಾಯಿ ಅಟ್ಟಿಸಿಕೊಂಡು ಬಂದಿತ್ತು. ಪ್ರಾಣರಕ್ಷಣೆಗಾಗಿ ನಾಗಾಲೋಟದಲ್ಲಿದ್ದ ಜಿಂಕೆ ಕಬಿನಿಯ ನೀರೊಳಗೆ ಅವಿತುಕೊಂಡಿತು. ಆದರೆ ವಿಧಿಯ ಅಟ್ಟಹಾಸ ನೋಡಿ, ನೀರೊಳಗೆ ಅವಿತ ಜಿಂಕೆ ಮೊಸಳೆಗೆ ಆಹಾರವಾಗಿತ್ತು. ಕೆಲವೇ ನಿಮಿಷಗಳೊಳಗೆ ಇಷ್ಟೆಲ್ಲ ನಡೆದು, ಬದುಕಿನ ಕ್ಷಣಿಕತೆಯ ಪಾಠ ಹೇಳಿತ್ತು. ಹೀಗೆ ಭೀತಿಯ ನಡುವೆಯೂ ಕಾಡು ದಿನದಿನವೂ ಚೋದ್ಯವನ್ನು ಹುಟ್ಟಿಸುತ್ತ ಅಪ್ಯಾಯಮಾನವಾದ ಪರಿ ನನಗೆ ನಿಜಕ್ಕೂ ಅಚ್ಚರಿ ತಂದಿದೆ.

ಆನೆಗಳ ಜಾಡು ಹಿಡಿದು ಹೊರಟ ನಾನು ಡಾಕ್ಟರೇಟ್‌ ಪಡೆದದ್ದೇನೋ ನಿಜ. ಅದಕ್ಕಿಂತಲೂ ಹೆಚ್ಚಾಗಿ ಕಾಡು ನೀಡಿದ ಆನಂದ, ಅಚ್ಚರಿ, ತಿಳುವಳಿಕೆ, ಆತ್ಮೀಯತೆ ಇವೆಲ್ಲ ನನ್ನ ವ್ಯಕ್ತಿತ್ವದಲ್ಲಿ ಆಭರಣಗಳಂತೆ ಸೇರಿಹೋಗಿವೆ.
 
ನಂದಿನಿ ಆರ್‌. ಶೆಟ್ಟಿ
(ಏಷ್ಯಾದ ಹೆಣ್ಣಾನೆಗಳ ಸೋಶಿಯಲ್‌ ಬಿಹೇವಿಯರ್‌ ಎಂಬ ವಿಷಯದಲ್ಲಿ  ಸಂಶೋಧನೆ ನಡೆಸಿ ಜೆಎನ್‌ಸಿಎಎಸ್‌ಆರ್‌ದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ)

Advertisement

Udayavani is now on Telegram. Click here to join our channel and stay updated with the latest news.

Next