Advertisement

ಕೇಂದ್ರದಿಂದ ಬಂದ 2.09 ಲಕ್ಷ ಕೋಟಿ ಏನಾಯ್ತು? ಸಿಎಂಗೆ ಶಾ ಪ್ರಶ್ನೆ

10:16 AM Aug 15, 2017 | Team Udayavani |

ಬೆಂಗಳೂರು: ಅನುದಾನ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಂಕಿ ಅಂಶಗಳ ಸಹಿತ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 14ನೇ ಹಣಕಾಸು ಆಯೋಗದ ಮೂಲಕ ನೀಡಿರುವ 1.30 ಲಕ್ಷ ಕೋಟಿ ರೂ. ಮತ್ತು ಇತರೆ ಯೋಜನೆಗಳಲ್ಲಿ ಬಿಡುಗಡೆ ಮಾಡಿರುವ 79 ಸಾವಿರ ಕೋಟಿ ರೂ. ಸೇರಿ ಒಟ್ಟು ಸುಮಾರು 2.09 ಲಕ್ಷ ಕೋಟಿ ರೂ. ಎಲ್ಲಿ ಹೋಯಿತು ಎಂಬುದಕ್ಕೆ ಉತ್ತರ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

Advertisement

ಮೂರು ದಿನಗಳಿಂದ ರಾಜ್ಯ ಪ್ರವಾಸ ದಲ್ಲಿರುವ ಅಮಿತ್‌ ಶಾ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಸವಾಲುಗಳನ್ನು ಹಾಕಿದರು. ಅಲ್ಲದೆ, ವಾಸ್ತವಾಂಶವನ್ನು ಮುಚ್ಚಿಟ್ಟು ವಿಷಯಾಂತರ ಮಾಡಿದರೆ ರಾಜ್ಯದ ಜನರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು. 13ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದ ತೆರಿಗೆ ಪಾಲು 61691 ಕೋಟಿ ರೂ. ನೀಡಿದ್ದರೆ, ನಮ್ಮ ಸರ್ಕಾರ ಬಂದ ಮೇಲೆ 14ನೇ ಹಣಕಾಸು ಆಯೋಗದಲ್ಲಿ ಕೇಂದ್ರ ತೆರಿಗೆಯಿಂದ 1,86,925 ಕೋಟಿ ರೂ. ಅನುದಾನ
ನಿಗದಿಯಾಗಿದೆ. ಇದು 1,25,234 ಕೋಟಿ ಹೆಚ್ಚುವರಿಯಾಗಿದೆ. ಇದಲ್ಲದೆ ಕೇಂದ್ರದಿಂದ ಅನುದಾನ ರೂಪದಲ್ಲಿ ಇದ್ದ ಮೊತ್ತವನ್ನು 11,518 ಕೋಟಿ
ರೂ.ನಿಂದ 16,291 ಕೋಟಿ ರೂ.ಗೆ, ಪರಿಹಾರ ಮತ್ತು ಪನರ್ವಸತಿಗೆ ಇದ್ದ ಅನುದಾನವನ್ನು 6,067 ಕೋಟಿಯಿಂದ 11,145 ಕೋಟಿ ರೂ.ಗೆ, ಸ್ಥಳೀಯ ಸಂಸ್ಥೆಗಳ ನಿಧಿಯನ್ನು 6,535 ಕೋಟಿಯಿಂದ 15,145 ಕೋಟಿ. ರೂ.ಗೆ ಏರಿಸಲಾಗಿದೆ ಎಂದು ವಿವರಿಸಿದರು. 

ಒಟ್ಟಾರೆ 13ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ 88,583 ಕೋಟಿ ರೂ. ನಿಗದಿಯಾಗಿದ್ದರೆ, 14ನೇ ಹಣಕಾಸು ಯೋಜನೆಯಡಿ 2,19,506 ಕೋಟಿ ರೂ. ನಿಗದಿಯಾಗಿದೆ. ಅಂದರೆ, ಸುಮಾರು 1,30,923 ಕೋಟಿ ರೂ. ಹೆಚ್ಚುವರಿಯಾಗಿ ರಾಜ್ಯಕ್ಕೆ ಲಭ್ಯವಾಗಿದೆ. ಈ ಹಣ ರೈತರು, ದಲಿತರು, ಬುಡಕಟ್ಟು ಸಮುದಾಯದವರು, ಬಡವರಿಗೆ ಸಿಕ್ಕಿಲ್ಲ. ಮೂಲ ಸೌಕರ್ಯ ಅಭಿವೃದ್ಧಿಯೂ ಆಗಿಲ್ಲ. ನೀರಾವರಿ ಭೂಮಿಯ ಪ್ರಮಾಣ ಏರಿಕೆಯಾಗಿಲ್ಲ.
ಹಾಗಿದ್ದರೆ ಈ ಹಣ ಎಲ್ಲಿ ಹೋಯಿತು ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು. 

ಕೇಂದ್ರದ ಯೋಜನೆಗಳಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, 14ನೇ ಹಣಕಾಸು ಆಯೋಗದ ಅನುದಾನ ಹೊರತುಪಡಿ ಮುದ್ರಾ ಯೋಜನೆಯಡಿ 39 ಕೋಟಿ ರೂ., ಸ್ಮಾರ್ಟ್‌ ಸಿಟಿಗೆ 960 ಕೋಟಿ ರೂ., ಅಮೃತ್‌ ಮಿಷನ್‌ನಡಿ 4900 ಕೋಟಿ ರೂ., ಹೃದಯ ಯೋಜನೆಯಲ್ಲಿ 22 ಕೋಟಿ ರೂ., ಸ್ವತ್ಛ ಭಾರತ ಮಿಷನ್‌ನ 204 ಕೋಟಿ ರೂ., ಬಸ್ಸುಗಳ ಖರೀದಿಗೆ 239 ಕೋಟಿ ರೂ., ಬೆಂಗಳೂರು ಮೆಟ್ರೋ ಯೋಜನೆಗೆ 2,616 ಕೋಟಿ ರೂ., ಡಿಎಂಎಂಗೆ 209 ಕೋಟಿ ರೂ., ಕೃಷಿ ಸಂಚಯದಡಿ 405 ಕೋಟಿ ರೂ., ಪ್ರಧಾನಮಂತ್ರಿ ವಸತಿ ಯೋಜನೆಗೆ 219 ಕೋಟಿ ರೂ. ಸೇರಿ ಕೇಂದ್ರ ಸರ್ಕಾರ ಒಟ್ಟು 18 ಸಾವಿರ ಕೋಟಿ ರೂ. ನೆರವು ನೀಡಿದೆ. ಅಲ್ಲದೆ, 3546 ಕಿ.ಮೀ. ರಸ್ತೆ ಅಭಿವೃದ್ಧಿಗೆ 26,486 ಕೋಟಿ ರೂ., ರೈಲ್ವೆ ಯೋಜನೆಗಳಿಗೆ 2,197 ಕೋಟಿ ರೂ. ಸೇರಿ ಒಟ್ಟು 79,036 ಕೋಟಿ ರೂ. ನೀಡಿದೆ. ಉಜ್ವಲ ಯೋಜನೆಯಡಿ 4,300 ಕೋಟಿ. ರೂ. ಒದಗಿಸಿದೆ. ಈ ಹಣವೆಲ್ಲಾ ಎಲ್ಲಿ ಹೋಯಿತು ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

“ಕೇಂದ್ರದ ಅನುದಾನದ ಬಗ್ಗೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪದ ಬಗ್ಗೆ ಪ್ರಶ್ನಿಸಿದಾಗ, “ಈ ಕುರಿತು ಅಂಕಿ ಅಂಶ ಕೊಟ್ಟಿದ್ದೇನೆ. ಕೇಂದ್ರ ಸರ್ಕಾರದ ವೆಬ್‌ ಸೈಟ್‌ನಲ್ಲೂ ಇದೆ. ಹೀಗಿರುವಾಗ ಅದು ಸುಳ್ಳು ಹೇಗೆ ಎಂಬುದನ್ನು ಹೇಳಲಿ. ಕೇಂದ್ರದಿಂದ ನಾನು ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ ಅನುದಾನ ಬಂದಿದೆಯೇ, ಇಲ್ಲವೇ? ಎಂಬುದನ್ನು ಸ್ಪಷ್ಟಪಡಿಸಲಿ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next