ಅಮೆರಿಕನ್ ಲೇಖಕ ಮಾರ್ಕ್ ಟ್ವೇನ್, ಅದೊಮ್ಮೆ ಗೆಳೆಯರೊಂದಿಗೆ ಯುರೋಪ್‌ಗೆ ಪ್ರವಾಸ ಹೋಗಿದ್ದ. ಮಾರ್ಕ್ ಟ್ವೇನ್‌ನ ಪ್ರಸಿದ್ಧಿಯ ಬಗ್ಗೆ ಟೂರ್ ಗೈಡ್‌ಗಳಿಗೆ ಹೇಗೆ ತಿಳಿಯಬೇಕು? ಇವರ್ಯಾರೋ ಪ್ರವಾಸಿಗಳು ಎಂದೇ ಅವರು ಭಾವಿಸಿದ್ದರು. ತಮಗೆ ಗೊತ್ತಿದ್ದ, ಗೊತ್ತಿಲ್ಲದ ಎಲ್ಲ ಕಥೆಗಳನ್ನೂ ಚರಿತ್ರಾರ್ಹ ಸಂಗತಿಗಳೆಂದೇ ಬಣ್ಣಿಸುತ್ತಿದ್ದರು. ಎಷ್ಟೋ ಸಲ, ಇಂಥ ಅತಿರಂಜಿತ ಕಥೆಗಳಲ್ಲಿ ಕಾಳಿಗಿಂತ ಜೊಳ್ಳೇ ಹೆಚ್ಚಿದೆಯೆಂಬುದು ಅರಿವಿಗೆ ಬರುತ್ತಿದ್ದರೂ, ಮಾರ್ಕ್ ಟ್ವೇನ್ ಮತ್ತು ಸಂಗಡಿಗರಿಗೆ ಏನೂ ಮಾಡಲು ಅವಕಾಶವಿರಲಿಲ್ಲ.
ಕೊನೆಗೊಂದು ದಿನ ಅವರು ಒಂದು ಉಪಾಯ ಮಾಡಿದರು. “ಗೈಡ್ ಎಂಥ ಅದ್ಭುತ ಕಥೆಯನ್ನೇ ಹೇಳಲಿ, ಅದಕ್ಕೊಂದು ತೇಲುಹೇಳಿಕೆಯಂಥ ಬದಲಿ ಉತ್ತರ ಹೇಳಿಬಿಡಬೇಕು. ಅದೇನು ಮಹಾ ಎಂಬಂತೆ, ವ್ಯಂಗ್ಯದ ಮಾತುಗಳಾಡಿ ಚುಚ್ಚಬೇಕು. ನಮ್ಮ ಊರಲ್ಲಿ ಇದಕ್ಕಿಂತ ದೊಡ್ಡದು, ಇದಕ್ಕಿಂತ ಚೆಲುವಾದದ್ದು, ಇದಕ್ಕಿಂತ ಪುರಾತನವಾ ದದ್ದು ಇದೆ ಎಂಬ ಧಾಟಿಯಲ್ಲಿ ಮಾತಾಡಿ ಗೈಡ್‌ಗಳ ಪ್ರತಿಷ್ಠೆ ಒಡೆಯಬೇಕು’-ಎಂದು ನಿರ್ಧರಿಸಿದರು. ಸರಿ. ತಂಡ ಯುರೋಪಿನ ಒಂದು ದೊಡ್ಡ ಮ್ಯೂಸಿಯಂನ ದರ್ಶನ ಮಾಡುತ್ತಿತ್ತು.
ಅಲ್ಲೂ ಒಬ್ಬ ಗೈಡ್ ಇವರಿಗೆ ಎಡತಾಕಿದ. ಅದು ನೋಡಿ ಜಾರ್ಜ್ ದೊರೆ ಬಳಸಿದ ಖಡ್ಗ, ಇದು ಕ್ಯಾಥರೀನ್ ರಾಣಿ ಬಳಸಿದ ಗೌನು, ಅದು ಫಿಲಿಪ್ ದೊರೆ ಬಳಸಿದ ಪೀಕುದಾನಿ… ಹೀಗೆ, ಪ್ರತಿಯೊಂದು ವಸ್ತುವನ್ನು ತೋರಿಸುತ್ತಲೂ, ಉದ್ದುದ್ದದ ವಿವರಣೆ ನೀಡುತ್ತಿದ್ದ. ಹಾಗೇ ಮುಂದುವರಿ ಯುತ್ತ, ಒಂದು ಹಳೇ ಕಾಲದ ಕಾಗದ ತೋರಿಸಿದ. “ಇದರ ವಿಶೇಷ ಏನು ಗೊತ್ತೆ? ಇದು ಕ್ರಿಸ್ಟೊಫರ್ ಕೊಲಂಬಸ್, ರಾಣಿ ಇಸಬೆಲಾಳಿಗೆ ಬರೆದ ಅಮೂಲ್ಯವಾದ ಪತ್ರ’ ಎಂದ. ಕೊಲಂಬಸ್ ಯಾತ್ರೆ ಹೊರ ಡುವ ಮುನ್ನ ಇಸಬೆಲಾಳಿಗೆ ನಿವೇದನೆ ಮಾಡಿಕೊಂಡನೆಂದೂ,
ಅದಕ್ಕೆ ಆಕೆ ಒಪ್ಪಿ ಧನಸಹಾಯ ಮಾಡಿದಳೆಂಬುದೂ, ಭಾರತ ಮುಟ್ಟುವ ಬದಲು ಕೊಲಂಬಸ್ ಅಮೆರಿಕಾ ದೇಶವನ್ನು ಶೋಧಿಸಿದನೆಂದೂ ಇತಿಹಾಸ ಓದಿದವರಿಗೆಲ್ಲ ಗೊತ್ತಿದೆ. ಗೈಡ್‌ನ ಪೀಠಿಕೆ ಮುಗಿದು ಮುಖ್ಯ ಕಥೆ ಶುರುವಾಗುವ ಮೊದಲೇ ಮಾರ್ಕ್ ಟ್ವೇನ್ ಆತನನ್ನು ತಡೆದು ಹೇಳಿದ- “ಏನು, ಕೊಲಂಬಸ್ ಬರೆದ ಪತ್ರವೇ? ಅಕ್ಷರ ಎಲ್ಲ ಸೊಟ್ಟಸೊಟ್ಟಗಾಗಿದೆ. ನಮ್ಮೂರಲ್ಲಿ ಹತ್ತು- ಹನ್ನೆರಡು ವರ್ಷದ ಹುಡುಗರ ಕೈಬರಹ ಇದಕ್ಕಿಂತ ಚೆನ್ನಾಗಿದೆ’.
* ರೋಹಿತ್ ಚಕ್ರತೀರ್ಥ