ಮತ್ತೆ, ಏನ್ ವಿಶೇಷ?- ಎಂದು ಪದೇ ಪದೆ ಕೇಳುವುದೇ ಕೆಲವರಿಗೆ ಅಭ್ಯಾಸ ಆಗಿರುತ್ತದೆ. ತಮ್ಮ ಮಾತಿನಿಂದ ಇತರರಿಗೆ ಕಿರಿಕಿರಿ ಆಗಬಹುದಾ ಎಂದು ಒಮ್ಮೆಯೂ ಯೋಚಿಸದೆ ಅವರು ಹಾಗೆ ಕೇಳುತ್ತಲೇ ಇರುತ್ತಾರೆ…
ಕೆಲವರಿಗೆ, ಪದೇ ಪದೆ “ಮತ್ತೆ ಏನು ವಿಶೇಷ ?’ಅಂತ ಕೇಳುವುದು ಅಭ್ಯಾಸ. ಪದೇ ಪದೆ ಹಾಗೆ ಯಾರಾದರೂ ಕೇಳಿದರೆ ನಮಗೆ ಕಿರಿಕಿರಿಯಾಗದೇ ಇರುತ್ತದೆಯೇ? ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದೆ. ಗುರುತಿನವರೊಬ್ಬರು ಬಂದು ಹತ್ತಿರ ಕುಳಿತರು. “ಓ, ನಿಂಗೂ ಇನ್ವಿಟೇಶನ್ ಇತ್ತಾ ಮಾರಾಯ್ತಿ?’ ಅಂದ್ರು. “ಅಯ್ಯೋ ರಾಮ, ಮತ್ತೆ ಕರೆಯದೇ ಇದ್ದರೆ ಯಾರಾದ್ರೂ ಬರ್ತಾರಾ?’ ಅಂತ ಮನದಲ್ಲೇ ಹೇಳಿಕೊಂಡರೂ, ಅವರೆದುರು ಮಾತ್ರ “ಹೌದೌದು’ ಅಂತಷ್ಟೇ ಹೇಳಿ, ಹಲ್ಲು ಕಿರಿದು ಗೋಣಾಡಿಸಿದೆ. ಸ್ವಲ್ಪ ಹೊತ್ತು ಅದು, ಇದು, ಬೇಕಿದ್ದದ್ದು, ಬೇಡದಿದ್ದಿದ್ದು ಎಲ್ಲವನ್ನೂ ಮಾತಾಡಿದ ಅವರು, “ಮತ್ತೆ, ಏನು ವಿಶೇಷ?’ ಅಂದ್ರು! ಎದುರಿಗೆ ನಡೆಯುತ್ತಿದ್ದ ಕಾರ್ಯಕ್ರಮ ತೋರಿಸಿ, “ನೋಡಿ, ಇವತ್ತು ಇದೇ ವಿಶೇಷ’ ಅಂದೆ.
ಸ್ವಲ್ಪ ಹೊತ್ತಿನ ನಂತರ, “ಮತ್ತೆ..ಏನು ವಿಶೇಷ?’ ಅಂತ ಅದೇ ರಾಗ, ಅದೇ ತಾಳ. ಅವರಿಗೆ ಮಾತು, ಮಾತು, ಮಾತು ಮಾತ್ರ ಬೇಕಿತ್ತು. ಕಾರ್ಯಕ್ರಮ ನೋಡುವ ಯಾವ ಆಸಕ್ತಿಯೂ ಇರಲಿಲ್ಲ. “ಏನಿಲ್ಲ, ಎಲ್ಲ ನಿಮ್ಮದೇ. ನೀವು ಹೇಳಿ’ ಅಂದೆ. “ನನ್ನದು ಏನಿಲ್ಲ ಮಾರಾಯ್ತಿ. ವಿಶೇಷ ಏನಿದ್ರೂ ಇನ್ನು ನಿಮ್ಮದೇ! ಅಂತಂದ್ರು. “ಅದ್ಯಾಕೆ ಹಾಗೆ?’ ಅಂತ ಕೇಳಿದ್ರೆ, “ಅಲ್ಲ, ನಂಗೆ ಪ್ರಾಯ ಆಯ್ತು. ನೀವಿನ್ನೂ ಯಂಗ್, ಎಲ್ಲಾ ನಿಮ್ಮದೇ’ ಅಂತಂದ್ರು .ಹಾಗಾದ್ರೆ, ಅವರು ಯಾವ ಅರ್ಥದಲ್ಲಿ ವಿಶೇಷ ಕೇಳಿರಬಹುದು ಅಂತ ನನಗೆ ಗೊಂದಲ ಆಯ್ತು. ಅವತ್ತು, ಆ ಜಾಗದಿಂದ ಯಾವಾಗೊಮ್ಮೆ ತಪ್ಪಿಸಿಕೊಳ್ಳುತ್ತೀನೋ ಅಂತಾಗಿತ್ತು ನನಗೆ.
ನನ್ನ ಫ್ರೆಂಡ್ ಹೇಳಿದ್ದು. ಅವಳ ಫ್ರೆಂಡ್‌ಗೆ ಪದೇ ಪದೆ, “ಏನು ವಿಶೇಷ ?’ಅಂತ ಕೇಳುವ ಚಟ. ಅದನ್ನು ಕೇಳಿ ಕೇಳಿ ಬೇಸತ್ತಿದ್ದ ಅವಳು, ಒಂದು ದಿನ, “ನಂಗೆ ಬೇರೆ ಹುಡುಗನೊಟ್ಟಿಗೆ ಮದುವೆ ನಿಶ್ಚಯವಾಗಿದೆ. ಅದೇ ವಿಶೇಷ’ ಅಂದಳಂತೆ. ಅವಳು ಬೇಕಂತಲೇ ಹಾಗೆ ಹೇಳಿದ್ದೆಂದು ಗೊತ್ತಾಗಿ, ಮತ್ತೆ ಹಾಗೆ ಕೇಳುವುದೇ ಬಂದ್!
ಇನ್ನೂ ಕೆಲವರು ಕೇಳುವುದಿದೆ- “ಮತ್ತೇನು ಕಾರ್‌ಬಾರ್?’ ಅಂತ. ನಂದು ಅದಕ್ಕೆ ಯಾವಾಗಲೂ ಒಂದೇ ರೆಡಿಮೇಡ್ ಉತ್ತರ. ಕಾರ್ ಗ್ಯಾರೇಜ್‌ನಲ್ಲಿ, ಬಾರ್ (ತುಳುವಲ್ಲಿ ಭತ್ತ ) ಮಿಲ್ಲಿನಲ್ಲಿ ಅಂತ. ನನ್ನ ಅಣ್ಣನೊಬ್ಬ ಕಾಲ್ ಮಾಡಿದಾಗೆಲ್ಲಾ ಕೇಳುವ ಪ್ರಶ್ನೆ ಅದೊಂದೇ. “ಮತ್ತೆ ಏನು ವಿಶೇಷ?’ಅಂತ ಒಂದು ಹತ್ತು ಸಲವಾದರೂ ಕೇಳದೆ ಅವರು ಫೋನ್ ಇಡೋದೇ ಇಲ್ಲ. ನಮಗೂ ಹೇಳಿ ಹೇಳಿ ಸಾಕಾಗ್ತದೆ.. ಏನಿಲ್ಲ ವಿಶೇಷ, ಕಾರುಬಾರು ನಿಮ್ಮದೇ ಅಂತ. ಆದರೂ, ಆ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈಗ ಇದನ್ನು ಓದಿದವರೆಲ್ಲ ಹೇಳಿ..ಮತ್ತೆ ನಿಮ್ಮದೇನು ವಿಶೇಷ..??
-ಸವಿತಾ ಶೆಟ್ಟಿ