ನನಗೆ ಗೊತ್ತಿರುವಂತೆ ನೀನು ಒಳ್ಳೆಯವಳೇ. ಆದರೆ, ನಿನಗೆ ಅತೀ ಅನ್ನಿಸುವಷ್ಟು ಸ್ವಾರ್ಥವಿದೆ. ಜೊತೆಗಿರುವವರನ್ನು ಗಿರಗಿಟ್ಲೆಯಂತೆ ತಿರುಗಿಸಬಲ್ಲ ಚಾಲಾಕಿತನವಿದೆ. ಇದೇ ಕಾರಣದಿಂದ ಹೀರೋಯಿನ್ ರೂಪಿನ ನೀನು ಲೇಡಿ ವಿಲನ್ ಆಗಿ ಕಾಣಿಸ್ತಿದೀಯ…
ಅದೆಷ್ಟು ವಿಷ ತುಂಬಿದೆಯೇ ನಿನ್ನೊಳಗೆ? ಮಹಾನ್ ಮೋಸಗಾತಿ ನೀನು. ವಿಶ್ವಾಸಘಾತುಕಿ.ಕೆನ್ನೆ ಮೇಲಿನ ಮಚ್ಚೆಯಷ್ಟೂ ಲಜ್ಜೆ ಇಲ್ಲವಲ್ಲೇ ನಿನಗೆ? ಕೈಬೆರಳುಗಳಂತೂ ಇಳಿಬಿದ್ದ ಮುಂಗುರುಳುಗಳ ಸುತ್ತುತ್ತಲೇ ನನ್ನ ಮನಸ್ಸನ್ನೂ ನಿನ್ನ ಸುತ್ತ ಸುತ್ತುವಂತೆ ಮಾಡಿದವು. ಸಮಯಸಾಧಕರಂತೆ ಹೊಂಚು ಹಾಕುತ್ತಿರುತ್ತವೆ ನಿನ್ನ ಕಣ್ಣುಗಳು. ಗುರುತ್ವಾಕರ್ಷಣೆಯ ಬಲದಿಂದಾಗಿ, ಭೂಮಿಯೆಡೆಗೆ ಬೀಳುವ ಆಕಾಶ ಕಾಯಗಳಿಗಿಂತಲೂ ವೇಗವಾಗಿ ಜಾರಿದೆ ನಾನು ನಿನ್ನ ಪ್ರೀತಿಯ ಆಕರ್ಷಣೆಗೆ.
ಆದರೆ ನೀನು ಮಾಡಿದ್ದೇನು? ಅದ್ಯಾವುದನ್ನೂ ಅರ್ಥಮಾಡಿಕೊಳ್ಳಲೇ ಇಲ್ಲ. ಬರೀ ನಿನ್ನ ಅನುಕೂಲಕ್ಕೆ ನನ್ನನ್ನು ಬಳಸಿಕೊಂಡೆಯಷ್ಟೇ. ನನ್ನ ಹೃದಯದೊಂದಿಗೆ ಚೆಲ್ಲಾಟವಾಡಿದೆ. ನನ್ನ ಹೃದಯವನ್ನೇನು ಸೇಫ್ಟಿ ಲಾಕರ್ ಅಂದುಕೊಂಡೆಯಾ, ನಿನ್ನ ಆಸೆ, ಪ್ರೀತಿ, ಕನಸುಗಳನ್ನೆಲ್ಲಾ ಭದ್ರವಾಗಿಡಲು? ಅವೋ ಒಂದೆರೆಡಲ್ಲಾ, ಟನ್ನುಗಳಷ್ಟು ಕನಸುಗಳು, ಹಿಡಿಸಲಾರದಷ್ಟು ಆಸೆಗಳು, ಜೊತೆಗೊಂದೆರೆಡು ಕಿಲೋಗಳಷ್ಟು ಸ್ವಾರ್ಥ, ಕೆಲವು ಲೀಟರಿನಷ್ಟು ದುಃಖ ಬೇರೆ.ಎಷ್ಟೆಂದು ಸಸಿಕೊಳ್ಳಲಿ ಇವನ್ನೆಲ್ಲಾ? ಇವುಗಳ ಸಂತೈಸುವ ಗೋಜಿನೊಳಗೆ ನನ್ನ ಸ್ವಂತದ ಕನಸುಗಳು ಕರಗಿವೆ, ಪ್ರೀತಿ ಮಾಯವಾಗಿದೆ, ದುಃಖವೂ ದೂರಾಗಿದೆ, ಸ್ವಾರ್ಥವೂ ಸಿಗದಾಗಿದೆ. ಥೇಟು ಬಾಡಿಗೆಗೆ ಬಿಟ್ಟ ಬಂಗಲೆಯಾಗಿದೆ ನನ್ನ ಹೃದಯವೆಂಬ ಪ್ರೇಮಮಂದಿರ.
ದೂರ್ವಾಸನ ಮಗಳು ನೀನು. ಪ್ರೀತಿ ಪ್ರೇಮದ ಅರ್ಥ ತಿಳಿಯದವಳು. ಅದನ್ನೊಂದು ಆಟದ ದಾಳವಾಗಿಸಿಕೊಂಡವಳು ನೀನು. ಪ್ರೀತಿಯ ಬೆಲೆ ತಿಳಿದ ದಿನ ನಿನಗೆ ಖಂಡಿತಾ ಪಾಪಪ್ರಜ್ಞೆ ಕಾಡಲಿದೆ. ರುಜುವಾತಾಗಲಿದೆ ಜಗತ್ತಿನೆದುರು ನಿನ್ನ ಸ್ವಾರ್ಥದ ಬದುಕು. ನಿಜವಾಗಿಯೂ ಹೃದಯವಂತೆ ನೀನು, ಆದರೆ ನಿನ್ನೊಳಗಿರುವ ಒಳಿತುಗಳ ಗುರುತಿಸಲಾರದೆ ಹೀಗಾಗಿದೆಯಷ್ಟೇ. ಈಗಲೂ ಒಂದು ಅವಕಾಶ ನೀಡುವೆ. ಪ್ರೀತಿಯ ಅಮೃತ ಪಾತ್ರೆಯಾಗಿಸುವೆ ನಿನ್ನನ್ನು. ಒಪ್ಪಿ ಬಂದುಬಿಡು, ಜೀವನ ಪೂರ್ತಿ ಜೊತೆಗಿರಲು ಕಾದಿಹೆ ನಾನು.
ಇಂತಿ ನಿನ್ನವ
ಪ.ನಾ.ಹಳ್ಳಿ.ಹರೀಶ್ ಕುಮಾರ್