ಕನ್ನಡ ಚಿತ್ರರಂಗದಲ್ಲಿ ಸ್ಟಿಲ್ ಫೋಟೋಗ್ರಾಫರ್ ಆಗಿದ್ದ ಬದ್ರಿನಾಥ್ ನಿರ್ದೇಶಕರಾಗಿದ್ದು, ಈಗಾಗಲೇ ಅವರ ನಿರ್ದೇಶನದ ಒಂದು ಸಿನಿಮಾ ಬಿಡುಗಡೆಯಾಗಿರೋದು ನಿಮಗೆ ಗೊತ್ತೇ ಇದೆ. ಈಗ ಬದ್ರಿ ನಿರ್ದೇಶನದ ಮತ್ತೂಂದು ಸಿನಿಮಾ ಆರಂಭವಾಗಿದೆ. ಅದು “ನೀನಿಲ್ಲದೇ ನಾನಿಲ್ಲ’. ಇದೊಂದು ಲವ್‌ಸ್ಟೋರಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ, ಆ ಲವ್‌ಸ್ಟೋರಿ ಹೇಗೆ ಸಾಗುತ್ತದೆ, ಸಿನಿಮಾದ ವಿಶೇಷ ಅಂಶಗಳೇನು ಎಂಬ ಮಾಹಿತಿ ಸಿಗುವುದು ಸ್ವಲ್ಪ ಕಷ್ಟವೇ. ಏಕೆಂದರೆ, ಚಿತ್ರತಂಡ ಸದ್ಯಕ್ಕಂತೂ ಮಾತಾಡುವ ಮೂಡ್‌ನಲ್ಲಿಲ್ಲ.
ಕಳೆದ ವಾರ ಚಿತ್ರದ ಮುಹೂರ್ತ ನಡೆಯಿತು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಬದ್ರಿನಾಥ್ ಸಿನಿಮಾ ಬಗ್ಗೆ ಹೆಚ್ಚೇನು ಮಾತನಾಡಲಿಲ್ಲ. ಇದೊಂದು ತ್ರಿಕೋನ ಪ್ರೇಮಕಥೆ ಎಂದಷ್ಟೇ ಹೇಳಿದರು. ಡಾಕ್ಟರ್ ಹಾಗೂ ಯೋಧನ ಮಧ್ಯೆ ಬರುವ ಹುಡುಗಿ ಹಾಗೂ ಆ ನಂತರ ನಡೆಯುವ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ಆರ್ಯನ್ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಪಾತ್ರಕ್ಕಾಗಿ ಒಂದಷ್ಟು ಪೂರ್ವತಯಾರಿ ಆರಂಭವಾಗಿದ್ದು, ಸಿನಿಮಾ ಚೆನ್ನಾಗಿ ಮೂಡಿಬರುವ ವಿಶ್ವಾಸವಿದೆಯಂತೆ.
ಇಲ್ಲಿ ಆರ್ಯನ್ ಯೋಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆರ್ಯನ್ “ಕ್ರ್ಯಾಕ್’ ಸಿನಿಮಾದ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಚಿತ್ರೀಕರಣ ನಡೆಯುವಾಗ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರ ವಹಿಸಲಾಗಿದೆಯಂತೆ. ಚಿತ್ರದಲ್ಲಿ ರಚಿತಾ ಎನ್ನುವವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾ ಮಾಡಿರುವ ಇವರಿಗೆ ಇದು ಮೂರನೇ ಸಿನಿಮಾ.
ಇಲ್ಲಿ ರಚಿತಾ ಯಾರ ಪ್ರೀತಿಗೆ ಬೀಳುತ್ತಾರೆಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು. ಚಿತ್ರಕ್ಕೆ ಬಾಲಾಜಿ ಎನ್ನುವವರು ಸಂಗೀತ ನೀಡುತ್ತಿದ್ದಾರೆ. ತೆಲುಗು, ತಮಿಳಿನಲ್ಲಿ ಅನೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ ಬಾಲಾಜಿಯವರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಇದು ಮೊದಲ ಸಿನಿಮಾ. ಚಿತ್ರದಲ್ಲಿ ನಾಯಕಿಯ ಅಣ್ಣನಾಗಿ ಆರ್‌ಟಿಒ ಆಗಿರುವ ವಾಸುದೇವ್ ನಟಿಸಿದರೆ, ರಾಜಕಾರಣಿಯಾಗಿ ಅರವಿಂದ್ ಜಾಹಗೀರ್‌ದಾರ್ ನಟಿಸುತ್ತಿದ್ದಾರೆ. ಚಿತ್ರವನ್ನು ನಂದಕೃಷ್ಣ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮಡಿಕೇರಿ, ದೆಹಲಿ, ಅಗ್ರಾದಲ್ಲಿ ಚಿತ್ರೀಕರಣ ನಡೆಯಲಿದೆ.