Advertisement
ಮೂರನೇ ಪ್ರಪಂಚ ಮಹಾಯುದ್ಧಅದು 1945ರ ಕಾಲ. ಒಂದು ಕಡೆ ಜರ್ಮನಿ ಮತ್ತು ಜಪಾನ್. ಮತ್ತೂಂದು ಕಡೆ ಫ್ರಾನ್ಸ್, ಇಂಗ್ಲೆಂಡ್, ರಷ್ಯಾ ಇತ್ಯಾದಿ ರಾಷ್ಟ್ರಗಳು. ಜಗತ್ತನ್ನೇ ತನ್ನ ವಶಕ್ಕೆ ತೆಗೆದುಕೊಳ್ಳಲು ಹೊರಟ ಅಡಾಲ#… ಹಿಟ್ಲರ್ ತನ್ನ ಪಕ್ಕದ ರಾಷ್ಟ್ರಗಳು ಸೇರಿ ಒಂದೊಂದೇ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳುತ್ತಿದ್ದ. ಆಗ ಇಂಗ್ಲೆಂಡ್, ಫ್ರಾನ್ಸ್, ರಷ್ಯಾ ದೇಶಗಳ ಜತೆಗೆ ನಿಂತಿದ್ದು ಅಮೆರಿಕ. ಅವತ್ತು ರಷ್ಯಾದ ತಾಕತ್ತು, ದೂರದ ಅಮೆರಿಕದ ಸೇನೆಯ ನೆರವು ಸಿಗದೇ ಹೋಗಿರದಿದ್ದರೆ ಜಗತ್ತು ಏನಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವೇ ಇರಲಿಲ್ಲ. ಅಂದು ರಷ್ಯಾ ಜರ್ಮನಿಯನ್ನು ಸೋಲಿಸಿದ್ದರೆ, ಇನ್ನೊಂದು ಕಡೆಯಲ್ಲಿ ಅಮೆರಿಕ ಜಪಾನ್ ಅನ್ನು ಮಣಿಸಿತ್ತು. ಈಗ ಕಾಲ ಸಂಪೂರ್ಣವಾಗಿ ಬದಲಾಗಿದೆ. ಇಂದು 3ನೇ ವಿಶ್ವ ಯುದ್ಧ ಬೇರೊಂದು ದೇಶಗಳ ಒಕ್ಕೂಟದ ಮಧ್ಯೆ ನಡೆಯುವ ಸಾಧ್ಯತೆ ಇದೆ. ರಷ್ಯಾ, ಚೀನ ಒಂದು ಕಡೆ ನಿಲ್ಲಲಿದ್ದರೆ, ಅಮೆರಿಕ, ಐರೋಪ್ಯ ದೇಶಗಳು ಮತ್ತೂಂದು ಕಡೆ ನಿಲ್ಲಬಹುದಾಗಿದೆ. ಈ ಬಾರಿ ಯುದ್ಧ ನಡೆದರೆ ಕೇವಲ ಶಸ್ತ್ರಾಸ್ತ್ರಗಳ ಜತೆಗಷ್ಟೇ ಅಲ್ಲ, ಅಣು, ಜೈವಿಕ ಅಸ್ತ್ರಗಳೂ ವಿಜೃಂಭಿಸಲಿವೆ. ಒಂದು ವೇಳೆ ಯುದ್ಧ ನಡೆದದ್ದೇ ಆದರೆ ಯಾರು ಏನಾಗಲಿದ್ದಾರೆ ಎಂಬುದನ್ನು ಊಹಿಸುವುದೂ ಕಷ್ಟವಾಗಲಿದೆ.
ಈ ಬಾರಿ ಯುದ್ಧಕ್ಕೆ ನೇರವಾಗಿ ಉಕ್ರೇನ್ ಕಾರಣವಾಗುವ ಸಾಧ್ಯತೆ ಗಳು ದಟ್ಟವಾಗಿವೆ. ಸೋವಿಯತ್ ಒಕ್ಕೂಟದ ಪತನದ ಅನಂತರ ಉಕ್ರೇನ್ ಹೊಸ ರಾಷ್ಟ್ರವಾಗಿ ಉದಯಿಸಿತು. ಅಲ್ಲದೆ ಒಕ್ಕೂಟದ ಹೊರಗೆ ಹೋಗಿದ್ದ ಹಲವಾರು ದೇಶಗಳು ಈಗಾಗಲೇ ಐರೋಪ್ಯ ಒಕ್ಕೂಟಕ್ಕೆ ಸೇರಿವೆ. ಈ ದೇಶಗಳಿಗೆ ಅಮೆರಿಕ ನೇತೃತ್ವದ ನ್ಯಾಟೋದ ಸದಸ್ಯತ್ವ ನೀಡಲಾಗಿದೆ. ಉಕ್ರೇನ್ ಕೂಡ ನ್ಯಾಟೋದ ಸದಸ್ಯತ್ವ ಪಡೆಯಲು ಮುಂದಡಿ ಇಟ್ಟಿದೆ. ಸದ್ಯಕ್ಕೆ ರಷ್ಯಾದ ಆಕ್ರೋಶಕ್ಕೆ ಕಾರಣ ವಾಗಿರುವ ಅಂಶ ಇದೇ. ಒಂದು ವೇಳೆ ಉಕ್ರೇನ್ ನ್ಯಾಟೋಗೆ ಸೇರಿ ಬಿಟ್ಟರೆ, ಅಮೆರಿಕ ನೇರವಾಗಿ ಬಂದು ತನ್ನ ಗಡಿಗೆ ಬಂದು ಕುಳಿತು ಕೊಳ್ಳಬಹುದು ಎಂಬ ಆತಂಕವಿದೆ. ಹೀಗಾಗಿಯೇ ಅಮೆರಿಕವನ್ನು ತನ್ನ ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು ಎಂಬ ಉದ್ದೇಶದಿಂದ ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಿಕೊಳ್ಳಬಾರದು ಎಂದು ರಷ್ಯಾ ವಾದ ಮುಂದಿಟ್ಟಿದೆ. ಒಂದು ವೇಳೆ ತನ್ನ ಮಾತು ಕೇಳದೇ ಹೋದರೆ ಇಡೀ ಉಕ್ರೇನ್ ಅನ್ನೇ ವಶಪಡಿಸಿಕೊಳ್ಳಲು ರಷ್ಯಾ ಮುಂದಾಗಿದೆ. ಯುದ್ಧ ಶತಃಸಿದ್ಧ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಈ ತಂತ್ರಗಾರಿಕೆ ಅಮೆರಿಕಕ್ಕೆ ಸಿಟ್ಟು ತರಿಸಿದೆ. ಮೊದಲಿನಿಂದಲೂ ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣ ಎಂಬ ಹೆಸರು ಗಳಿಸಿಕೊಂಡಿರುವ ಅಮೆರಿಕ, ರಷ್ಯಾಕ್ಕೆ ನಿಯಂತ್ರಣ ಹಾಕಲು ಮುಂದಾಗಿದೆ. ಉಕ್ರೇನ್ ಅನ್ನೇ ದಾಳವಾಗಿ ಇರಿಸಿಕೊಂಡಿರುವ ಅದು, ನ್ಯಾಟೋ ಮುಂದಿಟ್ಟುಕೊಂಡು ಯುದ್ಧಕ್ಕೆ ತಯಾರಾಗಿ ನಿಂತಿದೆ. ಒಂದು ವೇಳೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಲು ಮುಂದಾಗಿದ್ದೇ ಆದರೆ ನಾವು ಅದರ ರಕ್ಷಣೆಗೆ ನಿಂತುಕೊಳ್ಳುತ್ತೇವೆ ಎಂದು ನೇರ ವಾಗಿಯೇ ಹೇಳಿದೆ. ಇದರ ಮುಂದುವರಿದ ಭಾಗವಾಗಿ ಅಮೆರಿಕ ಸೇನೆ ಪೋಲೆಂಡ್‌ಗೆ ಬಂದು ನಿಂತಿದೆ. ಇತ್ತ ರಷ್ಯಾ ಕೂಡ ಸುಮ್ಮನೆ ಕುಳಿತಿಲ್ಲ. ಈಗಾಗಲೇ ಉಕ್ರೇನ್ ಗಡಿಯಲ್ಲಿ ತನ್ನ ಒಂದು ಲಕ್ಷ ಯೋಧರನ್ನು ತೆಗೆದುಕೊಂಡು ಹೋಗಿ ನಿಲ್ಲಿಸಿದೆ. ಯುದ್ಧ ಟ್ಯಾಂಕರ್‌ಗಳು ಸೇರಿದಂತೆ ರಕ್ಷಣ ಸಲಕರಣೆಗಳೂ ಗಡಿಯಲ್ಲಿವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಷ್ಯಾ ರೆಡಿಯಾಗಿ ನಿಂತಿದೆ.
Related Articles
ಸದ್ಯ ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನ ನಡುವೆ ವೈಮನಸ್ಸು ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ರಷ್ಯಾ ಕೂಡ ಬಹು ಹಿಂದಿನಿಂದಲೂ ಅಮೆರಿಕ ವಿರುದ್ಧ ಅಸಮಾಧಾನ ಹೊಂದಿರುವುದೂ ಅಷ್ಟೇ ಸತ್ಯ. ಈಗ ಅಮೆರಿಕದ ಶತ್ರು ದೇಶಗಳು ಎಂದು ಕರೆಸಿಕೊಂಡಿರುವ ರಷ್ಯಾ ಮತ್ತು ಚೀನ ಒಂದಾಗಿವೆ. ಇದಕ್ಕೆ ಉದಾಹರಣೆ ಎಂಬಂತೆ, ಇತ್ತೀಚೆಗಷ್ಟೇ ಚೀನದಲ್ಲಿ ಶುರುವಾದ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನ ಸಮಾರಂಭಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೋಗಿ ದ್ದರು. ಈ ಸಂದರ್ಭದಲ್ಲಿ ರಷ್ಯಾಗೆ ಎಲ್ಲ ರೀತಿಯಲ್ಲೂ ಸಂಪೂರ್ಣ ಸಹಕಾರ ನೀಡುವುದಾಗಿ ಚೀನ ಘೋಷಿಸಿದೆ. ಹೀಗಾಗಿ ಈ ಬಾರಿಯ ಯುದ್ಧ ದೊಡ್ಡ ಮಟ್ಟದಲ್ಲೇ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
Advertisement
ಅಮೆರಿಕ-ರಷ್ಯಾ ಎರಡೂ ಒಂದೇ..ದ್ವಿಪಕ್ಷೀಯ ಸಂಬಂಧದ ವಿಚಾರದಲ್ಲಿ ಹೇಳುವುದಾದರೆ ಭಾರತಕ್ಕೆ ಅಮೆರಿಕ ಮತ್ತು ರಷ್ಯಾ ಎರಡೂ ಸಮಾನವಾಗಿ ನಿಲ್ಲುತ್ತವೆ. ಎರಡೂ ದೇಶಗಳ ಜತೆಗೆ ಭಾರತ ಉತ್ತಮ ಸಂಬಂಧವನ್ನೇ ಇರಿಸಿಕೊಂಡಿದೆ. ಅಲ್ಲದೆ ಈ ಹಿಂದೆ ಪಂಡಿತ್ ಜವಾಹರ್‌ಲಾಲ್ ನೆಹರೂ ಹಾಕಿ ಕೊಟ್ಟಿದ್ದ ಅಲಿಪ್ತ ನೀತಿ ಭಾರತಕ್ಕೆ ಇಂದಿಗೂ ಸಹಾಯಕ್ಕೆ ಬಂದಿದೆ. ಜತೆಗೆ ಉದ್ಯಮದ ದೃಷ್ಟಿಯಿಂದ ಹೇಳುವುದಾದರೆ ಅಮೆರಿಕ ಇಂದಿಗೂ ಭಾರತದ ಜತೆ ಚೆನ್ನಾಗಿಯೇ ಇದೆ. ರಕ್ಷಣ ವಿಚಾರದಲ್ಲಿ ರಷ್ಯಾ ಜತೆ ಭಾರತ ಉತ್ತಮ ಸಂಬಂಧವಿರಿಸಿಕೊಂಡಿದೆ. ಇವೆಲ್ಲದ ಕ್ಕಿಂತ ಹೆಚ್ಚಾಗಿ, ಗಡಿಯಲ್ಲಿನ ಚೀನದ ಉಪಟಳ ಎದುರಿಸಬೇಕಾದರೆ ಅಮೆರಿಕದ ಸಹಕಾರ ಬೇಕೇಬೇಕು. ಅಲ್ಲದೆ ಅಮೆರಿಕ ಸಹಾಯ ಮಾಡುವುದು ಖಂಡಿತ. ಈ ವಿಚಾರದಲ್ಲಿ ನಮಗೆ ರಷ್ಯಾ ನೇರವಾಗಿ ಸಹಾಯಕ್ಕೆ ಬರದಿದ್ದರೂ ಚೀನದ ಸಹಾಯಕ್ಕೆ ಹೋಗದಂತೆ ತಡೆಯಬಹುದು. ಹೀಗಾಗಿ ಎರಡೂ ಪಕ್ಷಗಳಿಗೂ ನೋವಾಗದಂತೆ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಭಾರತಕ್ಕೆ ಇದೆ. ಭಾರತದ ಪಾತ್ರವೇನು?
ಒಂದು ವೇಳೆ ರಷ್ಯಾ ಮತ್ತು ಅಮೆರಿಕದ ನಡುವೆ ಯುದ್ಧವಾದರೆ ಭಾರತದ ಪಾತ್ರವೇನು? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಆದರೆ ಹಿಂದಿನಿಂದಲೂ ಭಾರತ ಈ ವಿಚಾರದಲ್ಲಿ ಅತ್ಯಂತ ಜಾಣ್ಮೆಯ ಹೆಜ್ಜೆ ಇಡುತ್ತಲೇ ಬಂದಿದೆ. 2014ರಲ್ಲೂ ಇಂಥದ್ದೇ ಒಂದು ಸಂದಿಗ್ಧ ಪರಿಸ್ಥಿತಿ ಉಂಟಾಗಿತ್ತು. ಆಗ ರಷ್ಯಾ ಉಕ್ರೇನ್‌ನಿಂದ ಕ್ರಿಮಿಯಾ ಅನ್ನು ವಶಪಡಿಸಿಕೊಂಡಿತ್ತು. ಆಗಲೂ ರಷ್ಯಾ ವಿರುದ್ಧ ವಿಶ್ವಸಂಸ್ಥೆ ಯಲ್ಲಿ ನಿರ್ಣಯವೊಂದನ್ನು ಮಂಡಿಸಲಾಗಿತ್ತು. ಆಗ ಭಾರತ ವೋಟಿಂಗ್‌ನಿಂದ ದೂರ ಉಳಿದಿತ್ತು. ಜತೆಗೆ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರು, ಕ್ರಿಮಿಯಾ ವಿಚಾರದಲ್ಲಿ ಮಾತುಕತೆಯ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದರು. ಈಗಲೂ ಅಷ್ಟೇ, ಉಕ್ರೇನ್ ಅನ್ನು ರಷ್ಯಾ ವಶಪಡಿಸಿಕೊಳ್ಳಲು ನೋಡುತ್ತಿದೆ. ಇದನ್ನು ಖಂಡಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಆದರೆ ಭಾರತ ಈ ವೋಟಿಂಗ್‌ನಿಂದ ದೂರ ಉಳಿಯಿತು. ರಷ್ಯಾ ಪರವಾಗಿ ಚೀನ ಮಾತ್ರ ಮತ ಹಾಕಿದ್ದು, ರಷ್ಯಾಗೆ ಹಿನ್ನಡೆಯಾಗಿದೆ. ಆದರೂ ಭಾರತದ ಜತೆ ಮಾತುಕತೆ ನಡೆಸಿದ ರಷ್ಯಾ ಪ್ರತಿನಿಧಿಗಳು ವೋಟಿಂಗ್‌ನಿಂದ ದೂರ ಉಳಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಭಾರತವೂ ಮತ ಹಾಕದೇ ಈ ವಿಷಯವನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದಿದೆ. ಒಂದು ವೇಳೆ ಯುದ್ಧವಾದರೆ..
ಯುದ್ಧವೆಂಬುದು ಯಾರಿಗೂ ಬೇಕಾಗಿಲ್ಲದ ಸರಕು. ಒಂದು ವೇಳೆ ಯುದ್ಧ ನಡೆದದ್ದೇ ಆದರೆ… ಪರಿಸ್ಥಿತಿ ಊಹಿಸಿಕೊಳ್ಳುವುದೂ ಕಷ್ಟ. ಏಕೆಂದರೆ ಈಗಾಗಲೇ ಇಡೀ ಜಗತ್ತು ಕೊರೊನಾ ಎಂಬ ಮಹಾಮಾರಿಯ ದಾಳಿಯಿಂದಾಗಿ ನಲುಗಿ ಹೋಗಿದೆ. ಆದರೆ ಯುದ್ಧ ಎದುರಾದರೆ ಇಡೀ ಜಗತ್ತು ಅನಿವಾರ್ಯವಾಗಿ ಎರಡು ಭಾಗವಾಗುತ್ತದೆ. ಭಾಗಿಯಾಗದ ದೇಶ ಮಹಾಭಾರತ ಯುದ್ಧದ ವೇಳೆ ಶ್ರೀಕೃಷ್ಣನ ಸಹೋದರ ಬಲರಾಮನಂತೆ ಒಂದು ಕಡೆ ನಿಂತು ನೋಡಬೇಕಾಗುತ್ತದೆ. ಆದರೆ ಯುದ್ಧದ ಪರಿಣಾಮವಂತೂ ತಟಸ್ಥವಾಗಿ ನಿಂತ ದೇಶದ ಮೇಲೂ ಬೀರುವುದು ಖಂಡಿತ. ಮೊದಲಿಗೆ ಆರ್ಥಿಕತೆ ತಲೆಕೆಳಗಾಗುತ್ತದೆ. ಉದ್ಯೋಗ ನಷ್ಟವಾಗುತ್ತವೆ. ದೇಶ ದೇಶಗಳ ನಡುವೆ ಸಂಬಂಧ ಹದಗೆಡುವುದರಿಂದ ಈಗಿರುವ ಪರಸ್ಪರ ಸಹಕಾರ ತಣ್ತೀ ನಾಶವಾಗುತ್ತದೆ. ಯುದ್ಧ ಮುಗಿದ ಮೇಲೂ ಇದು ಸರಿಯಾಗಬೇಕಾದರೆ ಮತ್ತೆ ಸುಮಾರು ವರ್ಷಗಳೇ ಬೇಕಾಗುತ್ತವೆ. ಏಕೆಂದರೆ, 1945ರ 2ನೇ ಮಹಾಯುದ್ಧದಲ್ಲಿ ಭಾಗಿಯಾದ ದೇಶಗಳು ಇದರ ಪರಿಣಾಮದಿಂದ ಸುಧಾರಿಸಿಕೊಳ್ಳಲು ದಶಕಗಳನ್ನೇ ತೆಗೆದುಕೊಂಡವು. ವಿಶ್ವಸಂಸ್ಥೆಗೆ ಯುದ್ಧ
ತಪ್ಪಿಸಲು ಸಾಧ್ಯವಿಲ್ಲವೇ?
ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞರ ಪ್ರಕಾರ, ವಿಶ್ವಸಂಸ್ಥೆಗೆ ಯುದ್ಧ ತಪ್ಪಿಸುವ ಶಕ್ತಿ ಇದೆ. ಆದರೆ ವಿಟೋ ಅಧಿಕಾರ ಹೊಂದಿರುವ ಐದು ರಾಷ್ಟ್ರಗಳು ಒಪ್ಪಿಕೊಳ್ಳಬೇಕು. ಅಂದರೆ ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್ಸ್ ಮತ್ತು ಚೀನ. ಆದರೆ ಇಲ್ಲಿ ರಷ್ಯಾವೇ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಹೋಗಿರುವುದರಿಂದ ಯುದ್ಧ ನಿಲ್ಲಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂದರೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಹೊಂದಿರುವ ರಷ್ಯಾಗೂ ವಿಟೋ ಅಧಿಕಾರವಿದೆ. ಈ ಐದು ದೇಶಗಳಲ್ಲಿ ಒಂದು ದೇಶ ವಿಟೋ ಅಧಿಕಾರ ಚಲಾಯಿಸಿದರೆ, ಯಾವುದೇ ನಿರ್ಣಯ ಬಿದ್ದು ಹೋಗುತ್ತದೆ. ಆದರೂ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಯುದ್ಧ ಬೇಡ ಎಂದು ಮತ ಚಲಾಯಿಸಿದರೆ ಶಾಂತಿ ನೆಲೆಸಬಹುದು. ಆದರೆ ಇದು ಸಾಧ್ಯವೇ ಎಂಬ ಪ್ರಶ್ನೆ ಇದೆ.