Advertisement
ಶಾಲಾ ಮಕ್ಕಳಿಗೆ ಸೈಕಲ್ ವಿತರಿಸುವಾಗ ಪ್ರತಿ ವರ್ಷವೂ ವಿಳಂಬವಾಗುತ್ತದೆ. ಅಲ್ಲದೇ ಬಹುತೇಕ ಸೈಕಲ್ ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ಗುಣಮಟ್ಟ ಪರಿಶೀಲಿಸಿ, ವಿಳಂಬವಿಲ್ಲದೆ ಸೈಕಲ್ ವಿತರಿಸಬೇಕೆಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ಹಂಚಿಕೆಯಾಗಲಿರುವ ಸೈಕಲ್‌ನ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಎರಡು ಪ್ರತ್ಯೇಕ ಸಮಿತಿ ರಚಿಸಿದೆ.
Related Articles
ಸೈಕಲ್ ವಿತರಿಸುವ ಮೊದಲು ಸೈಕಲ್‌ನ ಗುಣಮಟ್ಟ, ಬಣ್ಣ ಹಾಗೂ ಸೈಕಲ್‌ನ ಎಲ್ಲಾ ಭಾಗವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎರಡು ತಂಡಕ್ಕೂ ಸೂಚಿಸಲಾಗಿದೆ. ಜತೆಗೆ ಪ್ರತಿ ಶನಿವಾರ ಅದರ ಪರಿಷ್ಕೃತ ವರದಿಯನ್ನು ತುರ್ತಾಗಿ ಶಿಕ್ಷಣ ಇಲಾಖೆಗೆ ಇ- ಮೇಲ್ ಮಾಡುವಂತೆ ಸೂಚಿಸಿ, ಇ-ಮೇಲ್ ಐಡಿ ಕೂಡ ನೀಡಲಾಗಿದೆ. ಆದರೆ, ಜಿಲ್ಲೆಯ ಯಾವೊಬ್ಬ ಅಧಿಕಾರಿಯೂ ಕೂಡ ಈವರೆಗೂ ವರದಿಯನ್ನು ಇಲಾಖೆಗೆ ಸಲ್ಲಿಸಿಲ್ಲ. ಇನ್ನು ಕೆಲವು ಜಿಲ್ಲೆಗಳಲ್ಲಿ ಸೈಕಲ್ ಹೇಗಿದೆ ಎಂಬುದನ್ನೇ ಪರಿಶೀಲಿಸಿಲ್ಲ. ಸಮಿತಿಯಲ್ಲಿರುವ ಅಧಿಕಾರಿಗಳ ವಿಳಂಬ ಧೋರಣೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಖುದ್ದಾಗಿ ಪರಿಶೀಲನೆ ನಡೆಸಿದ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
Advertisement
ಸೈಕಲ್ ಗುಣಮಟ್ಟ ಪರಿಶೀಲಿಸಿ, ತಯಾರಿಕಾ ದೋಷ ಇಲ್ಲದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಸೈಕಲ್ ವಿತರಣೆ ನಂತರ ತಪಾಸಣೆಗಾಗಿ ತಾಲೂಕುಗಳಲ್ಲಿ ಹಂಚಿಕೆ ಮಾಡಲಾಗುತ್ತಿರುವ ಸೈಕಲ್‌ಗಳಲ್ಲಿ ನಾಲ್ಕು ವಿಭಾಗದ 40 ಸೈಕಲ್‌ನ (20 ಹುಡುಗರ ಹಾಗೂ 20 ಹುಡುಗಿಯರ) ಕ್ರ್ಯಾಷ್ ಟೆಸ್ಟ್‌ಗಾಗಿ ಆರ್ ಮತ್ತು ಡಿ ಸೆಂಟರ್ ಲೂಧಿಯಾನಕ್ಕೆ ಕಳುಹಿಸಲು ಆದೇಶಿಸಲಾಗಿದೆ. ಹಾಗೆಯೇ ಸೈಕಲ್ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ಬದಲಾವಣೆ ಮಾಡಿಕೊಡಲು ಅವಕಾಶವಿದೆ. ತಾಲೂಕು, ಜಿಲ್ಲೆ ಹಾಗೂ ವಿಭಾಗಿಯ ಮಟ್ಟದಲ್ಲಿ ಪರಿಶೀಲನೆ ನಡೆಯಬೇಕಿದ್ದು, ಇನ್ನು ಮೊದಲ ಹಂತದ ವರದಿಯೇ ಇಲಾಖೆಗೆ ಸಲ್ಲಿಕೆಯಾಗಿಲ್ಲ.
ಸೈಕಲ್ ವಿತರಣೆ ವಿಳಂಬವಾಗಬಾರದು ಮತ್ತು ಗುಣಮಟ್ಟದ ಸೈಕಲ್ ವಿತರಿಸಬೇಕೆಂಬ ಉದ್ದೇಶದಿಂದ ಮೂರು ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನಾ ವರದಿಯ ಶಿಫಾರಸಿನಂತೆ ಸೈಕಲ್ ಬದಲಾವಣೆ ಮಾಡಬೇಕು ಎಂದಾದರೆ ತಕ್ಷಣವೇ ಬದಲಾಯಿಸಲಿದ್ದೇವೆ. ಎಲ್ಲಾ ಜಿಲ್ಲೆಯ ಪರಿಶೀಲನಾ ವರದಿಗಾಗಿ ಕಾಯುತ್ತಿದ್ದೇವೆ.– ಬಿ.ಕೆ.ಬಸವರಾಜು, ನಿರ್ದೇಶಕ ಪ್ರಾಥಮಿಕ ಶಿಕ್ಷಣ – ರಾಜು ಖಾರ್ವಿ ಕೊಡೇರಿ