Advertisement
ಹಾಸ್ಟೆಲಿನಲ್ಲಿನ ಮೊದಲ ದಿನ ಬಹಳ ಉತ್ಸುಕದಿಂದಿದ್ದ ನನಗೆ ಆ ರಾತ್ರಿ ಸ್ಥಳ ಬದಲಾದ್ದರಿಂದ ಕೊಂಚ ನಿದ್ದೆ ಬರುವುದು ತಡವಾಯಿತು. ಆಚೀಚೆ ಹೊರಳುತ್ತಿದ್ದ ನನಗೆ ಪಕ್ಕದ ಹಾಸಿಗೆಯಿಂದ ಹಿ…ಹಿ…ಹಿ… ಎನ್ನುವ ನಗು ಮಾತ್ರ ಕೇಳಿಸುತ್ತಿತ್ತು. ಅದೇನೆಂದು ಸೂಕ್ಷ್ಮವಾಗಿ ಗಮನಿ ಸಿದಾಗ ಆ ನಡುರಾತ್ರಿಯಲ್ಲಿ ನನ್ನ ರೂಮ್‌ಮೇಟ್ ಮೊಬೈಲ್‌ನೊಳಗೆ ಮುಳುಗಿಹೋಗಿದ್ದು ಕಂಡುಬಂತು. ಆದರೆ, ಆ ರಾತ್ರಿ ಅವರ ನಗೆಯ ಸದ್ದಿಗೆ ನಿ¨ªೆಯೇ ಇಲ್ಲದಾಯಿತು. ಇದಾಗಿ, ಒಂದು ದಿನ ರಾತ್ರಿ ನೀರು ಕುಡಿಯಲೆಂದು ಎದ್ದು ವಾಟರ್ ಫಿಲ್ಟರ್ ಕಡೆಗೆ ಹೋದಾಗ ಸಮಯ ಸುಮಾರು ಎರಡು ಗಂಟೆಯಷ್ಟಿರಬಹುದು, ನಿಶ್ಶಬ್ದವಾಗಿದ್ದ ಅಲ್ಲಿ ಅದೇನೋ ಪಟ ಪಟ ಸದ್ದು ಆಯಿತೆಂದು ನೋಡಿದರೆ ಯಾರೋ ಒಬ್ಬಳು ಆ ಮಧ್ಯರಾತ್ರಿಯಲ್ಲಿ ಬಟ್ಟೆ ಒಗೆಯುತ್ತಿದ್ದಳು. ಹಗಲಿಡೀ ಅದೆಷ್ಟು ಕಡೆದು ಕಟ್ಟೆ ಹಾಕುವಷ್ಟು ಕೆಲಸ ಅವಳಿಗಿತ್ತೋ ಯಾರು ಬಲ್ಲರು! ಹೆಚ್ಚಿ ನ ವರು ರಜಾ ದಿನಗಳಲ್ಲಿ ರಾತ್ರಿಯೆಲ್ಲಾ ಎಚ್ಚರವಿದ್ದು ಹಗಲು ಗಡದ್ದಾಗಿ ಗೊರಕೆ ಹೊಡೆಯುವವರು.
Related Articles
Advertisement
ಸ್ಟಡಿ ಅವರ್‌ನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ವಾರ್ಡನ್ ಕಣ್ಣು ತಪ್ಪಿಸಿ ಒತ್ತುವ ನಿಸ್ಸೀಮರಿಗೇನೂ ಕಡಿಮೆ ಇರಲಿಲ್ಲ. ಕೆಲವರಂತೂ ಪುಸ್ತಕದ ಎಡೆಯಲ್ಲಿ, ಪ್ಯಾಂಟಿನ ಜೇಬಿನಲ್ಲಿ, ತಲೆದಿಂಬಿನ ಅಡಿಯಲ್ಲಿಟ್ಟು ಬಳಸಿದರೆ, ಇನ್ನು ಕೆಲವರು ಕಪಾಟಿನೊಳಗೆ ತೂರಿಕೊಂಡು ಅದರೊಳಗೆ ಲೀಲಾಜಾಲವಾಗಿ ಬಳಸುತ್ತಿದ್ದರು. ಇವರು ಮೂರಡಿ ಏರುವ ಸಾಹಸ ಮಾಡಿದರೆ ವಾರ್ಡನ್ನುಗಳು ಎಷ್ಟೇ ಆದರೂ ನಮಗಿಂತ ಐದಾರು ವರ್ಷ ಮೊದಲು ಹುಟ್ಟಿದವರಲ್ಲವೆ? ಹಾಗಾಗಿ, ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಿದ್ದರು. ಮೊಬೈಲ್‌ಗಿಂತಲೂ ಹೆಚ್ಚು ಸೀಝ್ ಆಗುತ್ತಿದ್ದ ವಸ್ತುಗಳೆಂದರೆ ಕನ್ನಡಿ, ಬಾಚಣಿಗೆ, ಲಿಪ್‌ಸ್ಟಿ ಕ್, ನೆಯಿಲ್ ಪಾಲಿಶ್, ಮನುಷ್ಯ ಗಾತ್ರದ ಟೆಡ್ಡಿ ಬೇರ್ ಗೊಂಬೆಗಳು.
ಹಾಸ್ಟೆಲ್ ಸೇರಿದ ಕೆಲವರಂತೂ ಎಷ್ಟು ಸೋಮಾರಿಗಳೆಂದರೆ ವಾರಗಟ್ಟಲೆ ಒಗೆಯುವ ಬಟ್ಟೆಗಳ ಸ್ಟಾಕ್ ಮಾಡಿ ಹಾಕಲು ಬಟ್ಟೆ ಇಲ್ಲದಾಗ ಲಾಂಡ್ರಿ ಅಂಗಡಿಯವರಂತೆ ಎಲ್ಲವನ್ನೂ ಒಮ್ಮೆಲೇ ಒಗೆಯಲು ಪ್ರಾರಂಭಿಸುತ್ತಾರೆ. ಇನ್ನು ಕೆಲವರೂ ಬೆಡ್ಡಿಂದ ಏಳಲು ಮನ ಸ್ಸಾಗದೆ ಸ್ನಾನ ಮಾಡದೇ ಫೇಸ್‌ವಾಶ್ ದಾಸರಾಗಿರುತ್ತಾರೆ. ಇಲ್ಲಿರುವ ಕೆಲವರಿಗಂತೂ ಫೊಟೋ ಕ್ರೇಝ್ ಸಿಕ್ಕಾಪಟ್ಟೆ ಇರುತ್ತದೆ. ತಮ್ಮಲ್ಲಿರುವ ಚಂದದ ಬಟ್ಟೆಯನ್ನು ಧರಿಸಿ ಅಂದದ ಫೋಟೋ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರಲ್ಲಿ ಇವರ ದಿನ ಕಳೆಯುತ್ತದೆ. ಇವರ ನಡುವೆ ಕೆಲವು ಭಗ್ನಪ್ರೇಮಿಗಳು ದುಃಖದ ಸ್ಟೇಟಸ್‌ಗಳನ್ನು ಅಪ್‌ಲೋಡ್ ಮಾಡಿಕೊಂಡು ಸದಾ ಅಳುಮುಂಜಿಗಳಂತೆ ಇರುತ್ತಾರೆ. ಏನೂ ಕೆಲಸವೇ ಇಲ್ಲದಿದ್ದಾಗ ಕ್ರಶ್ ಗಳ ಕುರಿತ ಗಾಸಿಪ್‌ಗ್ಳು, ಕೊರಿಯನ್ ಸೀರೀಸ್ ಕಥೆಗಳು, ಓಡಿ ಹೋದವರ ಪ್ರಸಂಗಗಳ ಹರಟೆ ಕಾರ್ಯಕ್ರಮಗಳು ನೆರವೇರುತ್ತವೆ.
ಹಾಸ್ಟೆಲಿನಿಂದ ಮನೆಗೆ ಹೋಗಬೇಕಾದರೆ ಪಡುವ ಪರಿಪಾಟಗಳು ಹೇಳತೀರದು. ಕ್ಲಾಸ್ ಅಡ್ವೆ„ಸ ರ್ಸ್, ಡೀನ್‌ಗಳ ಕಣ್ಣು ಕೆಂಪಾಗಿ, ಕೋಪಕ್ಕೆ ಬಲಿಪಶುಗಳಾಗಿ ಲೀವ್ ಅಪ್ಲಿಕೇಶನ್‌ಗೆ ಸೈನ್ ಸಿಕ್ಕಿದರೆ ನಿಟ್ಟುಸಿರು ಬಿಟ್ಟಂತೆ. ಇಷ್ಟೆಲ್ಲ ಆಗಿ ಮನೆಗೆ ಹೋಗಿ ಬಂದವರ ರೂಮಿಗೆ ತಕ್ಷಣ ಒಂದು ದಂಡೇ ಧಾವಿಸಿ ಹೋಗುತ್ತದೆ. ಕಾರಣ, ಮನೆಯಿಂದ ತಂದ ತಿನಿಸುಗಳನ್ನು ತಿನ್ನಲು. ಇವೆಲ್ಲದರ ಮಧ್ಯೆ ನನಗಿಷ್ಟವಾದದ್ದು ಸಂಜೆ ಕಾಫಿ ಕಪ್ ಹಿಡಿದು ಮುಳುಗುವ ಸೂರ್ಯನನ್ನು ನೋಡುತ್ತ ಜಂಜಾಟಗಳನ್ನು ಮರೆಯುವುದು.
ಹೀಗೇ ಮನೆಯ ವಾತಾವರಣ ಇಲ್ಲದಿದ್ದರೂ ಹಾಸ್ಟೆಲಿನಲ್ಲಿ ಕಠಿಣ ಶಿಸ್ತುಪಾಲನೆಯೆಡೆಯಲ್ಲಿ ಕೆಲವೊಂದು ಹಾಸ್ಯ ಘಟನೆಗಳು ಮೋಜಿನ ದಿನಗಳು ಮಾತ್ರ ಶಾಶ್ವತ ನೆನಪುಗಳು. ಅಕ್ಕರೆ ತೋರುವ ವಾರ್ಡನ್‌ಗಳು, ಮಾತಿಗೆ ಮುಂಚೆ ಹಾರಾಡುವ ವಾರ್ಡನ್‌ಗಳು, ಸೀಕ್ರೆಟ್ ಬರ್ತ್ ಡೇ ಪಾರ್ಟಿಗಳು, ಹಬ್ಬದಲ್ಲಿ ಮಾಡುತ್ತಿದ್ದ ದೇವರ ಪೂಜೆಗಳು, ಹಾರರ್ ಮೂವಿ ನೋಡಿದ ಖುಷಿಗಳು, ಊಟದಲ್ಲಿ ಸಿಗುತ್ತಿದ್ದ ಹುಳಗಳು, ರೂಮಿನ ತುಂಬಾ ಸೊಳ್ಳೆ-ಜಿರಳೆಗಳ ಗಾನ ಮಾಧುರ್ಯ, ಚಿಲ್ಲರೆ ಬಜೆಟ್ ತಿಂಡಿಗಳು, ಬಕೆಟ್ ಹಿಡಿದು ಬಾತ್‌ರೂಮ್ ಮುಂದೆ ಲೈನ್ ನಿಂತ ಕಷ್ಟಗಳು, ರೂಮ್‌ಮೇಟ್ ಜೊತೆಗೆ ಕಿತ್ತಾಡಿದ ದಿನಗಳು, ಹೊದಿಕೆಯೊಳಗಿನ ಕಣ್ಣೀರು, ಎಲ್ಲರೂ ಸೇರಿ ಆಟಗಳನ್ನಾಡಿ ಪಾಠಗಳನ್ನು ಓದಿದ ಸುಂದರ ಘಳಿಗೆಗಳು ಮತ್ತೆ ಸಿಗಲಾರದು. ಏನೇ ಆದರೂ ಹಾಸ್ಟೆಲ್ ಲೈಫ್ ಸುಂದರ ನೆನಪುಗಳೊಂದಿಗೆ ಜೀವನ ಕೌಶಲ್ಯಗಳನ್ನು ಬೆಳೆಸುತ್ತದೆ.
ದುರ್ಗಾ ಭಟ್ ಬೊಳ್ಳುರೋಡಿ ತೃತೀಯ ಬಿಎ (ಪತ್ರಿಕೋದ್ಯಮ), ಆಳ್ವಾಸ್ ಕಾಲೇಜು, ಮೂಡುಬಿದಿರೆ