Advertisement

ಹೆಸರಲ್ಲೇನಿದೆ, ವ್ಯಕ್ತಿತ್ವದಲ್ಲಿ ಎಲ್ಲವೂ ಅಡಗಿದೆ!

11:15 PM Mar 26, 2021 | Team Udayavani |

ಮಗುವೊಂದು ಜನಿಸಿದಾಗ ಅವರ ಹೆತ್ತವರು ತಮಗಿಷ್ಟವಾದ ಅಥವಾ ಯಾವುದೋ ನಂಬಿಕೆಗೆ ಅನುಸಾರ ಆ ಮಗುವಿಗೆ ಹೆಸರಿಡುತ್ತಾರೆ. ಹೆಸರಿಗೂ ಆ ವ್ಯಕ್ತಿಗೂ ತಾಳೆಯಾಗಬೇಕೆಂದೇನಿಲ್ಲ. ತಮ್ಮ ಮಗು ಬೆಳೆದು ಭವಿಷ್ಯದಲ್ಲಿ ಹಾಗಾಗಬೇಕು, ಹೀಗಾಗಬೇಕು ಎಂಬ ಅಪೇಕ್ಷೆ ಎಲ್ಲ ಹೆತ್ತವರಿಗೆ ಇರುವುದು ಸಹಜ. ಆದರೆ ಆ ಎಲ್ಲ ಅಪೇಕ್ಷೆಗಳೂ ಈಡೇರುತ್ತವೆ ಎನ್ನಲಾಗದು. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಣ ವ್ಯತ್ಯಾಸ ಇರುವುದು ಇಲ್ಲಿಯೇ. ವ್ಯಕ್ತಿಯ ಹೆಸರಿಗಿಂತ ಆತನ ವ್ಯಕ್ತಿತ್ವವೇ ಬಲುಮುಖ್ಯವಾಗುತ್ತದೆ.

Advertisement

ಒಂದು ಊರಿನಲ್ಲಿ ಶಾಂತೇಶ್ವರ ಎನ್ನುವ ಗುರುಗಳೊಬ್ಬರಿದ್ದರು. ಅವರಿಗೆ “ದುಷ್ಟ ‘ ಎಂಬ ಶಿಷ್ಯನೊಬ್ಬ ಇದ್ದ. ಆತನಿಗೆ ತನ್ನ ಹೆತ್ತವರು ತನಗಿಟ್ಟಿದ್ದ ಹೆಸರಿನ ಬಗ್ಗೆ ತೀವ್ರ ನೋವಿತ್ತು. ತಾನು ಜೀವನದಲ್ಲಿ ಯಾವುದೇ ಕೆಟ್ಟದಾದ ಕೆಲಸವನ್ನು ಮಾಡದೇ ಇದ್ದರೂ ಲೋಕದ ದೃಷ್ಟಿಯಲ್ಲಿ ನಾನು ದುಷ್ಟನಾದೆನಲ್ಲ ಎಂಬ ನೋವು ಆತನನ್ನು ಕಾಡುತ್ತಿತ್ತು. ಸಂಕಟ ತಡೆಯಲಾರದೆ ಒಂದು ದಿನ ಆತ ಶಾಂತೇಶ್ವರ ಗುರುಗಳ ಬಳಿಗೆ ತೆರಳಿ ತನ್ನ ಮನದಾಳದ ನೋವನ್ನು ಹೇಳಿಕೊಂಡ. ಶಿಷ್ಯನ ಸಮಸ್ಯೆ ಅರಿತ ಗುರುಗಳು ಮುಗುಳ್ನಕ್ಕು, “ಹೊರಗಿನ ಪ್ರಪಂಚವನ್ನು ಒಂದು ಬಾರಿ ಸುತ್ತಾಡಿ ಕೊಂಡು ಯಾರಿಗೆ ಯಾವ ಯಾವ ಹೆಸರುಗಳನ್ನು ಇಡಲಾಗಿದೆ ಎಂದು ತಿಳಿದುಕೊಂಡು ಬಾ’ ಎಂದರು.

ಗುರುಗಳ ಸಲಹೆಯಂತೆ ದುಷ್ಟನು ಲೋಕಸಂಚಾರಕ್ಕೆ ಹೊರಟ. ಮಾರ್ಗ ಮಧ್ಯದಲ್ಲಿ ಈತನಿಗೆ ಭಿಕ್ಷುಕನೊಬ್ಬ ಸಿಕ್ಕನು. ಅನಾಥನಾಗಿದ್ದ ಆತ ದಟ್ಟದರಿದ್ರನಾಗಿದ್ದರೂ ಅವನ ಹೆಸರು ಮಾತ್ರ “ಶ್ರೀಮಂತ’ ಎಂದಾಗಿತ್ತು. ಆತನಿಗೆ ಭಿಕ್ಷೆಯನ್ನು ನೀಡಿ ಮುಂದೆ ಸಾಗಿದಾಗ ದುಷ್ಟನಿಗೆ ದಾರಿಯಲ್ಲಿ ಅಳುತ್ತಿದ್ದ ವ್ಯಕ್ತಿಯೊಬ್ಬ ಎದುರಾಗುತ್ತಾನೆ. ಯಾಕಯ್ನಾ ಅಳುತ್ತಿದ್ದೀಯಾ? ಎಂದು ದುಷ್ಟನು ಆತನನ್ನು ಪ್ರಶ್ನಿಸಿದ. “ನನಗೆ ವ್ಯಾಪಾರದಲ್ಲಿ ಸಂಪೂರ್ಣ ನಷ್ಟವಾಗಿದೆ, ನನ್ನ ಮಗನು ತನ್ನೆಲ್ಲ ಸಮಯವನ್ನು ಜೂಜಿನಲ್ಲೇ ವ್ಯಯ ಮಾಡುತ್ತಿದ್ದು, ನನ್ನ ಹೆಂಡತಿಯೂ ಸದಾ ಕಾಯಿಲೆಯಲ್ಲೇ ನರಳುತ್ತಿರುತ್ತಾಳೆ’ ಎಂದಾತ. ಆಗ ದುಷ್ಟನು ಕುತೂಹಲದಿಂದ ನಿಮ್ಮ ಹೆಸರೇನು ಎಂದು ಪ್ರಶ್ನಿಸಿದಾಗ ಆತ ತನ್ನ ಹೆಸರು “ಆನಂದ’ ಎಂದು ಹೇಳುತ್ತಾನೆ. ದುಷ್ಟನು ಲೋಕಸಂಚಾರವನ್ನು ಮುಂದುವರಿಸಿ ದಾಗ ರಾಜನ ಅರಮನೆ ಮುಂಭಾಗದಲ್ಲಿ ದುಷ್ಟನ ಕಣ್ಣ ಮುಂದೆಯೇ ರಾಜಾಜ್ಞೆ ಯಂತೆ ವ್ಯಕ್ತಿಯೊಬ್ಬನನ್ನು ನೇಣಿಗೆ ಏರಿಸುತ್ತಾರೆ. ಹೀಗೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಹೆಸರನ್ನು ಶಿಷ್ಯನು ಕೇಳಿದಾಗ ಆತನ ಹೆಸರು “ಚಿರಂಜೀವಿ’ ಎಂದಾಗಿತ್ತು.

ಇವೆಲ್ಲವನ್ನೂ ನೋಡಿ ಧೃತಿಗೆಟ್ಟ ದುಷ್ಟನು ಶಾಂತೇಶ್ವರ ಗುರುಗಳ ಬಳಿಗೆ ಬಂದನು. ಆಗ ಗುರುಗಳು, “ಏನಯ್ಯಾ ದುಷ್ಟ , ದಾರಿಯಲ್ಲಿ ಯಾವ ಯಾವ ಹೆಸರಿನ ವ್ಯಕ್ತಿಗಳನ್ನು ನೀನು ಭೇಟಿ ಮಾಡಿದೆ? ಈಗ ನೀನು ಯಾರ ಹೆಸರನ್ನು ಇಟ್ಟುಕೊಳ್ಳಲು ಬಯಸುತ್ತೀಯಾ’ ಎಂದು ಪ್ರಶ್ನಿಸಿದರು. ಆಗ ದುಷ್ಟನು ಇಲ್ಲ ಗುರುಗಳೇ ನನ್ನ ಮನಸ್ಸು ಬದಲಾಗಿದೆ. ಕೇವಲ ಮಹಾನ್‌ ವ್ಯಕ್ತಿಗಳ ಅಥವಾ ದೇವರ ಹೆಸರನ್ನು ಇಟ್ಟುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಮತ್ತು ಅಂತಹ ವ್ಯಕ್ತಿಗಳು ನಾವಾಗಲು ಸಾಧ್ಯವಿಲ್ಲ ಎನ್ನುವ ಸತ್ಯದ ಅರಿವು ನನಗಾಗಿದೆ ಎಂದು ದುಷ್ಟನು ಉತ್ತರಿಸುತ್ತಾನೆ.

ಬದುಕಿನಲ್ಲಿ ಕೇವಲ ಅತ್ಯುತ್ತಮವಾದ ಅಥವಾ ವಿಭಿನ್ನವಾದ ಹೆಸರನ್ನು ಇಟ್ಟುಕೊಳ್ಳುವುದರಿಂದ, ಸುಂದರ ರೂಪವನ್ನು ಹೊಂದುವುದರಿಂದ ಅಥವಾ ದೇಹದಾಡ್ಯತೆ ಹೊಂದುವುದರಿಂದ ಯಶಸ್ಸನ್ನುಗಳಿಸಲು ಸಾಧ್ಯವಿಲ್ಲ. ಬದಲಿಗೆ ಅತ್ಯುತ್ತಮವಾದ ಕಾರ್ಯವೈಖರಿ, ಬದ್ಧತೆ, ಕಠಿನ ಪರಿಶ್ರಮ ಮತ್ತು ಹೃದಯ ಶ್ರೀಮಂತಿಕೆಯನ್ನು ಹೊಂದುವುದರಿಂದ ಯಶಸ್ಸನ್ನು ಗಳಿಸಬಹುದು.

Advertisement

- ಸಂತೋಷ್‌ ರಾವ್‌ ಪೆರ್ಮುಡ, ಪಟ್ರಮೆ

Advertisement

Udayavani is now on Telegram. Click here to join our channel and stay updated with the latest news.

Next