Advertisement
ಯಾವಾಗ ಕಾಲೇಜುಗಳು ಗೂಡಂಗಡಿಗಳಾದವೋ ಅಂದೇ ಉನ್ನತ ಶಿಕ್ಷಣದ ಗುಣಮಟ್ಟವೂ ಕುಸಿಯಿತು ಎನ್ನುವುದನ್ನು ಯಾರು ನಿರಾಕರಿಸುವಂತಿಲ್ಲ. ಯಾರು ಏನೇ ಹೇಳಿದರೂ ಈಗಿನ ಉನ್ನತ ಶಿಕ್ಷಣ ಎನ್ನುವುದು ಯುವಕರನ್ನು ಬುದ್ಧಿವಂತರನ್ನಾಗಿ ರೂಪುಗೊಳಿಸುವ ಬದಲು ವೃತ್ತಿಪರತೆಯ ಹೆಸರಲ್ಲಿ ಅಪಾರವಾಗಿ ಆಕರ್ಷಿಸುತ್ತಾ ಅವರನ್ನೂ ಸರಕುಗಳನ್ನಾಗಿ ರೂಪುಗೊಳಿಸುತ್ತಿವೆ. ಸರಿ ಸುಮಾರು ಮೂರು ದಶಕಗಳ ಹಿಂದಕ್ಕೆ ಹೊರಳಿ ನೋಡಿದರೆ ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಗಳ ಔನ್ನತ್ಯ ಮತ್ತು ಅವುಗಳಿಗಿದ್ದ ಘನಸ್ಥಿಕೆ ಈಗ ನೆನಪು ಮಾತ್ರ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಪರ್ಯಾಯವಾಗಿ ಜನತಾ ಪರಿವಾರ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಾಗಲೇ ಉನ್ನತ ಶಿಕ್ಷಣ ವ್ಯಾಪಾರೀಕರಣಕ್ಕೆ ನಾಂದಿ ಹಾಡಲಾಯಿತು. ಶಿಕ್ಷಣವನ್ನು ಖಾಸಗೀಕರಣದ ವ್ಯಾಪ್ತಿಗೆ ತರುವ ಮೂಲಕ ಸೆಲ್ಫ್ ಫೈನಾನ್ಸ್ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಬಾಗಿಲು ತೆರೆದದ್ದೇ ಪರಿವರ್ತನೆಗೆ ಕಾರಣವಾಯಿತು. ಡಾ| ಜೀವರಾಜ್ ಆಳ್ವ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲಘಟ್ಟವನ್ನು ನೆನಪಿಸಿಕೊಳ್ಳಿ -ನಿಮಗೆ ಎಲ್ಲವೂ ಅರ್ಥವಾಗಿಬಿಡುತ್ತದೆ.
Related Articles
Advertisement
ಈ ರೀತಿಯ ಶಿಕ್ಷಣ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಮೇಲೆ ವಿಶ್ವವಿದ್ಯಾನಿಲಯಗಳು ಇನ್ ಸಿಗ್ನಿಫಿಕೆಂಟ್ ಎನ್ನುವ ಹಂತಕ್ಕೆ ಬಂದು ಮುಟ್ಟಿವೆ. ಯಾಕೆಂದರೆ ಆರಂಭದಲ್ಲಿ ವಿಶ್ವವಿದ್ಯಾನಿಲಯ ಪದವಿ ಸರ್ಟಿಫಿಕೇಟ್ ಕೊಡುವ ಪರಮಾಧಿಕಾರ ಹೊಂದಿದ್ದವು. ಈಗ ಈ ಪದವಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೇ ತಮ್ಮಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕೊಡುತ್ತಿರುವುದರಿಂದ ವಿಶ್ವವಿದ್ಯಾನಿಲಯ ಕೇವಲ ತನ್ನ ಸ್ನಾತಕೋತ್ತರ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವಂತಾಗಿದೆ. ಅತ್ಯಂತ ಮುಕ್ತ ಮನಸ್ಸಿನಿಂದ ಚಿಂತಿಸಿದರೆ ಈಗ ವಿಶ್ವವಿದ್ಯಾನಿಲಯಗಳಿಗೆ ಹೂಡಿಕೆಯಾಗುತ್ತಿರುವ ಬಂಡವಾಳವೇ ನಿರುಪಯುಕ್ತ ಎನ್ನುವುದಕ್ಕಿಂತಲೂ ಇವು ಬಿಳಿ ಆನೆಗಳಾಗುತ್ತಿವೆ ಎನ್ನಬಹುದು.
ಸರ್ಕಾರದ ಅಧೀನದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದು ಸಾಧ್ಯವಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಸಂಪನ್ಮೂಲ ಹೂಡಿಕೆಯೂ ಕಷ್ಟ ಎಂಬ ನೆಪವೊಡ್ಡಿ ಚಾಲನೆ ಪಡೆದುಕೊಂಡ ಈ ಪ್ರವೃತ್ತಿ ಈಗ ಉದ್ಯಮದ ಸ್ವರೂಪವನ್ನು ಆವಾಹಿಸಿಕೊಂಡಿದೆ. ಈ ಎಲ್ಲ ಆಯಾಮಗಳಿಂದ ಈಗಿನ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳನ್ನು ಅವಲೋಕಿಸಿದರೆ ಮೂರು ದಶಕಗಳ ಹಿಂದಿನ ಶಿಕ್ಷಣ ವ್ಯವಸ್ಥೆ ಯಾವ ತಿರುವನ್ನು ಪಡೆದುಕೊಂಡಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳು ಕಾರ್ಖಾನೆ, ಅಲ್ಲಿ ಕಲಿಯುವ ವಿದ್ಯಾರ್ಥಿಗಳು ಉತ್ಪನ್ನ ಎನ್ನುವುದನ್ನು ಬಿಟ್ಟರೆ ಬೇರೆ ವ್ಯಾಖ್ಯೆ ನಿರುಪಯುಕ್ತ ಎನ್ನುವುದೇ ನನ್ನ ನಂಬಿಕೆ.
ಈ ಕಾರಣಕ್ಕೆ ವಿಶ್ವವಿದ್ಯಾನಿಲಯಗಳನ್ನು ರದ್ದು ಮಾಡಿದರೆ ಸರ್ಕಾರದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ. ಹೇಗೂ ವಿದೇಶಿ ವಿಶ್ವ ವಿದ್ಯಾನಿಲಯಗಳಿಗೆ ರತ್ನಗಂಬಳಿ ಹಾಸಿ ಕರೆಯಲಾಗುತ್ತಿದೆ. ಸದ್ಯ ಉನ್ನತ ಶಿಕ್ಷಣ ಸಂಸ್ಥೆಗಳು ಗೂಡಂಗಡಿ ಎನ್ನುವ ಹಂತಕ್ಕೆ ತಲುಪಿರುವುದರಿಂದ ನಮ್ಮ ಮಕ್ಕಳು ವಿದೇಶಿ ವಿಶ್ವವಿದ್ಯಾನಿಲಯಗಳ ಪದವಿಯನ್ನು ಹೆಸರಿನ ಮುಂದೆ ಬರೆಸಿಕೊಂಡು ಮನೆ ಮುಂದೆ ನೇತಾಡಿಸಿಕೊಳ್ಳಬಹುದು. ಪದವಿ ಪಡೆಯಲು ವಿದೇಶಗಳಿಗೆ ಹೋಗುವುದು ತಪ್ಪುತ್ತದೆ. ಮನೆ ಮುಂದೆಯೇ ವಿದೇಶಿ ವಿಶ್ವವಿದ್ಯಾಲಯಗಳು ತಳ್ಳುಗಾಡಿಗಳಂತೆ ಚಲಿಸಿದರೂ ಅಚ್ಚರಿಪಡಬೇಕಾಗಿಲ್ಲ. ಅದನ್ನು ಮುಂದೊಂದು ದಿನ ಮೊಬೈಲ್ ಯೂನಿವರ್ಸಿಟಿ ಎಂದೂ ಕರೆಯಬಹುದಲ್ಲವೇ?
ಇಂಥ ಶಿಕ್ಷಣದಿಂದ ಪ್ರಯೋಜನವಾದರೂ ಏನು? ಈ ಪ್ರಶ್ನೆಗೆ ಉತ್ತರವನ್ನು ಹುಡುಕುವುದಕ್ಕೆ ಇನ್ನು ಕಾಲ ಕಾಯಬೇಕು. ಆದರೆ ಅಂಥ ಕಾಲ ಯಾವಾಗ ಬರಬಹುದು ಎನ್ನುವುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಆದರೆ ಒಂದಂತೂ ನಿಜ. ಶಿಕ್ಷಣ ಈ ಪರಿಯಾಗಬಹುದು ಎನ್ನುವುದು ಬಹುಶಃ ಡಾ| ಜೀವರಾಜ್ ಆಳ್ವರಿಗೆ ಗೊತ್ತಿದ್ದಿರಲಿಕ್ಕಿಲ್ಲ. ಆದರೆ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರು ಮಾತ್ರ ಊಹಿಸಿದ್ದರು. ಒಂದೆರಡು ಸಲ ಡಾ| ಜೀವರಾಜ್ ಆಳ್ವರನ್ನು ಕರೆದು “ಇದು ಸರಿಯಾದ ಕ್ರಮವಲ್ಲ’ ಎಂದಿದ್ದರು. ಆಗ ಡಾ| ಆಳ್ವ ಅವರು ವಡ್ಡರ್ಸೆಯವರ ಮಾತನ್ನು ಅರ್ಥಮಾಡಿಕೊಳ್ಳುವ ಬದಲು “ಇದು ಸಮಸ್ಯೆಯಾಗದು ರಘುವಣ್ಣ’ ಎಂದಿದ್ದರು. ಈ ಮಾತನ್ನು ಉಲ್ಲೇಖೀಸಿದ್ದು ಹೇಗೆ ಶಿಕ್ಷಣ ಬದಲಾಯಿತು ಎನ್ನುವುದನ್ನು ಹೇಳುವ ಕಾರಣಕ್ಕೆ.
ಯಾರು ಏನೇ ಹೇಳಿದರೂ ಶಿಕ್ಷಣ ಮಾತ್ರ ಪರಿವರ್ತನೆಯ ಹಾದಿಯಲ್ಲಿ ಮುಂದುವರಿಯುತ್ತದೆ. ಆದರೆ ಯಾರಿಗೆಷ್ಟು ಪ್ರಯೋಜನ ಎನ್ನುವುದು ಮಾತ್ರ ನಿಜ. ಈ ಸತ್ಯವನ್ನು ಅರಿತು ಬದುಕನ್ನು ರೂಪಿಸಿಕೊಳ್ಳುವುದು ಮಾತ್ರ ಬುದ್ಧಿವಂತಿಕೆ.
ಚಿದಂಬರ ಬೈಕಂಪಾಡಿ