Advertisement

ಏನಾಗಲಿದೆ ಒಲಿ ಭವಿಷ್ಯ?

01:42 AM Jan 26, 2021 | Team Udayavani |

ಕಳೆದೊಂದು ವರ್ಷದಿಂದ ಚೀನಾದ ತಾಳಕ್ಕೆ ಕುಣಿದು ಭಾರತಕ್ಕೆ ಕಿರಿಕಿರಿಯುಂಟುಮಾಡುತ್ತಾ ಬಂದಿದ್ದ ನೇಪಾಳದ ಕೆ.ಪಿ.ಒಲಿ ಭವಿಷ್ಯವೀಗ ಅತಂತ್ರಕ್ಕೆ ಸಿಲುಕಿದೆ. ಪ್ರಚಂಡ ನೇತೃತ್ವದ ಬಣವೀಗ ಕೆ.ಪಿ. ಶರ್ಮ ಒಲಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಿದೆ.  ಇದರಿಂದಾಗಿ ನೇಪಾಳದ ರಾಜಕೀಯದಲ್ಲಿ ಆಗಬಹುದಾದ ಪರಿಣಾಮವೇನು?

Advertisement

ಚೀನ ಪರ ವಾಲಿಕೆ, ಅಧಿಕಾರದಾಹ :

ಒಂದೆಡೆ ಚೀನ ಪರ ವಾಲುತ್ತಾ, ಭಾರತದ ವಿರೋಧ ಕಟ್ಟುಕೊಳ್ಳುತ್ತಲೇ ಬಂದ ಓಲಿ, ಇನ್ನೊಂದೆಡೆ ಪಕ್ಷದಲ್ಲೂ ವೈರತ್ವ ಕಟ್ಟಿಕೊಳ್ಳುತ್ತಾ ಸಾಗಿದರು. 2017ರಲ್ಲಿ ಪ್ರಚಂಡ ನೇತೃತ್ವದ ನೇಪಾಲ ಕಮ್ಯುನಿಸ್ಟ್‌ ಪಾರ್ಟಿ(ಮಾವೋವಾದಿ)ಯೊಂದಿಗೆ ತಮ್ಮ ಕಮ್ಯುನಿಸ್ಟ್‌ ಪಾರ್ಟಿ ಆಫ್ ನೇಪಾಲ (ಮಾರ್ಕ್ಸಿಸ್ಟ್‌ ಲೆನಿನಿಸ್ಟ್‌) ಪಕ್ಷವನ್ನು ಬೆಸೆದು ಏಕೀಕೃತ ಎನ್‌ಸಿಪಿ ರಚಿಸಿ ಅಧಿಕಾರಕ್ಕೇರಿದ್ದ ಒಲಿ, ಮೈತ್ರಿಗೂ ಮುನ್ನ ಪ್ರಚಂಡ ಅವರಿಗೆ ನೀಡಿದ್ದ ಅಧಿಕಾರ ಹಸ್ತಾಂತರದ ಭರವಸೆಯನ್ನೂ ಈಡೇರಿಸಲಿಲ್ಲ. ಅಲ್ಲದೇ ಅವರು ಅತಿಯಾಗಿ ಸರ್ವಾಧಿಕಾರಿ ಧೋರಣೆ ತಾಳುತ್ತಿರುವುದು ಮಾಜಿ ಪ್ರಧಾನಿ ಪ್ರಚಂಡ ಅವರಿಗೂ ನುಂಗಲಾರದ ತುತ್ತಾಗಿ ಬದಲಾಗಿತ್ತು.

ಮುಂದೇನಾಗಬಹುದು? :

ಒಲಿ ಈಗ ಮತ್ತೆ ತಮ್ಮ ಪಕ್ಷವನ್ನು ಪುನರುಜ್ಜೀವಗೊಳಿಸಲು ಪ್ರಯತ್ನಿಸಬಹುದು. ಆದರೆ ಹಿಂದಿನ ಬಾರಿಯಂತೆ, ಈಗ ಅವರಿಗೆ ಚೀನದ ಬೆಂಬಲ ಸಿಗುವುದೋ ಇಲ್ಲವೋ ಎನ್ನುವ ಅನುಮಾನಗಳೆದ್ದಿವೆ. ಏಕೆಂದರೆ ವರ್ಷದಿಂದ ಭಾರತಕ್ಕೆ ಮಗ್ಗುಲ ಮುಳ್ಳಾಗಿ ಬದಲಾಗಿದ್ದ ಅವರು, ಕೆಲವು ದಿನಗಳಿಂದ ಏಕಾಏಕಿ ಭಾರತದ ಪರ ಮಾತನಾಡಲಾರಂಭಿಸಿದ್ದು ಚೀನದ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಈಗ ಓಲಿ ಪ್ರತಿಪಕ್ಷ ನೇಪಾಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಬಲಿಷ್ಠರಾಗಲು ಪ್ರಯತ್ನಿಸಬಹುದು ಎಂದೂ ವರದಿಗಳು ಹೇಳುತ್ತಿವೆ. ಆದರೆ ವಿಪಕ್ಷ ಮಾತ್ರ ಈ ವಿಚಾರದಲ್ಲಿ ಇನ್ನೂ ಏನನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಒಲಿ ಆಡಳಿತದಲ್ಲಿ ಎದುರಾದ ವೈಫ‌ಲ್ಯಗಳು(ಕೋವಿಡ್‌ ತಡೆಯುವಲ್ಲಿ ವೈಫ‌ಲ್ಯ, ಚೀನದೊಂದಿಗಿನ ಅತಿಯಾದ ಮೈತ್ರಿ) ಹಾಗೂ ಕಮ್ಯುನಿಸ್ಟ್‌ ಪಾರ್ಟಿಯಲ್ಲಿನ ಭ್ರಷ್ಟಾಚಾರದ ಆರೋಪಗಳಿಂದಾಗಿ ಜನರು ಬೇಸತ್ತಿದ್ದು, ಎಪ್ರಿಲ್‌ ತಿಂಗಳಲ್ಲೇ ಚುನಾವಣೆ ನಡೆದರೆ ತಾನು ಮೇಲುಗೈ ಸಾಧಿಸುವುದು ಖಚಿತ ಎಂಬ ಭರವಸೆಯಲ್ಲಿದೆ ವಿಪಕ್ಷ. ಆದರೆ ಕಮ್ಯುನಿಸ್ಟರು ಚುನಾವಣೆಯ ದಿನ ಮುಂದೂಡಲು ಪ್ರಯತ್ನಿಸಬಹುದು ಎನ್ನುವ ಭಯವೂ ಅದಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next