ಹೂಳೆತ್ತದ್ದರಿಂದ ನೀರಿಲ್ಲ
ಪ್ರಕೃತಿ ನಿರ್ಮಿತ ಕೆರೆ ಇದಾಗಿದ್ದು, ಸುಮಾರು 15 ಎಕ್ರೆ ವಿಸ್ತೀರ್ಣದ ಈ ಪ್ರಾಚೀನ ಕೆರೆಯ ದಡದಲ್ಲೇ ದೇಗುಲವಿದೆ. ಇದರ ಆಸುಪಾಸಿನಲ್ಲೇ ಮರಾಠಿ ಜನಾಂಗಕ್ಕೆ ಸೇರಿದ ಸುಮಾರು 20-25 ಮನೆಗಳ 150-200 ಮಂದಿ ವಾಸಿಸುತ್ತಿದ್ದಾರೆ. ಈ ಕೆರೆಯ ಹೂಳೆತ್ತದ ಪರಿಣಾಮ ಬಾವಿಗಳಲ್ಲೂ ನೀರಿಲ್ಲ. ಈ ಕೆರೆಯ ಹೂಳೆತ್ತಿ ಪುನರುಜ್ಜೀವನಗೊಳಿಸಿದರೆ ಈ ಭಾಗದ ಎಲ್ಲ ಬಾವಿಗಳಲ್ಲೂ ನೀರಿನ ಮಟ್ಟ ಹೆಚ್ಚಳವಾಗಿ ಸಮೃದ್ಧವಾಗಬಹುದು ಎನ್ನುವ ಲೆಕ್ಕಾಚಾರವಿದೆ.
ವರವಾದ ಮಳೆ
ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿರುವುದರಿಂದ ಇಲ್ಲಿನ ಜನರಿಗೆ ಅಷ್ಟೇನು ನೀರಿನ ಸಮಸ್ಯೆಯಾಗಿಲ್ಲ. ಆದರೆ ಪ್ರತಿ ವರ್ಷ ಇದೇ ರೀತಿ ಇರಲ್ಲ. ಕಳೆದ ವರ್ಷ ಮಳೆ ತಡವಾಗಿದ್ದರಿಂದ ನಾವು ನೀರಿಗಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದೇವು ಎನ್ನುತ್ತಾರೆ ಇಲ್ಲಿನ ನಿವಾಸಿಗರು. ಈ ಬೃಹತ್ ಕೆರೆಯ ಕೆಳಗಡೆಯ ಪ್ರದೇಶಗಳು ಶಂಕರನಾರಾಯಣ ಗ್ರಾಮಕ್ಕೆ ಸೇರಿದ್ದು, ಬೃಹತ್ ಕೆರೆಯ ತೂಬಿನ ಮುಖಾಂತರ ತುಂಬೆಮಕ್ಕಿ, ದ್ಯಾನೂರು, ಮುರ್ಡಿ, ಬಾಳೆಗದ್ದೆ, ಮೂಡುಬೆಟ್ಟು, ಕಾರೇಬೈಲು, ನ್ಯಾಮಕ್ಕಿ ಮುಂತಾದ ಪ್ರದೇಶಗಳ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸಲಾಗುತ್ತಿತ್ತು. ಇಲ್ಲಿ ಹಿಂದಿನ ಕಾಲದ ಕಾಲುವೆಗಳ ಪಳೆಯುಳಿಕೆ ಈಗಲೂ ಇವೆ.
ಹೂಳೆತ್ತದೇ 40 ವರ್ಷ
ಸುಮಾರು 35-40 ವರ್ಷಗಳ ಹಿಂದೆ ಸರಕಾರದಿಂದ ಸೋಣಿ ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆದದ್ದು ಬಿಟ್ಟರೆ ಅ ಬಳಿಕ ಈವರೆಗೆ ಹೂಳೆತ್ತುವ ಕಾರ್ಯ ಆಗಿಲ್ಲ. ಹೂಳು ತುಂಬಿದ ಕೆರೆಯಲ್ಲಿ ಗಿಡ -ಗಂಟಿ ಬೆಳೆದಿದ್ದು, ಹಾಗೇ ಬಿಟ್ಟರೆ ಮುಂದಿನ ದಿನಗಳಲ್ಲಿ ಈ ಪ್ರಾಚೀನ ಸೋಣಿ ಕೆರೆಯೇ ಮಾಯವಾಗಬಹುದು ಎನ್ನುವ ಆತಂಕ ಸ್ಥಳೀಯರದು.
Advertisement
ಹೂಳೆತ್ತಲು ಮುಂದಾಗಲಿಐತಿಹಾಸಿಕ ಹಿನ್ನೆಲೆ ಇರುವ ಈ ಸೋಣಿ ಕೆರೆಯು ನಿರ್ವಹಣೆ ಕೊರತೆಯಿಂದ ಮೂಲೆ ಗುಂಪಾಗಿದೆ. ಸರಕಾರ ಈ ಕೆರೆಯ ಹೂಳೆತ್ತಿ, ಪುನರುಜ್ಜೀವನಗೊಳಿಸಿದರೆ, ಈ ಭಾಗದ ನಿವಾಸಿಗಳಿಗೂ ಹಾಗೂ ಇದನ್ನೇ ಆಶ್ರಯಿಸಿರುವ ಸುತ್ತಮುತ್ತಲಿನ ನೂರಾರು ಎಕ್ರೆ ಕೃಷಿ ಭೂಮಿಯ ಅಂತರ್ಜಲ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ.
– ಚಿಟ್ಟೆ ರಾಜಗೋಪಾಲ ಹೆಗ್ಡೆ, ಪಶ್ಚಿಮ ವಾಹಿನಿ ನೀರಾವರಿ
ಅಚ್ಚುಕಟ್ಟು ಅಭಿವೃದ್ಧಿ ಸಮಿತಿ
ಓಟು ಬಂದಾಗ ಮಾತ್ರ ರಾಜಕಾರಣಿಗಳಿಗೆ ನಮ್ಮ ನೆನಪಾಗುತ್ತದೆ. ಕೆರೆಯ ಹೂಳು ತೆಗೆದು ನಮ್ಮ ಕೃಷಿ ಭೂಮಿಯ ಅಂತರ್ಜಲ ಹೆಚ್ಚಿಸಿ ಅಂದರೆ ಯಾರೂ ಕಿವಿಗೆ ಹಾಕಿಕೊಳ್ಳುವುದಿಲ್ಲ.
– ಆನಂದ ನಾಯ್ಕ ಸೋಣಿ, ಸ್ಥಳೀಯ ನಿವಾಸಿ – ಪ್ರಶಾಂತ್ ಪಾದೆ