ಸಮುದ್ರದ ಎದುರು ಕುಳಿತ ಆ ಇಬ್ಬರೂ ಗೆಳೆಯರಿಗೆ ದಡದತ್ತ ಬರುತ್ತಿದ್ದ ಅಲೆಗಳು ಕಾಣುತ್ತಿದ್ದವು. ಒಂದರ ಹಿಂದೊಂದು, ಮತ್ತೂಂದು ಹೀಗೆ.
ಒಬ್ಬ ಮತ್ತೂಬ್ಬನಲ್ಲಿ ಕೇಳಿದ. ಈ ಅಲೆಗಳಿಗೆ ಬೇಸರವೆಂಬುದು ಇಲ್ಲವೇ? ಯಾಕೆಂದರೆ ಗುರಿಯನ್ನು ತಲುಪುವುದೇ ಇಲ್ಲವಲ್ಲ. ಇದನ್ನು ಕೇಳಿದ ಮತ್ತೂಬ್ಬನಿಗೆ ವಿಚಿತ್ರವೆನಿಸಿತು. ಅದು ಹೇಗೆ ? ಅವು ಪ್ರತಿ ಬಾರಿಯೂ ದಡವನ್ನು ತಲುಪುತ್ತವಲ್ಲ, ಅವುಗಳ ಗುರಿಯೆ ದಡವನ್ನು ತಲುಪುವುದಲ್ಲವೇ? ಎಂದು ಮರು ಪ್ರಶ್ನಿಸಿದ.
ಅದಕ್ಕೆ ಮೊದಲಿನಾತ, ಅವುಗಳ ಗುರಿ ಸಮುದ್ರದ ಮತ್ತೂಂದು ತುದಿಯನ್ನು ತಲುಪುವುದಲ್ಲವೇ? ಇಲ್ಲವಾದರೆ ದಡಕ್ಕೆ ಬಂದವು ಯಾಕೆ ವಾಪಸು ಹೋಗುತ್ತವೆ ಎಂದು ಕೇಳಿದ. ಇದೂ ತೀರಾ ಗೊಂದಲವೆನಿಸಿತು. ಸುತ್ತಲೂ ಯಾರಾದರೂ ಇದ್ದಾರೆಯೇ ಎಂದು ಗಮನಿಸಿದರು. ದೂರದಲ್ಲೊಬ್ಬ ಅಜ್ಜ ಏನನ್ನೋ ಮಾಡುತ್ತಿರುವಂತೆ ಕಾಣಿಸಿತು. ಇಬ್ಬರೂ ಅತ್ತ ನಡೆದರು.
ಅಜ್ಜ ಸಣ್ಣದೊಂದು ಬಲೆ ಹಾಕಿ ಮೀನು ಹಿಡಿಯಲೆತ್ನಿಸುತ್ತಿದ್ದ. ಇದನ್ನು ಕಂಡ ಇಬ್ಬರೂ ಗೆಳೆಯರು, ಏನಜ್ಜ, ಈ ಬಲೆಯಲ್ಲಿ ನಿನಗೆ ಮೀನು ಸಿಗುವುದೇ? ಎಂದು ಕೇಳಿದ. ಅದಕ್ಕೆ ಅಜ್ಜ, ಸಿಗಬಹುದು ಎಂದ. ಗೆಳೆಯರಿಬ್ಬರು ಅಜ್ಜನನ್ನು ಅಪಹಾಸ್ಯ ಮಾಡುವಂತೆ, ಇದರಲ್ಲಿ ಮೀನು ಸಿಕ್ಕರೆ ನೀನು ಶ್ರೀಮಂತನಾಗಿಬಿಡುತ್ತೀ ಎಂದರು.
ಅಜ್ಜ ಕೋಪ ಮಾಡಿಕೊಳ್ಳಲಿಲ್ಲ. ಮುಗುಳ್ನಗುತ್ತಲೇ ಧನ್ಯವಾದಗಳು. ಆದರೆ ನನಗೆ ಪ್ರತಿ ಕ್ಷಣವನ್ನೂ ನನ್ನದಾಗಿಸಿಕೊಳ್ಳುವ ಹಂಬಲ. ಪ್ರಯತ್ನ ಅಂಥದೊಂದು ಸಾಧ್ಯತೆ ಎನಿಸಿದೆ. ಅದಕ್ಕೇ ಪ್ರಯತ್ನಿಸುತ್ತಿದ್ದೇನೆ ಎಂದರು. ಅದು ಸರಿ, ನಮ್ಮದೊಂದು ಗೊಂದಲವಿದೆ. ಉತ್ತರವಿದ್ದರೆ ಹೇಳಿ ಎಂದು ಸಂಪೂರ್ಣವಾಗಿ ತಮ್ಮ ಅಲೆಗಳ ಕಥೆ ವಿವರಿಸಿದರು. ಎಲ್ಲವನ್ನೂ ಕೇಳಿದ ಮೇಲೆ ಅಜ್ಜ, ಅಲೆಗಳೂ ನನ್ನ ಹಾಗೆಯೇ. ಗುರಿ ಮತ್ತೂಂದು ತುದಿಯನ್ನು ಮುಟ್ಟುವುದೇ ಇರಬಹುದು, ಆದರೂ ಪ್ರಯತ್ನ ನಿಲ್ಲಿಸುತ್ತಿಲ್ಲವಲ್ಲ ಎಂದು ಕೇಳಿದರು.
ಪ್ರಯತ್ನವೆಂಬುದೇ ಕಾಲ. ಅದನ್ನು ನಮ್ಮದಾಗಿಸಿಕೊಳ್ಳುವ ಹಂಬಲ ಇರದಿದ್ದರೆ ನಾವು ಕ್ರಮಿಸುವುದೇ ಇಲ್ಲ. ಗುರಿ ತಲುಪುವುದೂ ಎಷ್ಟು ಮುಖ್ಯವೋ ಅಷ್ಟೇ ನಾವು ಚಲನಶೀಲರಾಗಿರುವುದು ಸಹ.ಯಾವ ಕ್ಷಣವನ್ನೂ ನಮ್ಮ ಕೈಯಿಂದ ಸೋರಿ ಹೋಗದಂತೆ ನೋಡಿಕೊಳ್ಳುವುದು. ಅದನ್ನೇ ನಾನು ಮಾಡುತ್ತಿದ್ದೇನೆ, ಅಲೆಗಳೂ ಮಾಡುತ್ತಿವೆ ಎಂದ ಅಜ್ಜ.
-ಟೈಮ್ ಸ್ವಾಮಿ