ಮೊಹಾಲಿ: ಈ ಋತುವಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಚಂಡ ಫಾರ್ಮ್ನಲ್ಲಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಪಂಜಾಬ್ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕ್ರಿಸ್ ಗೇಲ್ ಅವರ ಸ್ಫೋಟಕ ಆಟದಿಂದಾಗಿ ಪಂಜಾಬ್ ಜಯಭೇರಿ ಬಾರಿಸುತ್ತಿದೆ ಮಾತ್ರವಲ್ಲದೇ ಪ್ಲೇ ಆಫ್ಗೆ ತೇರ್ಗಡೆಯಾಗುವ ಎಲ್ಲ ಸಾಧ್ಯತೆಯನ್ನು ತೆರೆದಿಟ್ಟಿದೆ. ತಂಡದ ಅಮೋಘ ನಿರ್ವಹಣೆಯಿಂದ ಹರ್ಷಗೊಂಡಿರುವ ಮಾಲಕಿ ಪ್ರೀತಿ ಝಿಂಟಾ ಒಂದು ವೇಳೆ ಪಂಜಾಬ್ ಪ್ರಶಸ್ತಿ ಗೆದ್ದರೆ ಏನಾದರೂ ವಿಶೇಷ ಕೊಡುಗೆ ನೀಡುವ ಭರವಸೆ ನೀಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಪಂಜಾಬ್ ಬಹಳಷ್ಟು ಒದ್ದಾಟ ನಡೆಸಿದೆ ಮತ್ತು ಅಪರೂಪಕ್ಕೊಮ್ಮೆ ನಾಕೌಟ್ ಹಂತಕ್ಕೇರಿದೆ. ಆದರೆ ಈ ಬಾರಿ ಹರಾಜಿನಲ್ಲಿ ತಂಡವು ಹಲವು ಉತ್ತಮ ಆಟಗಾರರನ್ನು ತನ್ನ ಬುಟ್ಟಿಗೆ ಸೇರಿಸಿಕೊಂಡಿದೆ ಮತ್ತು ಅವರೆಲ್ಲರೂ ಭರ್ಜರಿ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಕ್ರಿಸ್ ಗೇಲ್ ಅವರನ್ನು ಖರೀದಿಸುವ ತಂಡದ ಯೋಜನೆ ಫಲ ನೀಡಿದಂತಿದೆ. ಅವರು ಆಡಿದ ಮೂರು ಪಂದ್ಯಗಳಲ್ಲಿ ಭರ್ಜರಿ ಆಟವಾಡಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲೇ ಪಂಜಾಬ್ ತಂಡವು ಕೋಲ್ಕತಾ ತಂಡವನ್ನು ಉರುಳಿಸಿದ ಸಾಧನೆ ಮಾಡಿದೆ. ಮಳೆಯಿಂದ ತೊಂದರೆಗೊಳಗಾದ ಈ ಪಂದ್ಯದಲ್ಲಿ ಗೆಲ್ಲಲು 13 ಓವರ್‌ಗಳಿಂದ 125 ರನ್ ಗಳಿಸುವ ಗುರಿ ಪಡೆದ ಪಂಜಾಬ್ ತಂಡವು ಗೇಲ್ ಮತ್ತು ರಾಹುಲ್ ಅವರ ಆಕರ್ಷಕ ಆಟದಿಂದಾಗಿ ಜಯಭೇರಿ ಬಾರಿಸಿತ್ತು. ಸತತ ಎರಡು ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದ್ದರಿಂದ ಮಾಲಕಿ ಝಿಂಟಾ ಸಂಭ್ರಮಗೊಂಡಿದ್ದಾರೆ.
ಈಗ ಹೇಳುವುದಿಲ್ಲ
ಪಂದ್ಯದ ಬಳಿಕ ಪ್ರೀತಿ ಮತ್ತು ರಾಹುಲ್ ಅವರಿಗೆ ಹಲವು ಪ್ರಶ್ನೆಗಗಳನ್ನು ಕೇಳಲಾಯಿತು. ಕೆಕೆಆರ್ ಗೆದ್ದಾಗ ಶಾರೂಖ್ ಖಾನ್ ನೀಡಿದ ಕೊಡುಗೆಯನ್ನು ರಾಹುಲ ಸ್ಮರಿಸಿಕೊಂಡರಲ್ಲದೇ ಪಂಜಾಬ್ ಗೆದ್ದರೆ ನೀವು ಏನು ಮಾಡುತ್ತೀರಿ ಎಂದು ಝಿಂಟಾ ಅವರಲ್ಲಿ ಕೇಳಿಕೊಂಡರು.
ಓಕೆ. ಒಂದು ವೇಳೆ ಪಂಜಾಬ್ ಪ್ರಶಸ್ತಿ ಗೆದ್ದರೆ ನಾನು ವಿಶೇಷ ಕೊಡುಗೆ ನೀಡಲಿದ್ದೇನೆ. ಇದನ್ನು ಈಗ ಹೇಳುವುದಿಲ್ಲ. ನಾವು ಗೆಲ್ಲಬೇಕಾಗಿದೆ. ಮತ್ತು ಒಂದು ವೇಳೆ ಗೆದ್ದರೆ ನಾನು ವಿಶೇಷ ಕೊಡುಗೆ ನೀಡುವೆ ಎಂದರು.