Advertisement

ನಮ್ಮ ರೈತರು ಏನು ಪಾಪ ಮಾಡಿದ್ದಾರೆ?

11:47 AM Feb 09, 2017 | Team Udayavani |

ಉದಯವಾಣಿ ದೆಹಲಿ ಪ್ರತಿನಿಧಿ: ಕರ್ನಾಟಕದಲ್ಲಿ ತೀವ್ರ ಬರವಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌. ಡಿ.ದೇವೇಗೌಡ ಹೇಳಿದ್ದಾರೆ. ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, “ರೈತ ಸಮುದಾಯವನ್ನು ಉಳಿಸಲು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರವನ್ನು ಕೋರಿದರು.

Advertisement

ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಕರ್ನಾಟಕದ 6 ಬೆಳೆಗಳನ್ನು ಒಳಪಡಿಸಲಾಗಿದೆ. ಬೇರೆ ಕೆಲವು ರಾಜ್ಯಗಳ 25-26 ಬೆಳೆಗಳು ಬೆಳೆ ವಿಮೆ ಯೋಜನೆ ವ್ಯಾಪ್ತಿಯಲ್ಲಿ ಸೇರಿದೆ. ನಾವು, ಕರ್ನಾಟಕದ ರೈತರು ಏನು ಪಾಪ ಮಾಡಿದ್ದೇವೆ,” ಎಂದು ಕೇಂದ್ರ ಸರ್ಕಾರವನ್ನು ದೇವೇಗೌಡರು ಪ್ರಶ್ನಿಸಿದರು.”ರಾಜ್ಯದ ತೆಂಗು ಮತ್ತು ತಂಬಾಕು ಬೆಳೆಗಾರರ ಸಮಸ್ಯೆಯ ಬಗ್ಗೆ ಖುದ್ದು ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಆದರೆ ತಮ್ಮ ಭೇಟಿಯ ಫ‌ಲ ಯಾವಾಗ ಸಿಗುತ್ತದೆಂದು ಗೊತ್ತಿಲ್ಲ,” ಎಂದು ಕೇಂದ್ರ ಸರ್ಕಾರವನ್ನು ತಿವಿದರು.

“ಬಿಜೆಪಿ ಅಧಿಕಾರಕ್ಕೆ ಬಂದು 3ವರ್ಷಗಳಾಗಿದೆ. ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬ ಮಾಹಿತಿ ನನಗೆ ಸಿಕ್ಕಿಲ್ಲ. 3,4 ಸಾವಿರ ರೂ.ಗಳಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸ್ಥಿತಿಯಿದೆ. ಕಾರ್ಪೊರೇಟ್‌ ವ್ಯಕ್ತಿಗಳಿಗೆ ಲಕ್ಷಾಂತರ ಕೋಟಿ ರೂ. ಸಾಲ ನೀಡಲಾಗಿದೆ. ಆದರೆ ರೈತರು ಸಾಲ ಮರು ಪಾವತಿ ಮಾಡದಿದ್ದರೆ ಅವರ ಆಸ್ತಿಪಾಸ್ತಿ ಹರಾಜು ಹಾಕಲಾಗುತ್ತದೆ.

ಖಾಸಗಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಿ ಭಾರಿ ಪ್ರಮಾಣದಲ್ಲಿ ಬಡ್ಡಿ ಗಳಿಸುತ್ತವೆ. ಈ ಬ್ಯಾಂಕ್‌ಗಳಿಗೂ ಲೇವಾದೇವಿದಾರರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ,” ಎಂದು ದೇವೇಗೌಡರು ಹೇಳಿದರು. ನೋಟು ರದ್ದತಿ ತೀರ್ಮಾನ ತೆಗೆದುಕೊಂಡು ಆ ಬಳಿಕ ಪದೇಪದೆ ನಿಯಮಗಳನ್ನು ಬದಲಾಯಿಸಿದ ಕಾರಣದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ದೇಶದ ಗ್ರಾಮೀಣ ಭಾಗದ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ಹೇಳಿದರು. 

ಹೈನುಗಾರಿಕೆ ಮತ್ತು ಪಶು ಸಂಗೋಪನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒಲವು ತೋರಿಸಿದೆ. ಕರ್ನಾಟಕ, ಗುಜರಾತ್‌ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಪಶು ಸಂಗೋಪನೆ ಪ್ರಮುಖ ಪಾತ್ರ ವಹಿಸಿದೆ. ಆದರೆ ಉತ್ತರ ಭಾರತದಲ್ಲಿ ಈ ಬಗ್ಗೆ ನಿರ್ಲಕ್ಷ್ಯವಿದೆ. ಸರ್ಕಾರ ಈ ಭಾಗದಲ್ಲಿಯೂ ಪಶು ಸಂಗೋಪನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೇವೇಗೌಡ ಆಗ್ರಹಿಸಿದರು.

Advertisement

ಹರಿಹಾಯ್ದ ಮೊಯ್ಲಿ
ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಖಂಡಿಸಿದರು. 2017-18ರ ಬಜೆಟ್‌ ದೇಶದ ಮುಂದಿರುವ ಯಾವುದೇ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಉತ್ಪಾದನಾ ವಲಯ ವಿಕಾಸಗೊಳ್ಳುತ್ತಿಲ್ಲ. ನಿರುದ್ಯೋಗ ಏರಿಕೆಯಾಗಿದೆ. ಬಂಡವಾಳ ಹೂಡಿಕೆಯಲ್ಲಿ ಕುಸಿತವಾಗಿದೆ. ಅಪನಗದೀಕರಣ ದೇಶದ ಅರ್ಥ ವ್ಯವಸ್ಥೆಗೆ ಮಾರಕ ಹೊಡೆತ ನೀಡಿದೆ ಎಂದು ಆರೋಪಿಸಿದರು.

ಅಪನಗದೀಕರಣಕ್ಕೆ ಭಾರತ ನೀಡಿದ್ದ ಕಾರಣಗಳನ್ನು 2015ರಲ್ಲಿ ಪಾಕಿಸ್ತಾನವೂ ನೀಡಿ ಅಪನಗದೀಕರಣ ಮಾಡಿತ್ತು. ಆದ್ದರಿಂದ ದೇಶದ ಇತಿಹಾಸದಲ್ಲೇ ಮೊದಲ ಬಾರಿ ಭಾರತವು ಪಾಕಿಸ್ತಾನವನ್ನು ಅನುಸರಿಸುವಂತೆ ಆಗಿದೆ ಎಂದು ಮೊಯ್ಲಿ ಹೇಳಿದರು. ಕೇಂದ್ರ ಸರ್ಕಾರ ದೇಶದ ಅರ್ಥ ವ್ಯವಸ್ಥೆಯನ್ನು ನಾಶ ಮಾಡಿದೆ. ಈ ಪರಿಸ್ಥಿತಿ ಬದಲಾಗುವ ನಿರೀಕ್ಷೆಯಿಲ್ಲ. ದೇಶ ಕಟ್ಟಲು ಈ ಸರ್ಕಾರ ಆಸಕ್ತವಾಗಿಲ್ಲ ಎಂದು ಮೊಯ್ಲಿ ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next