Advertisement
ಈಗೀಗ ಗೊತ್ತಿಲ್ಲದೆ ತಪ್ಪು ಮಾಡುವ ಜನರಿಗಿಂತ ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡುವವರೇ ಹೆಚ್ಚು. ಮನುಷ್ಯ ಮೊದಲನೇ ಸಲ ತಪ್ಪು ಮಾಡುವಾಗ ಜಾಸ್ತಿ ಹೆದರಿಕೊಳ್ಳುತ್ತಾನೆ, ಆದರೆ ನಂತರ ಅದನ್ನೇ ರೂಢಿ ಮಾಡಿಕೊಂಡಾಗ ಬೇರೆಯವರನ್ನು ಹೆದರಿಸಿ ಸುಮ್ಮನಿರಿಸಿ ತಾನು ಮಾಡುವ ತಪ್ಪುಗಳನ್ನು ಮುಂದುವರಿಸುತ್ತಾನೆ. ಬಹಳ ಸರಳ ಉದಾಹರಣೆಯೆಂದರೆ ಸಿಗರೇಟ್ ಬಾಕ್ಸ್ ಮೇಲೆ ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಅಂತ ಬರೆದಿರುತ್ತದೆ. ಸಿಗರೇಟ್ ಸೇದುವವ ಪ್ರತಿ ಸಲ ಅದನ್ನು ಓದುತ್ತಾನೆ ಆದರೂ ಅದನ್ನು ಲೆಕ್ಕಿಸದೆ ಸೇದುತ್ತಾನೆ. ಮದ್ಯಪಾನದಿಂದ ಸಾವು ಸಂಭವಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ ಆದರೂ ಅದನ್ನು ಬಿಡದೆ ಕುಡಿಯುತ್ತಾರೆ. ನದಿ ಅಥವಾ ಕೆರೆಯ ದಂಡೆಯ ಮೇಲೆ ಇಲ್ಲಿ ಆಳವಿದೆ, ಈಜುವುದನ್ನು ನಿಷೇಧಿಸಲಾಗಿದೆ ಎಂದು ಬೋರ್ಡ್ ಹಾಕಿದ್ದರೂ ಕೆಲವರು ಈಜಿಗಿಳಿಯುತ್ತಾರೆ. ಯಾರ ಮಾತನ್ನೂ ಲೆಕ್ಕಿಸುವುದಿಲ್ಲ. ಆ ಕಡೆ ಆಳ ಇದೆ ಹೋಗಬೇಡಿ ಅಂದರೆ, ಅದೇ ಕಡೆ ಹೋಗಿ ನೀರಿನಲ್ಲಿ ಮುಳುಗುತ್ತಾರೆ. ಮಕ್ಕಳು ಮನೆಯಿಂದ ಹೊರಟಾಗ ಪ್ರತಿ ಸಲ ತಂದೆ ತಾಯಿ ಹೇಳುವ ಮಾತು ಒಂದೇ- ಜೋರಾಗಿ ಗಾಡಿ ಓಡಿಸ್ಬೇಡ, ನಿಧಾನವಾಗಿ ತಾಳ್ಮೆಯಿಂದ ಓಡಿಸು. ಅವಸರವೇ ಅಪಘಾತಕ್ಕೆ ಕಾರಣ ಎಂದು ರಸ್ತೆಗಳಲ್ಲಿ, ಬಸ್‌ಗಳ ಹಿಂಭಾಗದಲ್ಲಿ ಹೀಗೆ ನಾನಾ ಕಡೆ ಬೋರ್ಡ್ ಇರುತ್ತದೆ. ಆದರೆ ಕೆಲ ಯುವಕರು ಯಾರ ಮಾತಿಗೂ ಕಿವಿಕೊಡುವುದಿಲ್ಲ, ಯಾವ ಶಿಸ್ತನ್ನೂ ಸರಿಯಾಗಿ ಪಾಲಿಸುವುದಿಲ್ಲ. ಇವರು ಮಾಡುವ ತಪ್ಪಿನಿಂದ ಇವರ ಅಕ್ಕಪಕ್ಕ ವಾಹನ ಓಡಿಸುವವರಿಗೂ ತೊಂದರೆ. ಕೆಲವು ಸಲ ಇವರು ಆಡುವ ಕೇರ್‌ಲೆಸ್ ಆಟಗಳಿಂದ ಅಮಾಯಕರು ಪ್ರಾಣ ಬಿಟ್ಟಿದ್ದಾರೆ. ತುಂಬಾ ಜನ ಹುಡುಗರು ಆ್ಯಕ್ಸಿಡೆಂಟ್‌ನಲ್ಲಿ ಸಾವನ್ನಪ್ಪಿರುವುದು ಅವರ ಬೇಜವಾಬ್ದಾರಿತನದಿಂದ. ಸತ್ತವರಿಗೆ ಸಂಕಟ ಗೊತ್ತಾಗುವುದಿಲ್ಲ. ಆದರೆ ಅವರನ್ನು ಹುಟ್ಟಿಸಿ, ಸಾಕಿ ಬೆಳೆಸಿ ಜೊತೆಗಿರುವವರಿಗೆ ಜೀವನಪೂರ್ತಿ ನೋವೇ.
Related Articles
ಕೆಲವರು ತಪ್ಪು-ಸರಿಯ ಬಗ್ಗೆ ವಾದಿಸುತ್ತಾರೆ. ತಪ್ಪು-ಸರಿ ಎಂಬುದು ನಮ್ಮ ನಮ್ಮ ಚೌಕಟ್ಟಿಗೆ ಬಿಟ್ಟಿದ್ದು. ನಮಗನಿಸಿದ್ದನ್ನು ನಾವು ಸರಿ ಅಥವಾ ತಪ್ಪುಗಳೆಂದು ವಾದಿಸುತ್ತೇವೆ ಎನ್ನುತ್ತಾರೆ. ಆದರೆ ನೋವು ಎಂಬುದು ಯೂನಿವರ್ಸಲ್ ಎಮೋಷನ್. ಯಾವ ಕ್ರಿಯೆಗಳು ಮನುಷ್ಯನಿಗೆ ನೋವು ತರುತ್ತವೆಯೋ, ಯಾವ ಅಧರ್ಮ ವರ್ತನೆ ನಮ್ಮ ಸುತ್ತಮುತ್ತಲಿನವರು ತಲೆ ತಗ್ಗಿಸುವಂತೆ ಮಾಡುತ್ತದೆಯೋ, ಯಾವಾಗ ನಮ್ಮ ಮಾತುಗಳು ನಮಗೆ ಸಂತೊಷ ಕೊಟ್ಟು ಎದುರಿರುವ ವ್ಯಕ್ತಿಗೆ ನೋವು ಕೊಡುತ್ತದೆಯೋ, ಯಾವಾಗ ನಾವು ಮಾಡುವ ಕೆಲಸ ನಮ್ಮ ವ್ಯಕ್ತಿತ್ವಕ್ಕೆ ಕುಂದು ತರುತ್ತದೆಯೋ ಅವೆಲ್ಲ ತಪ್ಪು ಎಂದು ನಮಗೆ ಯಾರೂ ಹೇಳಿಕೊಡುವುದೆ ಬೇಡ. ಪ್ರಕೃತಿ ತಾನಾಗೇ ನಮ್ಮೊಳ ಗಿರುವ ಪಾಪ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ಸರಿ-ತಪ್ಪುಗಳು ನಮ್ಮೆಲ್ಲರಿಗೂ ಚೆನ್ನಾಗಿ ಗೊತ್ತಿರುತ್ತದೆ, ಆದರೂ ನಾವು ನಮ್ಮ ಮಟ್ಟದಲ್ಲಿ ನಾವು ಮಾಡುವುದೆಲ್ಲ ಸರಿ ಅಂತಲೇ ವಾದಿಸುತ್ತೇವೆ.
Advertisement
ಅನೇಕರಿಗೆ ತಾವು ಮಾಡುತ್ತಿರುವುದೆಲ್ಲ ತಪ್ಪಿನ ಮೇಲೊಂದು ತಪ್ಪು ಎಂದು ಗೊತ್ತಿದ್ದರೂ, ಅವರು ತಮ್ಮ ತಪ್ಪುಗಳೊಳಗೇ ಸಿಕ್ಕಿಹಾಕಿ ಕೊಂಡು ಹೊರಬರಲು ಸಾಧ್ಯವಾಗದೆ ಮತ್ತೆ ತಪ್ಪುಗಳನ್ನೇ ಮಾಡಲಾರಂಭಿಸುತ್ತಾರೆ. ತಪ್ಪಿನ ಅರಿವಿರುವವನನ್ನು ದೇವರು ಕ್ಷಮಿಸಬಹುದೇನೋ. ಆದರೆ ಅನೇಕ ತಪ್ಪುಗಳನ್ನು ಮಾಡಿ, ಮತ್ತೆ ಅದನ್ನೇ ಮುಂದುವರೆಸುತ್ತಾ, ನಾನು ಮಾಡುತ್ತಿರುವುದೆಲ್ಲ ಸರಿ ಎಂದು ವಾದಿಸುವವನನ್ನು ಯಾರು ತಾನೇ ಕ್ಷಮಿಸಲು ಸಾಧ್ಯ? ಅವನು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ, ಅವನಿಗೆ ಶಿಕ್ಷೆ ತಪ್ಪಿದ್ದಲ್ಲ.
ತಪ್ಪು ಮಾಡಬಾರದು ಎಂಬುದಕ್ಕೆ ಕಾನೂನಿನ ಭಯ ಕಾರಣ ವಾಗಬಾರದು. ಅಥವಾ ಈ ತಪ್ಪು ಮಾಡಿದರೆ ಬೇರೆಯವರು ಏನೋ ಹೇಳುತ್ತಾರೆಂದು ಭಾವಿಸಿ ದೂರ ಉಳಿಯಬಾರದು. ತಪ್ಪು ಮಾಡದೆ ಇರುವುದಕ್ಕೆ ನಮ್ಮ ನಮ್ಮ ಅಂತಃಸಾಕ್ಷಿಯೇ ಕಾರಣ ವಾಗಬೇಕು. ಕಾನೂನು ಅಥವಾ ಅಪ್ಪ-ಅಮ್ಮ ಕೇಳುವ ಪ್ರಶ್ನೆಗಿಂತ ನಮ್ಮ ಮನಸಾಕ್ಷಿ ಕೇಳುವ ಪ್ರಶ್ನೆ ದೊಡ್ಡದು. ಅದನ್ನೆದುರಿಸಲು ಬಹಳ ಶಕ್ತಿ ಬೇಕು. ತಪ್ಪು ಮಾಡಿದವರಲ್ಲಿ ಬಹಳ ಜನರು ಮುಂದೊಂದು ದಿನ ತಮ್ಮದೇ ಮನಸ್ಸಿನ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಒದ್ದಾಡುತ್ತಾರೆ. ಅದು ಎಲ್ಲಕ್ಕಿಂತ ದೊಡ್ಡ ಶಿಕ್ಷೆ. ಈ ಶಿಕ್ಷೆಯ ಭಯವೇ ನಮ್ಮನ್ನು ತಪ್ಪುಗಳಿಂದ ದೂರ ಓಡಿಸಬೇಕು.