ವಿಜಯಪುರ: ಪ್ರಜ್ವಲ್ ಪ್ರಕರಣ ಅತ್ಯಂತ ಹೇಯ ಹಾಗೂ ಅತಿರೇಕದ ಕೃತ್ಯ ಎಂದು ಹರಿಹಾಯ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಮಹಿಳೆಯರು ಜೆಡಿಎಸ್ ಪಕ್ಷದ ಮೇಲೆಯೇ ಅಸಹ್ಯ ಪಡುವಂತಾಗಿದೆ. ಜೆಡಿಎಸ್ ಸಂಸದನ ಈ ಹೀನ ಕೃತ್ಯ ಖಂಡಿತ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂಥ ಪ್ರಕರಣಗಳಿಂದ ಜನರು ಸಾರ್ವಜನಿಕ ಬದುಕಿನಲ್ಲಿ ಇರುವವರ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಕೃತ್ಯದ ಪೆನ್‍ಡ್ರೈವ್ ಬಹಿರಂಗದ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಆರೋಪಿಸುವವರು, ಇಂಥ ಹೀನ ಕೆಲಸ ಮಾಡಲು ಹೇಳಿದ್ದು ನಾವೇ ಎಂದು ತಿರುಗೇಟು ನೀಡಿದರು.
ಎಸ್‍ಐಟಿ ತನಿಖೆ ನಡೆಸುತ್ತಿದ್ದು, ಸತ್ಯ ಹೊರ ಬರಲಿದೆ. ಈ ಹಂತದಲ್ಲಿ ನಾವು ಏನನ್ನೂ ಮಾತನಾಡಬಾರದು. ಗೃಹ ಸಚಿವನಾಗಿಯೂ ಕೆಲಸ ಮಾಡಿದ್ದೇನೆ, ಕಾನೂನು ತನ್ನ ಕೆಲಸ ಮಾಡಲಿದೆ. ಸಿಡಿ ಹಿಂದೆ ಕಾಂಗ್ರೆಸ್ ನಾಯಕರು ಇಲ್ಲ, ಸಿಡಿ ವಿಚಾರ ಕೀಳು ಮಟ್ಟದ್ದು, ವೈಯುಕ್ತಿಕ ಕೇಸ್, ಹನಿಟ್ರ್ಯಾಪ್ ಮಾಡೋದು ಕೀಳು ಮಟ್ಟದ ನಡೆ. ಇಂಥ ಕೀಳು ಮನಸ್ಥಿತಿಯಿಂದ ಹೊರ ಬರಬೇಕಿದೆ ಎಂದರು.
ರಾಜಕಾರಣದಲ್ಲಿ ಟೀಕೆ ಟಿಪ್ಪಣೆ, ಆರೋಪ ಪ್ರತ್ಯಾರೋಪ ಮಾಡಲಿ. ಆದರೆ ಲೈಂಗಿಕ ಹಗರಣದ ಕೃತ್ಯಗಳ ಸಿ.ಡಿ., ಪೆನ್‍ಡ್ರೈವ್ ನಂಥ ಕೃತ್ಯಗಳು ನಿಲ್ಲಬೇಕು. ಬದಲಾಗಿ ಅಭಿವೃದ್ಧಿ ವಿಷಯದ ಮೇಲೆ ಚರ್ಚೆ, ಟೀಕೆ, ಆರೋಪ ಮಾಡಲಿ ಎಂದರು.
ಪ್ರಜ್ವಲ್ ರೇವಣ್ಣ ಗಂಭೀರ ಪ್ರಕರಣವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಖಂಡಿತಾ ಇದು ಪರಿಣಾಮ ಬೀರಲಿದೆ. ಇಂಥ ಕೆಲಸ ಮಾಡಲು ಯಾರೂ ಹೇಳಿಲ್ಲ, ಪ್ರಜ್ವಲ್ ತಂದೆ ತಾಯಿಯೂ ಈ ಬಗ್ಗೆ ಬುದ್ದಿವಾದ ಹೇಳಬೇಕಿತ್ತು ಎಂದರು.