Advertisement
ಕಲ್ಲಿನ ಗೋಡೆಯ ಬಲಾಬಲ ಒಂದು ಕಲ್ಲಿನ ಗೋಡೆ ನೋಡಲು ಸದೃಢವಾಗಿದ್ದರೂ ಅದರ ಸರಾಸರಿ ಭಾರ ಹೊರುವ ಸಾಮರ್ಥ್ಯ ಅಷ್ಟೇನೂ ಗಟ್ಟಿಮುಟ್ಟಾಗಿರದ ಇಟ್ಟಿಗೆ ಗೋಡೆಗಳಿಗಿಂತ ಹೆಚ್ಚೇನೂ ಇರುವುದಿಲ್ಲ.ಇದನ್ನು ನಂಬಲು ಕಷ್ಟ ಆದರೂ ಹೀಗಾಗಲು ಮುಖ್ಯ ಕಾರಣ -ನಮಗೆ “ಸೈಝು’ ಕಲ್ಲು. ಅಂದರೆ ಆರೂ ಮುಖವನ್ನು ತಕ್ಕ ಮಟ್ಟಿಗೆ ಸಮತಟ್ಟಾಗಿಸಿದ ಕಲ್ಲುಗಳನ್ನು ಒಂದರ ಮೇಲೆ ಮತ್ತೂಂದನ್ನು ಪೇರಿಸಿ ಇಡಲು ನೋಡಿದರೆ, ನಾಲ್ಕೈದು ಕಲ್ಲುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇಡಲು ಆಗುವುದಿಲ್ಲ. ಕಲ್ಲುಗಳು ಬಲು ಗಡುಸಾಗಿರುವ ಕಾರಣ, ಸೈಝು ಕಲ್ಲುಗಳನ್ನು ಒಂದು ಲೆಕ್ಕದಲ್ಲಿ ಮಾತ್ರ ಉಳಿಸಿ, ಬಳಸಿ, ಸಮತಟ್ಟಾಗಿಸಿ, ಮಿಕ್ಕಂತೆ ಮಟ್ಟವಾಗಿಸುವ ಕ್ರಿಯೆಯನ್ನು ಗಾರೆಗೆ ಬಿಡಲಾಗುತ್ತದೆ. ಈ ಕ್ರಿಯೆಯನ್ನು ಗಾರೆಯವರು ದಪ್ಪ ಪದರವಾಗಿ ಸಿಮೆಂಟ್ ಗಾರೆಯನ್ನು ಸುರಿದು, “ನೇರದಾರ’ದ ಆಧಾರದ ಮೇಲೆ ಒಂದರ ಪಕ್ಕ ಮತ್ತೂಂದನ್ನು ಇಟ್ಟು, ಹದ ನೋಡಿ ಕೂರಿಸುವ ಮೂಲಕ ಆದಷ್ಟೂ ಮಟ್ಟಸವಾಗಿ ಮಾಡುತ್ತಾರೆ. ಹೀಗೆ ಹೆಚ್ಚಾಗಿ ಸಿಮೆಂಟ್ ಗಾರೆಯನ್ನು ಬಳಸುವ ಕಾರಣ, ಗೋಡೆಯ ಬಲವನ್ನು ಈ ಬೆಸೆಯುವ ಪದರವೇ ನಿರ್ಧರಿಸುತ್ತದೆ.
“ಒಂದು ಕಟ್ಟಡದಲ್ಲಿ ನೂರು ಗಟ್ಟಿ ಬೆಸುಗೆ ಜಾಗಗಳಿದ್ದು, ಒಂದು ಮಾತ್ರ ದುರ್ಬಲವಾಗಿದ್ದರೆ, ಕಡೆಗೆ ಆ ಕಟ್ಟಡ ಆ ಒಂದು ದುರ್ಬಲ ಬೆಸುಗೆಯಷ್ಟು ಮಾತ್ರ ಗಟ್ಟಿ’ ಎಂದು ಹೇಳಲಾಗುತ್ತದೆ. ಹಾಗಾಗಿ, ಕಲ್ಲುಗಳು ಎಷ್ಟೇ ಗಟ್ಟಿಮುಟ್ಟಾಗಿದ್ದರೂ, ಅವುಗಳನ್ನು ಕಟ್ಟಲು ಬಳಸುವ ಸಿಮೆಂಟ್ ಗಾರೆಯೇ ಅದರ ಒಟ್ಟಾರೆ ಬಲಾಬಲವನ್ನು ನಿರ್ಧರಿಸುವುದರಿಂದ, ನಾವು ಕಲ್ಲುಗಳ ಮೇಲೆ ವಿಶೇಷ ವ್ಯಾಮೋಹ ಹೊಂದುವ ಅಗತ್ಯ ಇಲ್ಲ. ನಾವು ಬಳಸುವ ಸಾಮಾನ್ಯ ಇಟ್ಟಿಗೆ ಗೋಡೆಗಳೂ ಕೂಡ ಸರಿಯಾಗಿ ಕ್ಯೂರ್ ಮಾಡಿ, ಬಾಂಡ್ – ಇಟ್ಟಿಗೆಗಳನ್ನು “ನಾಟು ಪಾಟು ‘ ಮಾದರಿಯಲ್ಲಿ ಬೆಸೆಯುವಂತೆ ಕಟ್ಟಿದರೆ, ಸದೃಢ ಕಟ್ಟಡ ನಮ್ಮದಾಗುತ್ತದೆ. ಕಲ್ಲಿಗೆ ಹೋಲಿಸಿದರೆ, ಇಟ್ಟಿಗೆಯನ್ನು ಸುಲಭದಲ್ಲಿ ಉಪಯೋಗಿಸಬಹುದು. ಗಾರೆಯವರು ಉಪಯೋಗಿಸುವ ಕರ್ನೆಯಿಂದಲೇ ಬೇಕಾದರೆ ಇಟ್ಟಿಗೆಯನ್ನು ಅರ್ಧಕ್ಕೆ ಒಡೆಯಬಹುದು. ಆದರೆ, ಕಲ್ಲನ್ನು ಒಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಉಳಿ ಸುತ್ತಿಗೆಯೇ ಬೇಕಾಗುತ್ತದೆ. ಇಟ್ಟಿಗೆಯಾದರೆ ಇದೇ ರೀತಿಯಲ್ಲಿ ಒಡೆಯುತ್ತದೆ ಎಂದು ಎದುರು ನೋಡಬಹುದು. ಆದರೆ ಕಲ್ಲಿಗೆ ಏಟು ಹಾಕಿದರೆ, ಅದು ಹೀಗೆಯೇ ಒಡೆಯುತ್ತದೆ ಎಂದು ಹೇಳಲಾಗುವುದಿಲ್ಲ. ಕಲ್ಲು ಕಟ್ಟಡಗಳಲ್ಲಿ ಒಂದು ರಾಶಿ ತಾಜ್ಯ ತುಂಡುಗಳು ಶೇಖರಗೊಳ್ಳುತ್ತವೆ. ಕೋಟೆ ಗೋಡೆಗಳ ಲೆಕ್ಕಾಚಾರ ಒಂದೊಂದು ಕಲ್ಲು ಕೂಡ ಎರಡು ಮೂರು ಅಡಿ ಅಗಲ, ಹಾಗೂ ಎತ್ತರ ಇದ್ದು ಮೂರು ನಾಲ್ಕು ಅಡಿ ಉದ್ದವಿರುತ್ತವೆ. ಇವುಗಳ ಭಾರ ಅರ್ಧದಿಂದ ಒಂದು ಟನ್ ಇರುತ್ತದೆ. ಇವುಗಳನ್ನು ಕೈಯಿಂದ ಎತ್ತಿ ಇಡುವುದು ಅಸಾಧ್ಯ. ವಿಶೇಷ ಸಲಕರಣೆ, ಯಂತ್ರ ಹಾಗೂ ಆನೆ ಎತ್ತುಗಳಂಥ ಬಲಶಾಲಿ ಪ್ರಾಣಿಗಳನ್ನು ಬಳಸಿ, ಸಾವಿರಾರು ಜನ ವರ್ಷಗಟ್ಟಲೆ, ಶ್ರಮಿಸಿ ಕಟ್ಟಲಾಗುತ್ತದೆ. ಹಿಂದೆಲ್ಲಾ ಗೋಡೆಗಳನ್ನು ಕಟ್ಟಲು ಸಾಮಾನ್ಯವಾಗಿ ಸುಣ್ಣದ ಗಾರೆಯನ್ನೂ ಬಳಸದೇ ಅತಿ ಸೂಕ್ಷ್ಮ ರೀತಿಯಲ್ಲಿ ಒಂದು ಕಲ್ಲಿಗೆ ಮತ್ತೂಂದು ಬೆಸೆಯುವಂತೆ ಮಾಡಲಾಗುತ್ತಿತ್ತು. ಈ “ಪೇಪರ್ ಜಾಯಿಂಟ್’ ಗೋಡೆಗಳ ಕಲ್ಲುಗಳ ಮಧ್ಯೆ ಕೇವಲ ಒಂದು ಪೇಪರ್ ದಪ್ಪ ಸಂದಿ ಕೆಲವೆಡೆ ಇದ್ದು, ಮಿಕ್ಕಂತೆ ಕಲ್ಲಿಗೆ ಕಲ್ಲೇ ಬೆಸೆದು ಕೊಂಡಿರುತ್ತದೆ. ಹಾಗಾಗಿ, ಕಲ್ಲುಗಳೇ ಎಲ್ಲ ಭಾರವನ್ನೂ ಹೊರುವುದರಿಂದ, ಈ ಮಾದರಿಯ ಗೋಡೆಗಳು ಇಟ್ಟಿಗೆ ಗೋಡೆಗಳಿಗೆ ಹೋಲಿಸಿದರೆ ನೂರು ಪಟ್ಟು ಹೆಚ್ಚು ಸದೃಢ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ನಾವು ನಮ್ಮ ಮನೆಗಳಿಗೆ ಈ ಮಾದರಿಯ ಕಲ್ಲು ಗೋಡೆಗಳನ್ನು ಬಳಸಲು ದುಬಾರಿ ಆಗುವುದರ ಜೊತೆಗೆ ಇತರೆ ತೊಂದರೆಗಳನ್ನೂ ಎದುರಿಸ ಬೇಕಾಗುತ್ತದೆ. ಹಾಗಾಗಿ, ಸಾಮಾನ್ಯ ಮನೆಗಳಿಗೆ ಈ ಕೋಟೆ ಗೋಡೆ ಮಾದರಿಯನ್ನು ಬಳಸುವುದಿಲ್ಲ.
Related Articles
ದುಬಾರಿ ಖರ್ಚಿನ ಕೆಲಸ
ಮನೆ ಕಟ್ಟಲು ಬಳಸುವ ಪ್ರತಿ ವಸ್ತುವಿಗೂ ಒಂದಲ್ಲೊಂದು ಬಲ ಇದ್ದ ಹಾಗೆಯೇ ದೌರ್ಬಲ್ಯವೂ ಇರುತ್ತದೆ. ಭೂಮಟ್ಟದ ಕೆಳಗೆ ಇಟ್ಟಿಗೆ ಗೋಡೆಯ ಬಳಕೆಗಿಂತ ಕಲ್ಲಿನ ಗೋಡೆಯ ಪಾಯ ಹೆಚ್ಚು ಸದೃಢವಾಗಿರುತ್ತದೆ. ಇಟ್ಟಿಗೆಯಲ್ಲಿ ಸಣ್ಣಸಣ್ಣ ರಂಧ್ರಗಳಿದ್ದು, ಇವು ನೀರನ್ನು ಹೀರಿಕೊಳ್ಳುವುದರ ಜೊತೆಗೆ ಗಿಡ ಮರದ ಬೇರಿಗೆ ಸುಲಭದಲ್ಲಿ ನುಸುಳಲು ಅನುವು ಮಾಡಿ ಕೊಡುತ್ತವೆ. ಆದರೆ, ಕಲ್ಲುಗಳಲ್ಲಿ ಈ ಮಾದರಿಯವಾಗಿರದೆ, ನೀರು ಕುಡಿಯುವುದು ತೀರ ಕಡಿಮೆ, ಇನ್ನು ಗಿಡ ಮರದ ಬೇರುಗಳಿಗೂ ಒಳ ನುಸುಳಲು ಸುಲಭದಲ್ಲಿ ಸಾಧ್ಯ ಆಗುವುದಿಲ್ಲ. ಇಲಿ ಹೆಗ್ಗಣಗಳಿಗೂ ಕಲ್ಲಿನ ಗೋಡೆ-ಪಾಯಗಳಲ್ಲಿ ಬಿಲ ಕೊರೆಯುವುದು ತುಂಬ ಕಷ್ಟದ ಕೆಲಸ. ಇಟ್ಟಿಗೆ ಗೋಡೆಗಳು ಕಾಲಾಂತರದಲ್ಲಿ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ಕಲ್ಲು ಗೋಡೆಗಳು ಹೆಚ್ಚು ಹಾನಿಗೆ ಒಳಪಡುವುದಿಲ್ಲ. ಭೂಮಟ್ಟದ ಮೇಲೆ ಒಂದೇ ಗಾತ್ರದ ಇಟ್ಟಿಗೆಗಳನ್ನು ಬಳಸಿ ಸುಲಭದಲ್ಲಿ ಕಟ್ಟಬಹುದಾದ ಗೋಡೆಗಳ ಸೌಂದರ್ಯ ವಿಶೇಷವಾಗಿರುತ್ತದೆ. ಈಗ ಲಭ್ಯವಿರುವ ಕಲ್ಲುಗಳು ಗಾತ್ರದಲ್ಲಿ ಹೆಚ್ಚಾ ಕಡಿಮೆ ಇರುವುದರಿಂದ, ಗೋಡೆಯನ್ನು ಸುಂದರವಾಗಿ ಕಟ್ಟಲು ವಿಶೇಷ ಪರಿಣಿತಿ ಬೇಕಾಗುತ್ತದೆ ಹಾಗೂ ಇದು ದುಬಾರಿಯಾಗುತ್ತದೆ.
Advertisement
ಮನೆ ಕಟ್ಟುವಾಗ ವಿವಿಧ ರೀತಿಯ ವಸ್ತುಗಳನ್ನು ಬಳಸಲಾಗುತ್ತದೆ. ಒಂದೊಂದರ ಬಲಾಬಲದಲ್ಲೂ ವಿಭಿನ್ನತೆ ಇದ್ದು, ಅವುಗಳನ್ನು ಅರಿತು ಬಳಸಿದರೆ ಮನೆ ಸದೃಢವಾಗಿ ಮೂಡಿಬರುತ್ತದೆ. ಇದರಿಂದ, ನಮ್ಮ ಜೇಬಿಗೂ ಹೆಚ್ಚು ಹೊರೆ ಎಂದೆನಿಸುವುದಿಲ್ಲ.
ಹೆಚ್ಚಿನ ಮಾಹಿತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್