Advertisement
ನಮ್ಮ ಅಪಾರ್ಟ್‌ಮೆಂಟ್ ತಾರಸಿಯಲ್ಲಿ ಧಿಮಿ ಧಿಮಿ ಸದ್ದು ಕಿವಿಗಡಚಿಕ್ಕುತ್ತಿತ್ತು. ಏನಪ್ಪಾ ಅಂತ ನೋಡಿದರೆ, ಮಕ್ಕಳ ಆಟದ ಹುರುಪು. ರಾತ್ರಿ ಹತ್ತಾದರೂ ಕಣ್ಣಿಗೆ ಜೋಂಪು ಹತ್ತದೇ, ಚಿಲುಮೆಯಾಗಿದ್ದರು. ಮಕ್ಕಳ ದಾಂಧಲೆಗೆ ತಲೆನೋವು ಬಂದು ಒಂದು ಕ್ಷಣ ಮಕ್ಕಳಿಗೆ ಬೈದು ಬರೋಣ ಅನ್ನಿಸಿತು. ಆಮೇಲೆ ನಿಧಾನವಾಗಿ ಯೋಚಿಸಿದೆ. ಅವರಿಗೆ ಆಡಲು ಜಾಗವಾದರೂ ಎಲ್ಲಿದೆ?
Related Articles
Advertisement
ವೈವಿಧ್ಯಮಯ ಆಟಗಳು: ಆಡಲು ಅನೇಕ ಆಯ್ಕೆಗಳಿರುತ್ತಿದ್ದವು. ಕುಂಟೇಬಿಲ್ಲೆ, ಜೂಟಾಟ, ಕಣ್ಣಾಮುಚ್ಚಾಲೆ ಲಗೋರಿ, ಗುಲ್ಟೋರಿಯಾ, ಐಸ್‌ಪೈಸ್ ಇನ್ನೂ ಎಷ್ಟೋ ಆಟಗಳನ್ನು ನಾವು ಆಡುತ್ತಿದ್ದೆವು. ಐಸ್‌ಪೈಸ್ ಆಡುವಾಗ ಚಿಕ್ಕ ತಮ್ಮನನ್ನು ಬಚ್ಚಿಡಲು ಯಾವ ಜಾಗವೂ ಹೊಳೆಯದೆ ಗೋಣಿಚೀಲದಲ್ಲಿ ಹಾಕಿ ಕಟ್ಟಿ, ಅವನಿಗೆ ಉಸಿರಾಡಲಿಕ್ಕೂ ಆಗದೇ ಒದ್ದಾಡಿ ಅಮ್ಮ ಬಂದು ಎಲ್ಲರಿಗೂ ಬಾರಿಸಿ,
ಅವನನ್ನು ಚೀಲದಿಂದ ಹೊರಗೆಳೆದದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಕ್ಕಪಕ್ಕದ ಮನೆಗಳಲ್ಲಿ ಅವರ ನೆಂಟರ ಮಕ್ಕಳು ಬಂದರೂ ನಮಗೆ ಸಂಭ್ರಮ. ಅವರೂ ನಮಗೆ ಫ್ರೆಂಡ್ಸ್. ನಮಗಿದ್ದ ಒಂದೇ ಕಂಡೀಷನ್ ಎಂದರೆ ಮಧ್ಯಾಹ್ನ ಬಿಸಿಲಿನಲ್ಲಿ ಹೊರಗೆ ಆಡಬಾರದು ಎನ್ನುವುದೊಂದೇ. ಅಂಥಾ ಸಮಯದಲ್ಲಿ ನಮ್ಮ ನೆರವಿಗೆ ಬರುತ್ತಿದ್ದಿದ್ದು ಚೌಕಾಬಾರ, ಕೇರಂ, ಪಗಡೆ, ಕವಡೆ ಆಟಗಳು.
ಆಟವೆಂದರೆ ಬರೀ ಆಟವಲ್ಲ!: ಆಡುವುದರಲ್ಲಿ ನಾವೇನೋ ಬ್ಯುಸಿಯಾಗಿರುತ್ತಿದ್ದೆವು. ಅತ್ತ ಮನೆಯವರು ಆಟದ ಮಧ್ಯೆ ತಿಂಡಿ ಸರಬರಾಜು ಮಾಡುತ್ತಿದ್ದರು. ಮಧ್ಯೆ ಮಧ್ಯೆ ಬಾಯಾಡಿಸಲು ಅಮ್ಮ ಚಿಕ್ಕಮ್ಮ ಅಜ್ಜಿ ಮಾಡಿರುತ್ತಿದ್ದ ಕುರುಕಲು ತಿಂಡಿ, ಹೊಸರುಚಿಗೆ ನಾವೇ ಮೊದಲ ಬಲಿ. ದಿನಕ್ಕೊಂದು ಬಗೆಯ ಪಾನಕಗಳ ಸೇವೆ.
ಸಂಜೆ ನಾಲ್ಕರ ನಂತರ ಬೀದಿಗೆ ಲಗ್ಗೆ ಹಾಕಿದರೆ ಮನೆಗೆ ಮರಳುವುದು ರಾತ್ರಿ ಎಂಟಕ್ಕೆ. ಮಕ್ಕಳನ್ನು ಗುಂಡಗೆ ಕೂಡಿಸಿ ಅಮ್ಮನೋ ಚಿಕ್ಕಮ್ಮನೋ ದೊಡ್ಡ ಡಬರಿಯಲ್ಲಿ ಹುಳಿ ಅನ್ನ ಕಲೆಸಿ ಧಾರಾಳವಾಗಿ ತುಪ್ಪ ಹಾಕಿ ಕೈತುತ್ತು ಹಾಕುತ್ತಿದ್ದರೆ ಎಷ್ಟು ತುತ್ತು ಹೊಟ್ಟೆಯೊಳಗೆ ಇಳಿಯುತ್ತಿತ್ತೋ ಲೆಕ್ಕವೇ ಇಲ್ಲ. ಮಧ್ಯೆ ಮಧ್ಯೆ ಅಂತ್ಯಾಕ್ಷರಿ ಬೇರೆ, ನೆಂಚಿಕೊಳ್ಳಲು ಉಪ್ಪಿನಕಾಯಿ, ಸಂಡಿಗೆ. ಯಾರಿಗುಂಟು ಇಂಥ ಸೌಭಾಗ್ಯ!
ರಜೆ ಮುಗಿದಾಗ ಸಜೆ…: ರಜಾದಿನಗಳು ಮುಗೀತಾ ಬಂದಂತೆ ನಮ್ಮನ್ನು ಬೇಸರ ಆವರಿಸಿಕೊಳ್ಳುತ್ತಿತ್ತು. ನಾವು ನೆಂಟರ ಊರಿಗೆ ಹೋಗಿದ್ದರೂ, ಅಥವಾ ನೆಂಟರು ನಮ್ಮಲ್ಲಿಗೆ ಬಂದಿದ್ದರೂ ಬೀಳ್ಕೊಡುವ ಸಮಯ ತುಂಬಾ ಭಾವನಾತ್ಮಕವಾಗಿರುತ್ತಿತ್ತು. ಇನ್ನು ದೊಡ್ಡ ರಜೆಗೆ ಕನಿಷ್ಠ ಪಕ್ಷ 6 ತಿಂಗಳಾದರೂ ಕಾಯಬೇಕು.
ಹೀಗಾಗಿ ಕಸಿನ್‌ಗಳಿಗೆ ವಿದಾಯ ಹೇಳಬೇಕಲ್ಲ ಎಂಬ ಸಂಕಟ ಮುಖವನ್ನು ಚಿಕ್ಕದು ಮಾಡುತ್ತಿತ್ತು. ನೆಂಟರು ಹೊರಟಾಗ ಅಮ್ಮ ಮಾಡುತ್ತಿದ್ದ ಔತಣದ ಅಡುಗೆಯ ಗಮ್ಮತ್ತು. ನೆಂಟರು ಹೊರಡುವ ಸಮಯದಲ್ಲಿ ಮಕ್ಕಳ ಕೈಯಲ್ಲಿಡುತ್ತಿದ್ದ 5, 10 ರೂ.ಗಳ ನೋಟು. ಆ ಸಂತೋಷ ಈಗಿನ ಮಕ್ಕಳಿಗಿಲ್ಲವಲ್ಲ ಅಂತ ನೆನೆದಾಗ ಮನಸ್ಸು ಆದ್ರìವಾಗುತ್ತದೆ.
ಕ್ಯಾಂಪ್ ಆದವೋ, ಎಲ್ಲ ಕ್ಯಾಂಪ್ ಆದವೋ!: ಹಿಂದೆಲ್ಲಾ ಅಮ್ಮಂದಿರು ಮನೆಯಲ್ಲೇ ಇರುತ್ತಿದ್ದರು. ತಾಳ್ಮೆಯಿಂದ ಮಕ್ಕಳು ಕೇಳಿದ್ದಕ್ಕೆಲ್ಲಾ ಉತ್ತರಿಸುತ್ತಿದ್ದರು, ಕತೆ ಹೇಳುತ್ತಿದ್ದರು. ಈಗಿನ ಅವ್ವಂದಿರು ಮುಂದುವರಿದಿರುವವರು. ಮನೆಯಲ್ಲಿ ಉಳಿಯುವುದನ್ನು ಇಷ್ಟ ಪಡದಿರುವವರು. ಇವರ ಬಳಿ ಇರುವ ಸಮಯವೂ ಕಡಿಮೆ, ತಾಳ್ಮೆಯೂ ಕಡಿಮೆ. ಏನಾದರೂ ಕೇಳಿದರೆ ಹೋಗೋ ಗೂಗಲ್‌ನಲ್ಲಿ ನೋಡು ಎನ್ನುತ್ತಾರೆ. ಮಕ್ಕಳನ್ನು ನೆಂಟರ ಮನೆಗೆ ಕಳಿಸುವ ಪರಿಪಾಠ ಈಗಿಲ್ಲ. ಬೇಸಿಗೆ ರಜೆ ಬರುತ್ತಿದ್ದಂತೆ ಮಕ್ಕಳನ್ನು ಶಿಬಿರಕ್ಕೆ ಹಾಕುತ್ತಾರೆ.
ಇದೂ ಒಂಥರಾ ಸ್ಕೂಲಿದ್ದ ಹಾಗೆಯೇ. ಇನ್ನು ಮಕ್ಕಳಿಗೆ ಸ್ವತ್ಛಂದ ವಾತಾವರಣ ಎಲ್ಲಿ ಸಿಗಬೇಕು? ಮಕ್ಕಳು ಸಹಜವಾಗಿ ತಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಬೆರೆತಾಗ ಸಿಗುವ ಶಿಕ್ಷಣ ನಾಲ್ಕು ಗೋಡೆಗಳ ನಡುವೆ ಕಲಿಯುವುದಕ್ಕಿಂತ ಶ್ರೇಷ್ಠವಾದುದು ಎಂಬ ನಿಜವನ್ನು ಪಾಲಕರು ಅರಿಯಬೇಕಾದ ಅಗತ್ಯವಿದೆ. ಇನ್ನು ಮುಂದಾದರೂ ಮಕ್ಕಳಿಗೆ ತಮ್ಮಿಷ್ಟದಂತೆ ಆಡುವ, ಓರಗೆಯವರೊಂದಿಗೆ ಬೆರೆಯುವ ಸ್ವಾತಂತ್ರ್ಯ ಸಿಗಲಿ.
* ವೀಣಾ ರಾವ್