Advertisement
ರಾಹುಲ್ ಗಾಂಧಿ ಅಮೇಠಿ ಬಳಿಕ ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದಾರೆ ಎಂಬುದು ಸುದ್ದಿಯಾಗುವ ಮೊದಲು ಎರಡು ಕಾರಣಕ್ಕೆ ಇತ್ತೀಚೆಗೆ ಸುದ್ದಿಯಾಗಿತ್ತು. ಒಂದನೆಯದು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಹವೀಲ್ದಾರ್ ವಿವಿ ವಸಂತ್ ಕುಮಾರ್ ಇಲ್ಲಿನವರು. ಜತೆಗೆ ನಕ್ಸಲ್ ನಿಗ್ರಹ ಪಡೆ ನಕ್ಸಲ್ ಸಿಪಿ ಜಲೀಲ್ ಎಂಬಾತನನ್ನು ಎನ್‌ಕೌಂಟರ್ ನಡೆಸಿದ್ದಕ್ಕಾಗಿ.
ವಯನಾಡ್ ಎನ್ನುವುದು ಪ್ಲಾಂಟೇಷನ್ ಬೆಳೆಗಳಿಗೆ ಪ್ರಸಿದ್ಧವಾಗುವ ಮೊದಲು ಭತ್ತದ ಬೆಳೆ ವ್ಯಾಪಕವಾಗಿತ್ತು. “ವಾಯುಲ್ ನಾಡು’ (ಭತ್ತದ ನಾಡು ಎಂದು ತಮಿಳು ಮತ್ತು ಮಲಯಾಳದಲ್ಲಿ) ಎಂಬುದು ವಯನಾಡು ಆಯಿತು. 2008ರಲ್ಲಿ ಇಲ್ಲಿ ಲೋಕಸಭಾ ಕ್ಷೇತ್ರವನ್ನು ಸೃಷ್ಟಿಸಲಾಗಿದೆ. ಮಲ್ಲಪುರ, ಕೋಯಿಕ್ಕೋಡ್‌ಗಳ ಭಾಗ ಮತ್ತು ವಯನಾಡ್ ಸೇರಿ ವಯನಾಡ್ ಲೋಕಸಭಾ ಕ್ಷೇತ್ರವಾಗಿದೆ. ವಯನಾಡ್‌ನಲ್ಲಿ 13.25 ಲಕ್ಷ ಮತದಾರರಿದ್ದು, ಇವರಲ್ಲಿ 5.81 ಲಕ್ಷದಷ್ಟು ಮತದಾರರು ವಯನಾಡ್ ಜಿಲ್ಲೆಗೆ ಸೇರಿದವರು. ಉಳಿದ 5.79 ಲಕ್ಷದಷ್ಟು ಮಂದಿ ಈ ಕ್ಷೇತ್ರದ ಭಾಗವಾಗಿರುವ ಮಲಪ್ಪುರಂ ಜಿಲ್ಲೆಗೆ ಸೇರಿದವರು. ಕಾಂಗ್ರೆಸ್ ಕೋಟೆ
ವಯನಾಡ್ ಮೂಲತಃ ಕಾಂಗ್ರೆಸ್ ಭದ್ರಕೋಟೆ. ಆದರೆ ಕಳೆದ ಚುನಾವಣೆಯಲ್ಲಿ ಕೋಟೆಯ ಕಲ್ಲುಗಳು ಅಲುಗಾಡಗೊಡಗಿತ್ತು. ವಯನಾಡ್ ಮೊದಲ ಚುನಾವಣೆ ವೇಳೆ ಕಾಂಗ್ರೆಸ್ ಎಂಐ ಶಾನಾವಾಸ್ ಅವರು 1.53 ಲಕ್ಷ ಮತಗಳಿಂದ ಗೆದ್ದಿದ್ದರು. 2014ರಲ್ಲಿ ಈ ಅಂತರ ತುಂಬ ಕಡಿಮೆಯಾಗಿತ್ತು. ಈ ಸಂದರ್ಭದಲ್ಲಿ ಅವರು ಸಿಪಿಐನ ಸತ್ಯನ್ ಮೊಕೇರಿ ಅವರನ್ನು ಸೋಲಿಸಿದ್ದರೂ, ಗೆಲುವಿನ ಅಂತರ 20,870 ಮತಗಳಿಗೆ ಇಳಿದಿತ್ತು.
Related Articles
ವಯನಾಡ್ ಲೋಕಸಭಾ ಕ್ಷೇತ್ರವು ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇದರಲ್ಲಿ ಮೂರು ಮೂರು ವಿಧಾನಸಭಾ ಕ್ಷೇತ್ರಗಳು ವಯನಾಡ್ ಜಿಲ್ಲೆಯಲ್ಲಿವೆ. ಕಲ್ಪೆಟ್ಟಾ, ಸುಲ್ತಾನ್ ಬತ್ತೇರಿ (ಎಸ್‌ಟಿ ಮೀಸಲು) ಮತ್ತು ಮಾನತ್‌ವಾಡಿ (ಎಸ್‌ಟಿ ಮೀಸಲು) ಗಳು ವಯನಾಡಿನದ್ದು. ತಿರುವಾಂಬಾಡಿ ವಾಂಡೂರು (ಎಸ್‌ಸಿ ಮೀಸಲು), ಎರ್ನಾಡ್ ಕ್ಷೇತ್ರಗಳು ಮಲಪ್ಪುರಂ ಜಿಲ್ಲೆಗೆ ಸೇರಿದವು. ಇಡೀ ಕ್ಷೇತ್ರದಲ್ಲಿ ಶೇ.49.5ರಷ್ಟು ಹಿಂದೂಗಳಿದ್ದರೆ (ಎಸ್‌ಟಿ ಶೇ.12 ಮತ್ತು ಎಸ್‌ಸಿ ಶೇ.4), ಮುಸಲ್ಮಾನರು ಶೇ.28.8 ಮತ್ತು ಕ್ರೈಸ್ತರು ಶೇ.21.5ರಷ್ಟಿದ್ದಾರೆ.
Advertisement
ಪ್ರದೇಶ ಹೇಗಿದೆ?ವಯನಾಡ್ ಕ್ಷೇತ್ರ ಕರ್ನಾಟಕ, ತಮಿಳುನಾಡು ಮಧ್ಯೆ ಇರುವ ಒಂದು ಪ್ರದೇಶ. ಕೋಯಿಕ್ಕೋಡ್ ಅತ್ಯಂತ ಸನಿಹದ ವಿಮಾನ ನಿಲ್ದಾಣ. ಊಟಿ ಮತ್ತು ಮೈಸೂರಿಗೆ ಇಲ್ಲಿಂದ 100 ಕಿ.ಮೀ. ದೂರ. ಕೋಯಿಕ್ಕೋಡ್, ಕೊಳ್ಳೇಗಾಲ ರಾ.ಹೆ. 766 ರಸ್ತೆ ಬಂಡೀಪುರ-ವಯನಾಡ್ ಮೂಲಕ ಹಾದು ಹೋಗುತ್ತದೆ. ವನ್ಯಪ್ರಾಣಿಗಳ ಅವ್ಯಾಹತ ಸಾವಿನಿಂದಾಗಿ ಈ ರಸ್ತೆಯಲ್ಲೇ ರಾತ್ರಿ ಸಂಚಾರಕ್ಕೆ ಕರ್ನಾಟಕ ಸರಕಾರ 2009ರಿಂದ ನಿಷೇಧ ಹೇರಿದೆ. ಈ ನಿಷೇಧ ತೆಗೆಸಲು ಕೇರಳ ಇನ್ನಿಲ್ಲದ ಲಾಬಿಗಳನ್ನು ಮಾಡುತ್ತಿದೆ.