Advertisement

ಇಲ್ಲೇ ವೈ-ಫೈ ಇಲ್ಲ ಅಂದ್ರೆ ಏನರ್ಥ?

11:35 AM Nov 29, 2017 | Team Udayavani |

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಒಳಗೊಂಡಂತೆ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು, ಬಸ್‌ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಮೇಯರ್‌ ಆರ್‌.ಸಂಪತ್‌ರಾಜ್‌ ಪಾಲಿಕೆಯ ಅಧಿಕಾರಿಗಳಿಗೆ ಆದೇಶಿಸಿದರು. 

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ರಾಮನಗರ, ಚನ್ನಪಟ್ಟಣ ಸೇರಿದಂತೆ ಹಲವು ನಗರಗಳಲ್ಲಿ ವೈ-ಫೈ ಸೇವೆ ಒದಗಿಸಲಾಗಿದೆ. ಆದರೆ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂಬ ಕೀರ್ತಿ ಹೊಂದಿರುವ ಬೆಂಗಳೂರಲ್ಲೇ ಈ ರೀತಿಯ ಸೇವೆ ಲಭ್ಯವಿಲ್ಲ ಎಂದರೆ ಏನರ್ಥ?

ಎಂದು ಅಸಮಾಧಾನ ವ್ಯಕ್ತಪಡಿಸಿದ ಮೇಯರ್‌, ಕೂಡಲೇ ನಗರದ ಪ್ರಮುಖ ಭಾಗಗಳಲ್ಲಿ ವೈ-ಫೈ ಸೇವೆ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳಿಗೆ ಆದೇಶಿಸಿದರು.

ನಿರ್ಭಯಾ ನಿಧಿ ಬಳಸಿ ಸಿಸಿಟಿವಿ: ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸುರಕ್ಷತಾ ಯೋಜನೆ ಜಾರಿಗೊಳಿಸಿದ್ದು, ಯೋಜನೆಗೆ “ನಿರ್ಭಯಾ ನಿಧಿ’ಯಿಂದ ಅನುದಾನ ನೀಡಲಾಗುತ್ತದೆ. ಅದರಂತೆ ಇತ್ತೀಚೆಗೆ ದೇಶದ 8 ಪ್ರಮುಖ ನಗರಗಳೊಂದಿಗೆ ಸಭೆ ನಡೆಸಿ, ಮಹಿಳಾ ಸುರಕ್ಷತಾ ದೃಷ್ಟಿಯಿಂದ ಜಾರಿಗೊಳಿಸುವ ಯೋಜನೆಗಳ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷತೆಗೆ ಕೈಗೆತ್ತಿಕೊಳ್ಳುವ ಯೋಜನೆಗಳ ವರದಿಯನ್ನು 30 ದಿನಗಳೊಳಗೆ ಕೇಂದ್ರಕ್ಕೆ ಸಲ್ಲಿಸಬೇಕಿದ್ದು, ಯೋಜನೆಯಗಳ ಅನುಷ್ಠಾನಕ್ಕೆ ಅಗತ್ಯ ಅನುದಾನ ನಿರ್ಭಯಾ ನಿಧಿಯಿಂದ ದೊರೆಯಲಿದೆ. ಈ ಹಣ ಬಳಸಿ ನಗರದ 1400 ಕಿ.ಮೀ ಉದ್ದದ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸುವ ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

Advertisement

ಅನಧಿಕೃತ ಅಪಾರ್ಟ್‌ಮೆಂಟ್‌ಗಳು: ನಗರದಲ್ಲಿ ಅನಧಿಕೃತವಾಗಿ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿದ್ದು, “ಬಿ’ ಖಾತೆ ಇದೆ ಎಂದು ಜಾಹೀರಾತು ಪ್ರಕಟಿಸಿ 200, 300, 500 ಮನೆಗಳಿರುವ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಆದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ಸದಸ್ಯ ಎನ್‌.ನಾಗರಾಜ್‌ ಆರೋಪಿಸಿದರು. 

ಮಹಿಳಾ ಸ್ನೇಹಿ ಮೇಯರ್‌: ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ಎಲ್ಲ ಪಕ್ಷಗಳ ಮಹಿಳಾ ಪಾಲಿಕೆ ಸದಸ್ಯರಿಗೆ ಮಾತನಾಡಲು ಹೆಚ್ಚು ಅವಕಾಶ ನೀಡಿದರು. ಮೇಯರ್‌ ಅವರ ಈ ನಡೆಗೆ ಹಲವು ಮಹಿಳಾ ಸದಸ್ಯರು ಅಭಿನಂದನೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದರು. 

ಜಿಎಸ್‌ಟಿ ಗೊಂದಲ ಪರಿಹಾರ: ಜಿಎಸ್‌ಟಿ ಜಾರಿಯ ದಿನದಿಂದ ಬಿಬಿಎಂಪಿ ಗುತ್ತಿಗೆದಾರರು ಹಲವಾರು ಗೊಂದಲಗಳನ್ನು ಎದುರಿಸುತ್ತಿದ್ದು, ಶೀಘ್ರವೇ ಅವುಗಳ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಪಾಲಿಕೆಯ ಆಯುಕ್ತರು ಭರವಸೆ ನೀಡಿದರು. ಕಾಂಗ್ರೆಸ್‌ ಸದಸ್ಯ ಶಿವರಾಜು, ಜಿಎಸ್‌ಟಿ ಪ್ರಮಾಣದ ಬಗ್ಗೆ ಗೊಂದಲವಿರುವುದರಿಂದ ಗುತ್ತಿಗೆದಾರರು ಕೆಆರ್‌ಐಡಿಎಲ್‌ ವಹಿಸಿಕೊಂಡಿರುವ ಕಾಮಗಾರಿಗಳನ್ನು ನಿವಹಿಸುತ್ತಿಲ್ಲ.

ಇದರಿಂದಾಗಿ ಹಲವಾರು ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ ಎಂದು ದೂರಿದರು. ಅದಕ್ಕೆ ಉತ್ತರಿಸಿದ ಆಯುಕ್ತ ಮಂಜುನಾಥ ಪ್ರಸಾದ್‌, ಕೆಆರ್‌ಐಡಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಜತೆಗೆ ಈ ಕುರಿತು ಚರ್ಚಿಸಿ ಕೂಡಲೇ ಗೊಂದಲಗಳ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಆರ್‌ಟಿಐ ಹಾಕುವ ಪರಿಸ್ಥಿತಿ ಬಂದಿದೆ: ಬಿಬಿಎಂಪಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಕೋರಲಾಗುತ್ತಿದೆ. ಜನಪ್ರತಿನಿಧಿಗಳಿಗೆ ಪಾಲಿಕೆಯಲ್ಲಿ ಈ ಪರಿಸ್ಥಿತಿಯಿದ್ದರೆ, ಇನ್ನು ಜನಸಾಮಾನ್ಯರ ಪರಿಸ್ಥಿತಿಯೇನು ಎಂದು ಬಿಜೆಪಿ ಸದಸ್ಯ ಗೌತಮ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಘನತ್ಯಾಜ್ಯ ಉಪಕರಕ್ಕೆ ಸಿಗದ ಅನುಮೋದನೆ: ಆಸ್ತಿ ತೆರಿಗೆಯ ಮೇಲೆ ಶೇ.15ರಷ್ಟು ಘನತ್ಯಾಜ್ಯ ನಿರ್ವಹಣಾ ಉಪಕರ ವಿಧಿಸುವ ಪಾಲಿಕೆಯ ಪ್ರಸ್ತಾಪಕ್ಕೆ ಪ್ರತಿಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕೌನ್ಸಿಲ್‌ ಮುಂದೆ ಅನುಮೋದನೆಗೆ ಬಂದ ವಿಷಯವನ್ನು ಮುಂದೂಡಲಾಯಿತು. ರಾಜಸ್ಥಾನ ಮಾದರಿಯಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.15ರಷ್ಟು ಘನತ್ಯಾಜ್ಯ ಉಪಕರ ವಿಧಿಸಲು ಪಾಲಿಕೆ ಮುಂದಾಗಿತ್ತು.

ಆದರೆ, ಇದರಿಂದ ಆಸ್ತಿ ಮಾಲೀಕರಿಗೆ ಹೆಚ್ಚು ಹೊರೆಯಾಗಲಿದೆ ಎಂದು ಬಿಜೆಪಿ ಸದಸ್ಯರು ವಿರೋಧಿಸಿದರಿಂದ ವಿಷಯವನ್ನು ಮುಂದೂಡಲಾಗಿದೆ. ಇದೇ ವೇಳೆ ಆಸ್ತಿ ತೆರಿಗೆ ಮೇಲೆ ಶೇ. 15 ರಷ್ಟು ಘನತ್ಯಾಜ್ಯ ಉಪಕರವನ್ನು ಹೆಚ್ಚಳ ಮಾಡಿರುವ ಸರ್ಕಾರದ ವಿರುದ್ಧ ಬಿಬಿಎಂಪಿ ಬಿಜೆಪಿ ಸದಸ್ಯರು ಕಪ್ಪು ಪಟ್ಟಿ ಧರಿಸಿ ಪಾಲಿಕೆಯ ಕೌನ್ಸಿಲ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕ್ಯಾಮೆರಾ ಕಾವಲಲ್ಲಿ ಹೊಸ ವರ್ಷಾಚರಣೆ: ನಗರದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ನಡೆಯುವ ಹೊಸ ವರ್ಷಾಚರಣೆಯನ್ನು ಸಿಸಿಟಿವಿ ಹಾಗೂ ದ್ರೋಣ್‌ ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಿ, ಆ ದೃಶ್ಯಗಳನ್ನು ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಪ್ರದರ್ಶಿಸುವ ಮೂಲಕ ಅಂದು ಅಹಿತಕರ ಘಟನೆಗಳ ತಡೆಯಲು ಕ್ರಮಕೈಗೊಳ್ಳಬೇಕು ಎಂದು ಜಂಟಿ ಆಯುಕ್ತರಿಗೆ ಮೇಯರ್‌ ಸೂಚಿಸಿದರು.

ಅತ್ಯಾಧುನಿಕ 360 ಡಿಗ್ರಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲು ಅಧಿಕಾರಿಗಳು ಕ್ರಮವಹಿಸಬೇಕು. ಜತೆಗೆ ಸ್ಥಳೀಯ ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಸ್ಥಳಗಳಲ್ಲಿ ಪಾಲಿಕೆಯಿಂದ ಸಿಸಿಟಿವಿ ಕ್ಯಾಮೆರಾ ಹಾಗೂ ಎಲ್‌ಇಡಿ ಸ್ಕ್ರೀನ್‌ ಅಳವಡಿಸಬೇಕು. ಜತೆಗೆ ಅಲ್ಲಲ್ಲಿ ಸಹಾಯ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆದೇಶಿಸಿದರು. 

ಸಿಸಿಟಿವಿ ಇಲ್ಲದಿದ್ದರೆ ವಾಣಿಜ್ಯ ಪರವಾನಗಿ ರದ್ದು: ಮಹಾರಾಷ್ಟ್ರ ಸೇರಿ ದೇಶದ ಕೆಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದ ವಾಣಿಜ್ಯ ಕಟ್ಟಡಗಳಿಗೆ ಪರವಾನಗಿ ನೀಡುವುದಿಲ್ಲ. ಅದೇ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸದ ವಾಣಿಜ್ಯ ಕಟ್ಟಡಗಳು ಹಾಗೂ ವ್ಯಾಪಾರಿಗಳ ಪರವಾನಗಿ ನವೀಕರಣಗೊಳಿಸದಂತೆ ಕ್ರಮಕೈಗೊಳ್ಳಿ ಎಂದು ಮೇಯರ್‌ ಆದೇಶಿಸಿದರು.

ಜಲಮಂಡಳಿ ಕ್ರಮದಿಂದ ಜನರ ಆತಂಕ: ಸ್ವಾಧೀನಾನುಭವ ಪತ್ರ ಸಲ್ಲಿಸದೆ ಇರುವ ಮನೆಗಳಿಗೆ ನೀರು ಹಾಗೂ ಒಳಚರಂಡಿ ಸಂಪರ್ಕ ಕಡಿತಗೊಳಿಸುವುದಾಗಿ ಜಲಮಂಡಳಿ ಸುತ್ತೋಲೆ ಹೊರಡಿಸಿರುವುದಕ್ಕೆ ಪಾಲಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ಸ್ವಾಧೀನಾನುಭವ ಪತ್ರ ಪಡೆಯದ ವಸತಿ ಪ್ರದೇಶದಲ್ಲಿ ಶೇ.50 ಹಾಗೂ ವಸತಿಯೇತ ಪ್ರದೇಶಗಳಲ್ಲಿ ಶೇ.100ರಷ್ಟು ದಂಡ ವಿಧಿಸುತ್ತಿದ್ದು,

ಒಂದೊಮ್ಮೆ ದಂಡ ಪಾವತಿಸದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿರುವುದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ ಎಂದರು. ಮೇಯರ್‌ ಪ್ರತಿಕ್ರಿಯಿಸಿ, ಆದೇಶ ವಾಪಸ್‌ ಪಡೆಯುವ ಸಂಬಂಧ ಕೂಡಲೇ ಜಲಮಂಡಳಿ ಅಧ್ಯಕ್ಷರಿಗೆ ಮನವಿ ನೀಡಲಾಗುವುದು. ಜತೆಗೆ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ 15 ದಿನಗಳಲ್ಲಿ ವಿಶೇಷ ಸಭೆ ಕರೆಯಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next